ಮೃತ ಅಮಾಯಕರು ಹಾಗೂ ಅಪಘಾತವೆಸಗಿದ ಆರೋಪಿ ಸುಹೈಲ್ ಸಜೀವ್ 
ದೇಶ

ಮೂವರು ಅಮಾಯಕರ ಪ್ರಾಣ ತೆಗೆದು ದೌಲತ್ತಿನ ಮಾತುಗಳನ್ನಾಡಿದವನಿಗೆ ಕೇವಲ 36 ದಿನಗಳಲ್ಲೇ ಜಾಮೀನು! Mini Cooper accident

ಆರಂಭದಲ್ಲಿ ಅಂಗಮಾಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಎರ್ನಾಕುಲಂ ಸೆಷನ್ಸ್ ನ್ಯಾಯಾಲಯಗಳು ಸುಹೈಲ್ ಸೇರಿದಂತೆ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದವು. ಬಳಿಕ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತಿರುವನಂತಪುರಂ: ಕೊಚ್ಚಿಯ ನೆಡುಂಬಶ್ಶೇರಿಯಲ್ಲಿ ಸಂಭವಿಸಿದ ಭೀಕರ ಮಿನಿ ಕೂಪರ್ ಕಾರು ಅಪಘಾತದಲ್ಲಿ ( Mini Cooper accident ) ಮೂವರು ಅಮಾಯಕರ ಸಾವಿಗೆ ಕಾರಣನಾಗಿದ್ದ ಮುಖ್ಯ ಆರೋಪಿ ಸುಹೈಲ್ ಸಜೀವ್‌ಗೆ ಜಾಮೀನು ಮಂಜೂರಾಗಿದ್ದು, ಬಂಧನಕ್ಕೊಳಗಾದ ಕೇವಲ 36 ದಿನಗಳಲ್ಲೇ ಇಂದು ಆತ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾನೆ.

ಪ್ರಕರಣದ ಇತರ ಮೂವರು ಆರೋಪಿಗಳಾದ ನಿನವ್, ಅಮೀರ್ ಶಾ ಮತ್ತು ಟಿ. ಜೋಯಲ್​ಗೆ ಹತ್ತು ದಿನಗಳ ಹಿಂದೆಯೇ ನ್ಯಾಯಾಲಯ ಜಾಮೀನು ನೀಡಿತ್ತು. ಅಪಘಾತದ ಸಮಯದಲ್ಲಿ ಇವರು ಕಾರಿನಲ್ಲಿದ್ದರಾದರೂ, ಅವರ ವಿರುದ್ಧ ಬೇರೆ ಯಾವುದೇ ಗಂಭೀರ ಪ್ರಕರಣಗಳಿಲ್ಲ ಎಂಬುದನ್ನು ಗಮನಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದೀಗ ಪ್ರಮುಖ ಆರೋಪಿಯೂ ಜೈಲಿನಿಂದ ಹೊರಬರುತ್ತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಮುಖ ಆರೋಪಿ ಸುಹೈಲ್‌ನನ್ನು ಇತರ ಆರೋಪಿಗಳಿಗೆ ಜಾಮೀನು ಸಿಕ್ಕ 10 ದಿನಗಳ ನಂತರವಷ್ಟೇ ಬಿಡುಗಡೆ ಮಾಡಬೇಕು ಎಂದು ಸ್ಪಷ್ಟಪಡಿಸಿತ್ತು. ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಆರೋಪಿಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಆದಾಗ್ಯೂ, ನಿಗದಿತ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುಹೈಲ್ ಇಂದು ಜೈಲಿನಿಂದ ಹೊರಬರುತ್ತಿದ್ದಾನೆ.

