ಮೃತ ಅಮಾಯಕರು ಹಾಗೂ ಅಪಘಾತವೆಸಗಿದ ಆರೋಪಿ ಸುಹೈಲ್ ಸಜೀವ್  
ದೇಶ

ನನ್ನ ಮಗನ ಭವಿಷ್ಯದ್ದೇ ಚಿಂತೆ ಎಂದು ಕಣ್ಣೀರಿಟ್ಟ ಆರೋಪಿ ಸುಹೇಲ್ ತಾಯಿ! ಮೂವರು ಅಮಾಯಕರ ಪ್ರಾಣಕ್ಕಿಲ್ಲವೇ ಬೆಲೆ? Mini Cooper Accident

ಕಾರು ಅಪಘಾತದ ಬಗ್ಗೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ನುಹಾ ಪ್ರತಿಕ್ರಿಯೆ ನೀಡಿದ್ದಾರೆ. ಅಲೆಪ್ಪಿ ಮತ್ತು ಕೊಚ್ಚಿಯಲ್ಲಿ 'ಇಹಾ ಡೈನ್ಸ್' (Iha Designs) ಎಂಬ ಪ್ರಸಿದ್ಧ ಬಟ್ಟೆ ಉದ್ಯಮದ ಮಾಲಕಿಯಾಗಿರುವ ನುಹಾ ಸಜೀವ್, ಅಪಘಾತದಲ್ಲಿ ಜೀವ ಕಳೆದುಕೊಂಡ ಮೂವರು ಮಕ್ಕಳ ಕುಟುಂಬಗಳಿಗೆ ತನ್ನ ಸಂಪೂರ್ಣ ಬೆಂಬಲ ಹಾಗೂ ಸಂತಾಪವನ್ನು ಸೂಚಿಸುವುದಾಗಿಯೂ ತಿಳಿಸಿದ್ದಾರೆ.

