ಮೂವರು ಅಮಾಯಕರ ಪ್ರಾಣ ತೆಗೆದಿದ್ದಲ್ಲದೆ ದುಡ್ಡಿನ ಮದದಲ್ಲಿ ಈತ ಆಡಿದ ಮಾತು ಕೇಳಿದ್ರೆ ಎಂಥವರಿಗೂ ಕೋಪ ಬರುತ್ತೆ! Mini Cooper Accident

ನೆಡುಂಬಸ್ಸೆರಿಯ ಅಥಾಣಿ ಪ್ರದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ದೇವಿಕಾ, ಗೋಪಿಕಾ ಮತ್ತು ಇಜಾಜ್ ಎಂಬ ಮೂವರು ದುರ್ಮರಣಕ್ಕೀಡಾಗಿದ್ದಾರೆ. ಎಲ್ಲರಿಗೂ ಕೇವಲ 21 ವರ್ಷ ವಯಸ್ಸಾಗಿದ್ದು, ಅತ್ತ ಏವಿಯೇಷನ್ (ವಿಮಾನಯಾನ) ಅಭ್ಯಾಸ ಮಾಡುತ್ತ, ಇತ್ತ ತ್ರಿಕ್ಕಾಕರದ ಆಂಟಿಕ್ ಅಂಗಡಿಯಲ್ಲಿ ಪಾರ್ಟ್-ಟೈಮ್ ಕೆಲಸ ಮಾಡುತ್ತಿದ್ದರು.
Mini Cooper Accident
ಮೃತ ಅಮಾಯಕರು ಹಾಗೂ ಅಪಘಾತವೆಸಗಿದ ಆರೋಪಿ ಸುಹೈಲ್ ಸಜೀವ್
Published on: 

ಕೊಚ್ಚಿ: ಕೇರಳದ ನೆಡುಂಬಸ್ಸೆರಿಯ ಅಥಾಣಿ ಬಳಿ ನಡೆದ ಭೀಕರ ರಸ್ತೆ ಅಪಘಾತವೊಂದು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಕುಡಿತದ ನಶೆಯಲ್ಲಿ ಅತಿವೇಗವಾಗಿ ಮಿನಿ ಕೂಪರ್ ಕಾರು ( Mini Cooper Accident ) ಚಲಾಯಿಸಿ, ಮೂವರು ಅಮಾಯಕ ಯುವಕ-ಯುವತಿಯರ ಸಾವಿಗೆ ಕಾರಣನಾದ ಪ್ರಮುಖ ಜವಳಿ ವ್ಯಾಪಾರಿಯ ಮಗನ ಅಹಂಕಾರದ ಕೃತ್ಯ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಪಘಾತದ ನಂತರವೂ ಕಿಂಚಿತ್ತು ಪಶ್ಚಾತಾಪವಿಲ್ಲದೆ ಆರೋಪಿ ತೋರಿದ ದುರ್ವರ್ತನೆಗೆ ಎಲ್ಲರು ಕಿಡಿಕಾರುತ್ತಿದ್ದಾರೆ.

ನೆಡುಂಬಸ್ಸೆರಿಯ ಅಥಾಣಿ ಪ್ರದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ದೇವಿಕಾ, ಗೋಪಿಕಾ ಮತ್ತು ಇಜಾಜ್ ಎಂಬ ಮೂವರು ದುರ್ಮರಣಕ್ಕೀಡಾಗಿದ್ದಾರೆ. ಎಲ್ಲರಿಗೂ ಕೇವಲ 21 ವರ್ಷ ವಯಸ್ಸಾಗಿದ್ದು, ಅತ್ತ ಏವಿಯೇಷನ್ (ವಿಮಾನಯಾನ) ಅಭ್ಯಾಸ ಮಾಡುತ್ತ, ಇತ್ತ ತ್ರಿಕ್ಕಾಕರದ ಆಂಟಿಕ್ ಅಂಗಡಿಯಲ್ಲಿ ಪಾರ್ಟ್-ಟೈಮ್ ಕೆಲಸ ಮಾಡುತ್ತಿದ್ದರು. ಭವಿಷ್ಯದ ದೊಡ್ಡ ಕನಸುಗಳನ್ನು ಹೊತ್ತು ಸಾಗುತ್ತಿದ್ದ ಈ ಮೂವರ ಜೀವ ಕೇವಲ ಕೆಲವೇ ಸೆಕೆಂಡುಗಳಲ್ಲಿ ಕಮರಿಹೋಗಿದೆ.