ಆರಂಭದಲ್ಲಿ ಅಂಗಮಾಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಎರ್ನಾಕುಲಂ ಸೆಷನ್ಸ್ ನ್ಯಾಯಾಲಯಗಳು ಸುಹೈಲ್ ಸೇರಿದಂತೆ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದವು. ಬಳಿಕ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 11ರ ಮುಂಜಾನೆ ನೆಡುಂಬಶ್ಶೇರಿ ವಿಮಾನ ನಿಲ್ದಾಣ-ಅಥಣಿ ರಸ್ತೆಯಲ್ಲಿ ಈ ಭೀಕರ ದುರಂತ ಸಂಭವಿಸಿತ್ತು. ಸುಹೈಲ್ ಅತಿ ವೇಗವಾಗಿ ಚಲಾಯಿಸುತ್ತಿದ್ದ ಮಿನಿ ಕೂಪರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಕೂಟರ್‌ನಲ್ಲಿದ್ದ ಇಯಾಸ್, ದೇವಿಕಾ ಮತ್ತು ಗೋಪಿಕಾ ಎಂಬ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದರು. ಅಪಘಾತದ ವೇಳೆ ಸುಹೈಲ್ ಮದ್ಯದ ಅಮಲಿನಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸುಹೈಲ್ ವಿರುದ್ಧ ಕೊಲೆ (ಮರ್ಡರ್) ಪ್ರಕರಣ ದಾಖಲಿಸಿದ್ದರೆ, ಕಾರಿನಲ್ಲಿದ್ದ ಇತರ ಮೂವರ ವಿರುದ್ಧ ಅಪರಾಧಕ್ಕೆ ಪ್ರಚೋದನೆ ನೀಡಿದ ಆರೋಪ ಹೊರಿಸಿದ್ದರು.

ಅಪಘಾತವೆಸಗಿ ಮೂವರ ಸಾವಿಗೆ ಕಾರಣನಾದ ಬಳಿಕವೂ ಕಿಂಚಿತ್ತು ಪಶ್ಚಾತಾಪ ಪಡದ ಸುಹೈಲ್, ಸ್ಥಳದಲ್ಲಿದ್ದವರ ಮೇಲೆ ಹಲ್ಲೆಗೆ ಮುಂದಾಗಿದ್ದ. ಅಲ್ಲದೆ, "ನನ್ನ ತಂದೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ" ಎಂದು ದೌಲತ್ತಿನ ಮಾತುಗಳಾಡಿದ್ದ. ಆರೋಪಿ ಸುಹೈಲ್ ಸಜೀವ್, ಪ್ರಸಿದ್ಧ ಇಹಾ ಡಿಸೈನ್ಸ್ ಬಟ್ಟೆ ಬ್ರ್ಯಾಂಡ್‌ನ ಮಾಲೀಕರಾದ ಸಜೀವ್ ಜಮಾಲ್ ಹಾಗೂ ನುಹಾ ಸಜೀವ್ ದಂಪತಿಯ 18 ವರ್ಷದ ಮಗನಾಗಿದ್ದಾನೆ. ಅಲಾಪುಳ ಮತ್ತು ಕೊಚ್ಚಿಯಲ್ಲಿ ದೊಡ್ಡ ಮಟ್ಟದ ಜವಳಿ ವ್ಯವಹಾರ ಹೊಂದಿರುವ ಇವರ ಕುಟುಂಬ, ಕಾಕ್ಕನಾಡ್‌ನ ಗೋಲ್ಡ್ ಟವರ್ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದೆ.