ತಿರುವನಂತಪುರಂ: ಕೊಚ್ಚಿಯಲ್ಲಿ ನಡೆದ ಭೀಕರ ಮಿನಿ ಕೂಪರ್ ಕಾರು ಅಪಘಾತ ( Mini Cooper Accident ) ಪ್ರಕರಣದಲ್ಲಿ ಎ1 ಆರೋಪಿಯಾಗಿರುವ 19 ವರ್ಷದ ಸುಹೇಲ್ ಸಜೀವ್ ಅವರ ತಾಯಿ ನುಹಾ ಸಜೀವ್ ಅವರು ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಮಗನ ಭವಿಷ್ಯದ ಬಗ್ಗೆ ನುಹಾ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ಮಗನ ಮೋಜಿಗೆ ಬಲಿಯಾದ ಅಮಾಯಕರ ಬಗ್ಗೆ ಸ್ವಲ್ಪವೂ ಪಶ್ಚಾತಾಪ ವ್ಯಕ್ತಪಡಿಸಲಿಲ್ಲ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಕಾರು ಅಪಘಾತದ ಬಗ್ಗೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ನುಹಾ ಪ್ರತಿಕ್ರಿಯೆ ನೀಡಿದ್ದಾರೆ. ಅಲೆಪ್ಪಿ ಮತ್ತು ಕೊಚ್ಚಿಯಲ್ಲಿ 'ಇಹಾ ಡೈನ್ಸ್' (Iha Designs) ಎಂಬ ಪ್ರಸಿದ್ಧ ಬಟ್ಟೆ ಉದ್ಯಮದ ಮಾಲಕಿಯಾಗಿರುವ ನುಹಾ ಸಜೀವ್, ಅಪಘಾತದಲ್ಲಿ ಜೀವ ಕಳೆದುಕೊಂಡ ಮೂವರು ಮಕ್ಕಳ ಕುಟುಂಬಗಳಿಗೆ ತನ್ನ ಸಂಪೂರ್ಣ ಬೆಂಬಲ ಹಾಗೂ ಸಂತಾಪವನ್ನು ಸೂಚಿಸುವುದಾಗಿಯೂ ತಿಳಿಸಿದ್ದಾರೆ. ಆದರೆ, ವಿಡಿಯೋದಲ್ಲಿ ಅಮಾಯಕರ ಪ್ರಾಣಕ್ಕಿಂತ ತಮ್ಮ ಮಗನ ಭವಿಷ್ಯದ ಬಗ್ಗೆ ಮಾತನಾಡಿದ್ದಕ್ಕೆ ನುಹಾ ಅವರು ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಾಯಿಯಾಗಿ ಮತ್ತು ಮಹಿಳೆಯಾಗಿ ತಾನು ಅನುಭವಿಸುತ್ತಿರುವ ನೋವನ್ನು ಹಂಚಿಕೊಂಡಿರುವ ನುಹಾ, ಈ ಅಪಘಾತದಲ್ಲಿ ನಾವು ಮೂರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ತಮ್ಮ ಮಕ್ಕಳನ್ನು ಕಳೆದುಕೊಂಡ ತಾಯಿಯ ನೋವು ಹೇಗಿರುತ್ತದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ನನ್ನ ಮಾತುಗಳು ಆ ತಾಯಿಯ ದುಃಖವನ್ನು ಮರೆಸಲು ಸಾಧ್ಯವಿಲ್ಲ. ಈ ಅಪಘಾತದ ಬಗ್ಗೆ ಸಂಪೂರ್ಣ ತನಿಖೆಯಾಗಲಿ, ಕಾನೂನು ತನ್ನ ಹಾದಿಯಲ್ಲಿ ಪ್ರಾಮಾಣಿಕವಾಗಿ ಮುಂದುವರಿಯಲಿ ಮತ್ತು ನಿಜವಾದ ಸತ್ಯ ಮಾತ್ರ ಹೊರಬರಲಿ ಎಂದು ನುಹಾ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಅಪಘಾತದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವುದನ್ನು ಮತ್ತು ಜನರಿಗೆ ತಮ್ಮ ಮೇಲೆ ಕೋಪವಿರುವುದನ್ನು ತಾನು ಅರ್ಥಮಾಡಿಕೊಂಡಿದ್ದೇನೆ ಎಂದು ನುಹಾ ಸಜೀವ್ ಹೇಳಿದ್ದಾರೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ತಮಗೂ ಮತ್ತು ತಮ್ಮ ಕುಟುಂಬಕ್ಕೂ ಸ್ವಲ್ಪ ಗೌಪ್ಯತೆಯನ್ನು ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ. ತಾವು ಕೂಡ ಎಲ್ಲರಂತೆ ಸಾಮಾನ್ಯ ಕುಟುಂಬದವರಾಗಿದ್ದು, ಈ ರೀತಿಯ ಸುದ್ದಿಗಳನ್ನು ಹಬ್ಬುವಾಗ ತಾನೊಬ್ಬ ತಾಯಿ ಎಂಬುದನ್ನು ಮರೆಯಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ನನಗೆ ನನ್ನ ಮಗನ ಭವಿಷ್ಯದ ಬಗ್ಗೆ ಆತಂಕವಿದೆ, ಹಾಗೆಯೇ ಪ್ರಾಣ ಕಳೆದುಕೊಂಡ ಮಕ್ಕಳ ಬಗ್ಗೆಯೂ ನನಗೆ ಅಷ್ಟೇ ದುಃಖವಿದೆ. ನಾನು ಈ ಎರಡೂ ನೋವುಗಳ ನಡುವೆ ಅತ್ಯಂತ ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇನೆ. ನನ್ನ ಕುಟುಂಬವು ಮೃತಪಟ್ಟವರ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುತ್ತದೆ. ನಮ್ಮೆಲ್ಲರ ಜೀವನಕ್ಕೂ ಬೆಲೆಯಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ನಮ್ಮ ಬಗ್ಗೆ ಸುದ್ದಿಗಳನ್ನು ಹರಡಿರಿ. ನಾವೂ ಕೂಡ ನಿಮ್ಮಂತೆ ಸಾಮಾನ್ಯ ಮನುಷ್ಯರು" ಎಂದು ನುಹಾ ಸಜೀವ್ ವಿಡಿಯೋದಲ್ಲಿ ಗದ್ಗದಿತರಾಗಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ಬಳಿಕ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅಪಘಾತದ ಗಂಭೀರತೆ ಮತ್ತು ಮೃತರ ಕುಟುಂಬಗಳ ಶೋಕದ ನಡುವೆ, ಆರೋಪಿಯ ತಾಯಿಯ ಈ ಭಾವನಾತ್ಮಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ತನಿಖೆ ಪೂರ್ಣಗೊಂಡು ನ್ಯಾಯ ದೊರಕಬೇಕು ಎಂಬ ಒತ್ತಾಯ ಜೋರಾಗಿದೆ.

ಏನಿದು ಘಟನೆ?

ಕಳೆದ ವಾರ ಕೇರಳದ ನೆಡುಂಬಸ್ಸೆರಿಯ ಅಥಾಣಿ ಬಳಿ ನಡೆದ ಭೀಕರ ರಸ್ತೆ ಅಪಘಾತವೊಂದು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತು. ಈ ಅಪಘಾತದಲ್ಲಿ ದೇವಿಕಾ, ಗೋಪಿಕಾ ಮತ್ತು ಇಜಾಜ್ ಎಂಬ ಮೂವರು ದುರ್ಮರಣಕ್ಕೀಡಾಗಿದ್ದಾರೆ. ಎಲ್ಲರಿಗೂ ಕೇವಲ 21 ವರ್ಷ ವಯಸ್ಸಾಗಿದ್ದು, ಅತ್ತ ಏವಿಯೇಷನ್ (ವಿಮಾನಯಾನ) ಅಭ್ಯಾಸ ಮಾಡುತ್ತ, ಇತ್ತ ತ್ರಿಕ್ಕಾಕರದ ಆಂಟಿಕ್ ಅಂಗಡಿಯಲ್ಲಿ ಪಾರ್ಟ್-ಟೈಮ್ ಕೆಲಸ ಮಾಡುತ್ತಿದ್ದರು. ಭವಿಷ್ಯದ ದೊಡ್ಡ ಕನಸುಗಳನ್ನು ಹೊತ್ತು ಸಾಗುತ್ತಿದ್ದ ಈ ಮೂವರ ಜೀವ ಕೇವಲ ಕೆಲವೇ ಸೆಕೆಂಡುಗಳಲ್ಲಿ ಕಮರಿಹೋಯಿತು.