Also Read
40 ಜೀವ ಉಳಿಸಿ ಪ್ರಾಣಬಿಟ್ಟ ರಿಯಲ್ ಹೀರೋ: ಎದೆನೋವಿನ ನಡುವೆಯೂ ಬಸ್ ನಿಲ್ಲಿಸಿ ಕೊನೆಯುಸಿರೆಳೆದ ಚಾಲಕ! APSRTC Bus Driver
Mini Cooper Accident

ಕೆಲಸ ಮುಗಿಸಿ ಸ್ನೇಹಿತರೊಂದಿಗೆ ಚಹಾ ಕುಡಿದು ಎಂದಿನಂತೆ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಇವರ ಹಿಂದೆಯೇ ಇತರೆ ಎರಡು ಬೈಕ್‌ಗಳಲ್ಲಿ ಸ್ನೇಹಿತರು ಬರುತ್ತಿದ್ದರು. ಅತ್ಯಂತ ಖುಷಿಯಿಂದ ಜತೆಯಾಗಿ ಹೊರಟಿದ್ದ ಸ್ನೇಹಿತರು, ತಮ್ಮ ಕಣ್ಣೆದುರಲ್ಲೇ ರಸ್ತೆ ಮೇಲೆ ಸಾವಿಗೀಡಾಗಿರುವುದನ್ನು ಕಂಡು ಅಘಾತಕ್ಕೊಳಗಾಗಿದ್ದಾರೆ. ಸದ್ಯ ಮೃತದೇಹಗಳನ್ನು ಅಂಕಮಾಲಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಗುತ್ತದೆ.

ಮದ್ಯದ ನಶೆಯಲ್ಲಿ ಮಿನಿ ಕೂಪರ್ ಅತಿವೇಗ

ಕಾರು ಚಾಲನೆ ಮಾಡುತ್ತಿದ್ದ ಸುಹೈಲ್ ಸಜೀವ್ ಎಂಬಾತ ವಿಪರೀತ ವೇಗದಲ್ಲಿ ವಾಹನ ಚಲಾಯಿಸಿದ್ದು ಈ ಅಪಘಾತಕ್ಕೆ ನೇರ ಕಾರಣವಾಗಿದೆ. ಇದರ ದೃಶ್ಯಾವಳಿಗಳು ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪೊಲೀಸರು ಈ ಸಂಬಂಧ ಕೊಲೆ ಕೇಸ್ ದಾಖಲಿಸಿಕೊಂಡಿದ್ದು, ಜಾಮೀನು ರಹಿತ ಸೆಕ್ಷನ್‌ಗಳನ್ನು ಹೇರಲಾಗಿದೆ. ತನಿಖೆಯ ವೇಳೆ ಆತನ ದೇಹದಲ್ಲಿ ಅಳತೆಮೀರಿದ ಪ್ರಮಾಣದಲ್ಲಿ ಆಲ್ಕೋಹಾಲ್ ಇರುವುದು ದೃಢಪಟ್ಟಿದೆ. ಜತೆಗೆ ಇತರೆ ಮಾದಕ ವಸ್ತುಗಳನ್ನು ಸಹ ಆತ ಬಳಸಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆಗೂ ಮುನ್ನ ದಿನದ ಮಧ್ಯಾಹ್ನದಿಂದಲೇ ಸುಹೈಲ್ ಮೂರು ವಿಭಿನ್ನ ಬಾರ್‌ಗಳು ಹಾಗೂ ಪಂಚತಾರಾ ಹೋಟೆಲ್‌ಗಳಲ್ಲಿ ಮದ್ಯಪಾನ ಮಾಡಿದ್ದನು. ಈ ಎಲ್ಲ ಹುಚ್ಚಾಟದ ದೃಶ್ಯಗಳನ್ನು ಆತ ತನ್ನ ಮೊಬೈಲ್‌ನಲ್ಲಿಯೂ ಚಿತ್ರೀಕರಿಸಿಕೊಂಡಿದ್ದನು. ನೆಡುಂಬಸ್ಸೆರಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ತನ್ನ ಸ್ನೇಹಿತನನ್ನು ಕರೆದುಕೊಂಡು ಬರಲು ಕಾರಿನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಜರುಗಿದೆ. ಈ ಹಿಂದೆ ತಾನು ಬರೋಬ್ಬರಿ 220 ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ವಿಡಿಯೋಗಳನ್ನು ಕೂಡ ಆತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನು.