ಆರೋಪಿ ಸುಹೈಲ್ ರಾಜಗಿರಿ ಕಾಲೇಜಿನಲ್ಲಿ ಬಿಕಾಂ (B.Com) ವ್ಯಾಸಂಗ ಮಾಡುತ್ತಿದ್ದನು. ಆತನ ತಾಯಿ ಹಾಗೂ ಸುಹೈಲ್ ಇಬ್ಬರೂ ಸೇರಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ಗಳನ್ನು ಹೊಂದಿರುವ ಇಹಾ ಬ್ರ್ಯಾಂಡ್‌ಗೆ ಸಂಬಂಧಿಸಿದ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಮಾಡುತ್ತಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಮೃತರ ಕುಟುಂಬದ ಪರ ವಕೀಲರು ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿದ್ದರು. ಈ ಅಪಘಾತವು ಕೇವಲ ಆಕಸ್ಮಿಕವಲ್ಲ, ಬದಲಾಗಿ ಅತಿ ವೇಗ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ನಿರ್ಲಕ್ಷ್ಯದಿಂದ ಸಂಭವಿಸಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅಷ್ಟೇ ಅಲ್ಲದೆ, ಆರೋಪಿ ಸುಹೈಲ್ ಈ ಹಿಂದೆಯೂ ಇದೇ ರೀತಿಯ ಅಪಘಾತಗಳನ್ನು ಎಸಗಿರುವ ಇತಿಹಾಸ ಹೊಂದಿದ್ದಾನೆ ಎಂದು ವಕೀಲರು ವಾದಿಸಿದ್ದರು. ಇಂತಹ ಗಂಭೀರ ಆರೋಪಗಳು ಮತ್ತು ಸಾಕ್ಷ್ಯಾಧಾರಗಳಿದ್ದರೂ ಆರೋಪಿಗೆ ಇಷ್ಟು ಬೇಗ ಜಾಮೀನು ಸಿಕ್ಕಿರುವುದು ಸಂತ್ರಸ್ತ ಕುಟುಂಬಗಳಿಗೆ ತೀವ್ರ ಆಘಾತ ತಂದಿದೆ.

ಮತ್ತೊಂದೆಡೆ, ಮೂವರು ಅಮಾಯಕರ ಜೀವವನ್ನು ಬಲಿಪಡೆದ ಆರೋಪಿಗೆ ಕೇವಲ 36 ದಿನಗಳಲ್ಲಿ ಜಾಮೀನು ನೀಡಿ ಬಿಡುಗಡೆ ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ಕುಡಿದು ವಾಹನ ಚಲಾಯಿಸಿ ಮೂವರ ಸಾವಿಗೆ ಕಾರಣನಾದವನಿಗೆ ಇಷ್ಟು ಸುಲಭವಾಗಿ ಜಾಮೀನು ಸಿಕ್ಕರೆ, ಕಾನೂನಿನ ಭಯ ಎಲ್ಲಿರುತ್ತದೆ ಎಂದು ಜನಸಾಮಾನ್ಯರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. ಹಣಬಲ ಮತ್ತು ಪ್ರಭಾವ ಇರುವವರಿಗೆ ಕಾನೂನು ಸಡಿಲವಾಗುತ್ತಿದೆಯೇ ಎಂಬ ಚರ್ಚೆಗಳು ಕೇರಳದಾದ್ಯಂತ ಜೋರಾಗಿ ನಡೆಯುತ್ತಿವೆ.

ಅಮಾಯಕ ಜೀವಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಕುಟುಂಬಗಳಿಗೆ ನ್ಯಾಯ ಸಿಗುವ ಮುನ್ನವೇ ಆರೋಪಿ ರಾಜಾರೋಷವಾಗಿ ಹೊರಬರುತ್ತಿರುವುದು ವ್ಯವಸ್ಥೆಯ ವೈಫಲ್ಯ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಇಂತಹ ಭೀಕರ ರಸ್ತೆ ಅಪಘಾತಗಳನ್ನು ತಡೆಯಬೇಕಾದರೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಜಾಮೀನು ನಿಯಮಗಳು ಮತ್ತಷ್ಟು ಕಠಿಣವಾಗಿರಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಸದ್ಯ ಸುಹೈಲ್ ಬಿಡುಗಡೆಯ ಸುದ್ದಿಯು ಸಂತ್ರಸ್ತ ಕುಟುಂಬಗಳ ನೋವನ್ನು ಇನ್ನಷ್ಟು ಹೆಚ್ಚಿಸಿದೆ, (ಏಜೆನ್ಸೀಸ್​).