ಕೆಲಸ ಮುಗಿಸಿ ಸ್ನೇಹಿತರೊಂದಿಗೆ ಚಹಾ ಕುಡಿದು ಎಂದಿನಂತೆ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿತು. ಕಾರು ಚಾಲನೆ ಮಾಡುತ್ತಿದ್ದ ಸುಹೈಲ್ ಸಜೀವ್ ಎಂಬಾತ ವಿಪರೀತ ವೇಗದಲ್ಲಿ ವಾಹನ ಚಲಾಯಿಸಿದ್ದು ಈ ಅಪಘಾತಕ್ಕೆ ನೇರ ಕಾರಣವಾಗಿದೆ. ಇದರ ದೃಶ್ಯಾವಳಿಗಳು ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪೊಲೀಸರು ಈ ಸಂಬಂಧ ಕೊಲೆ ಕೇಸ್ ದಾಖಲಿಸಿಕೊಂಡಿದ್ದು, ಜಾಮೀನು ರಹಿತ ಸೆಕ್ಷನ್‌ಗಳನ್ನು ಹೇರಲಾಗಿದೆ. ತನಿಖೆಯ ವೇಳೆ ಆತನ ದೇಹದಲ್ಲಿ ಅಳತೆಮೀರಿದ ಪ್ರಮಾಣದಲ್ಲಿ ಆಲ್ಕೋಹಾಲ್ ಇರುವುದು ದೃಢಪಟ್ಟಿದೆ. ಜತೆಗೆ ಇತರೆ ಮಾದಕ ವಸ್ತುಗಳನ್ನು ಸಹ ಆತ ಬಳಸಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆಗೂ ಮುನ್ನ ದಿನದ ಮಧ್ಯಾಹ್ನದಿಂದಲೇ ಸುಹೈಲ್ ಮೂರು ವಿಭಿನ್ನ ಬಾರ್‌ಗಳು ಹಾಗೂ ಪಂಚತಾರಾ ಹೋಟೆಲ್‌ಗಳಲ್ಲಿ ಮದ್ಯಪಾನ ಮಾಡಿದ್ದನು. ಈ ಎಲ್ಲ ಹುಚ್ಚಾಟದ ದೃಶ್ಯಗಳನ್ನು ಆತ ತನ್ನ ಮೊಬೈಲ್‌ನಲ್ಲಿಯೂ ಚಿತ್ರೀಕರಿಸಿಕೊಂಡಿದ್ದನು. ನೆಡುಂಬಸ್ಸೆರಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ತನ್ನ ಸ್ನೇಹಿತನನ್ನು ಕರೆದುಕೊಂಡು ಬರಲು ಕಾರಿನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಜರುಗಿದೆ. ಈ ಹಿಂದೆ ತಾನು ಬರೋಬ್ಬರಿ 220 ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ವಿಡಿಯೋಗಳನ್ನು ಕೂಡ ಆತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನು.

ಅಪಘಾತವೆಸಗಿ ಮೂವರ ಸಾವಿಗೆ ಕಾರಣನಾದ ಬಳಿಕವೂ ಕಿಂಚಿತ್ತು ಪಶ್ಚಾತಾಪ ಪಡದ ಸುಹೈಲ್, ಸ್ಥಳದಲ್ಲಿದ್ದವರ ಮೇಲೆ ಹಲ್ಲೆಗೆ ಮುಂದಾಗಿದ್ದ. ಅಲ್ಲದೆ, "ನನ್ನ ತಂದೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ" ಎಂದು ದೌಲತ್ತಿನ ಮಾತುಗಳಾಡಿದ್ದ. ಆರೋಪಿ ಸುಹೈಲ್ ಸಜೀವ್, ಪ್ರಸಿದ್ಧ ಇಹಾ ಡಿಸೈನ್ಸ್ ಬಟ್ಟೆ ಬ್ರ್ಯಾಂಡ್‌ನ ಮಾಲೀಕರಾದ ಸಜೀವ್ ಜಮಾಲ್ ಹಾಗೂ ನುಹಾ ಸಜೀವ್ ದಂಪತಿಯ 18 ವರ್ಷದ ಮಗನಾಗಿದ್ದಾನೆ. ಅಲಾಪುಳ ಮತ್ತು ಕೊಚ್ಚಿಯಲ್ಲಿ ದೊಡ್ಡ ಮಟ್ಟದ ಜವಳಿ ವ್ಯವಹಾರ ಹೊಂದಿರುವ ಇವರ ಕುಟುಂಬ, ಕಾಕ್ಕನಾಡ್‌ನ ಗೋಲ್ಡ್ ಟವರ್ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದೆ, (ಏಜೆನ್ಸೀಸ್​).