ಅಪಘಾತವೆಸಗಿ ಮೂವರ ಸಾವಿಗೆ ಕಾರಣನಾದ ಬಳಿಕವೂ ಕಿಂಚಿತ್ತು ಪಶ್ಚಾತಾಪ ಪಡದ ಸುಹೈಲ್, ಸ್ಥಳದಲ್ಲಿದ್ದವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅಲ್ಲದೆ, "ನನ್ನ ತಂದೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ" ಎಂದು ದೌಲತ್ತಿನ ಮಾತುಗಳಾಡಿದ್ದಾನೆ. ಆರೋಪಿ ಸುಹೈಲ್ ಸಜೀವ್, ಪ್ರಸಿದ್ಧ ಇಹಾ ಡಿಸೈನ್ಸ್ ಬಟ್ಟೆ ಬ್ರ್ಯಾಂಡ್‌ನ ಮಾಲೀಕರಾದ ಸಜೀವ್ ಜಮಾಲ್ ಹಾಗೂ ನುಹಾ ಸಜೀವ್ ದಂಪತಿಯ 18 ವರ್ಷದ ಮಗನಾಗಿದ್ದಾನೆ. ಅಲಾಪುಳ ಮತ್ತು ಕೊಚ್ಚಿಯಲ್ಲಿ ದೊಡ್ಡ ಮಟ್ಟದ ಜವಳಿ ವ್ಯವಹಾರ ಹೊಂದಿರುವ ಇವರ ಕುಟುಂಬ, ಕಾಕ್ಕನಾಡ್‌ನ ಗೋಲ್ಡ್ ಟವರ್ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದೆ.

Also Read
ದೆಹಲಿ ಪೊಲೀಸರು ಮೊದಲು ಬ್ಯಾಟಿಂಗ್​ ಮಾಡಲಿ...ಕಾಕ್ರೋಚ್​ ಪ್ರತಿಭಟನೆ ಬೆನ್ನಲ್ಲೇ ಪಾಕ್​ ಮಾಜಿ ಕ್ರಿಕೆಟಿಗನ ಟ್ವೀಟ್​ ವೈರಲ್​! Danish Kaneria
Mini Cooper Accident

ಆರೋಪಿ ಸುಹೈಲ್ ರಾಜಗಿರಿ ಕಾಲೇಜಿನಲ್ಲಿ ಬಿಕಾಂ (B.Com) ವ್ಯಾಸಂಗ ಮಾಡುತ್ತಿದ್ದನು. ಆತನ ತಾಯಿ ಹಾಗೂ ಸುಹೈಲ್ ಇಬ್ಬರೂ ಸೇರಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ಗಳನ್ನು ಹೊಂದಿರುವ ಇಹಾ ಬ್ರ್ಯಾಂಡ್‌ಗೆ ಸಂಬಂಧಿಸಿದ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಮಾಡುತ್ತಿದ್ದರು. ನಿರಂತರವಾಗಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಈತ, ಯಾವುದೇ ಪಶ್ಚಾತಾಪವಿಲ್ಲದೆ ಒಬ್ಬ ಗೂಂಡನಂತೆ ವರ್ತಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ವಿಚಾರಣೆಯ ವೇಳೆ ಸುಹೈಲ್ ಅತ್ಯಂತ ದುರಹಂಕಾರದಿಂದ ಹಾಗೂ ಸೊಕ್ಕಿನಿಂದ ಮಾತನಾಡುತ್ತಿದ್ದಾನೆ ಎಂದು ವರದಿಯಾಗಿದೆ. ಇಂದು ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ಇಂತಹ ಕ್ರಿಮಿನಲ್ ಮನಸ್ಥಿತಿಯ ವ್ಯಕ್ತಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳಿಗೆ ತಕ್ಕ ಶಾಸ್ತಿ ನೀಡಲು ಮೋಟಾರು ವಾಹನ ಇಲಾಖೆಯೂ ಸಹ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net