ದೇಶ

ಸಿಎಂ ಧಾಮಿ ವಿರುದ್ಧ ಮಾತಾಡುವಾಗ ಮೈಕ್ ಆಫ್: ಸೌಂಡ್ ಸಿಸ್ಟಮ್​ನ ವ್ಯಕ್ತಿ ಮೇಲೆ ಮೈಕ್ ಎಸೆದು, ಹಲ್ಲೆಗೆ ಮುಂದಾದ ಕಾಂಗ್ರೆಸ್ ಶಾಸಕ | Congress MLA

ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಐತಿಹಾಸಿಕ 'ಜೌಲ್ಜೀಬಿ ಮೇಳ'ದಲ್ಲಿ ಶನಿವಾರ(ನ. 14) ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ ಸಿಎಂ ಪುಷ್ಕರ್ ಸಿಂಗ್ ಧಾಮಿ ವಿರುದ್ಧ ಮಾತನಾಡುವಾಗ ಮೈಕ್ ಆಫ್ ಮಾಡಲಾಗಿದ್ದು, ಇದರಿಂದ ತಕ್ಷಣ ಸಿಟ್ಟಿಗೆದ್ದ ಅವರು, ಸೌಂಡ್ ಸಿಸ್ಟಮ್ ನಿರ್ವಹಿಸುತ್ತಿದ್ದ ವ್ಯಕ್ತಿ ಮೇಲೆ ಮೈಕ್ ಎಸೆದು, ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಐತಿಹಾಸಿಕ 'ಜೌಲ್ಜೀಬಿ ಮೇಳ'ದಲ್ಲಿ ಶನಿವಾರ(ನ. 14) ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ ಸಿಎಂ ಪುಷ್ಕರ್ ಸಿಂಗ್ ಧಾಮಿ ವಿರುದ್ಧ ಮಾತನಾಡುವಾಗ ಮೈಕ್ ಆಫ್ ಮಾಡಲಾಗಿದ್ದು, ಇದರಿಂದ ತಕ್ಷಣ ಸಿಟ್ಟಿಗೆದ್ದ ಅವರು, ಸೌಂಡ್ ಸಿಸ್ಟಮ್ ನಿರ್ವಹಿಸುತ್ತಿದ್ದ ವ್ಯಕ್ತಿ ಮೇಲೆ ಮೈಕ್ ಎಸೆದು, ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಾರ್ಯಕ್ರಮದ ಸ್ಥಳದಿಂದ ನಿರ್ಗಮಿಸಿದ ಬಳಿಕ ಈ ಘಟನೆ ನಡೆದಿದೆ. ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರೀಶ್ ಸಿಂಗ್ ಅಧ್ಯಕ್ಷೀಯ ಭಾಷಣ ಮಾಡುವ ವೇಳೆ ಪುಷ್ಕರ್ ಸಿಂಗ್ ಧಾಮಿ ಅವರ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದರು. ಮತ್ತು ಅವರನ್ನು ಹೇಡಿ ಎಂದು ಕರೆದು, ಮುಂದಿನ ಚುನಾವಣೆಯಲ್ಲಿ ಧಾರ್ಚುಲಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸವಾಲು ಹಾಕಿದರು.

ಈ ವೇಳೆ ತಕ್ಷಣ ತಮ್ಮ ಮೈಕ್ರೊಫೋನ್ ಅನ್ನು ಆಫ್ ಮಾಡಿದಾಗ ಆಕ್ರೋಶಗೊಂಡ ಅವರು, ಅದನ್ನು ಸೌಂಡ್ ಸಿಸ್ಟಮ್ ನಿರ್ವಹಿಸುತ್ತಿದ್ದ ವ್ಯಕ್ತಿಯತ್ತ ಎಸೆದರು. ಮತ್ತು ವೇದಿಕೆಯಿಂದ ಕೆಳೆಗೆ ಇಳಿದು ಆತನತ್ತ ನುಗ್ಗಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕೆಲಕಾಲ ಗೊಂದಲ ಉಂಟಾಗಿ ಕೋಲಾಹಲ ಸೃಷ್ಟಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನೂ ಶಾಸಕರು ವೇದಿಕೆಯಿಂದ ಕೆಳಗಿಳಿದು, ಕುರ್ಚಿಯೊಂದನ್ನು ಕೈಗೆತ್ತಿಕೊಂಡು ಅಲ್ಲಿ ನೆರೆದಿದ್ದವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಪರಿಸ್ಥಿತಿ ಇನ್ನಷ್ಟು ಉಗ್ರ ಸ್ವರೂಪ ಪಡೆಯಿತು. ಅವರು ಒರ್ವ ವ್ಯಕ್ತಿಯ ಕಾಲರ್ ಹಿಡಿದು ಕಪಾಳಕ್ಕೆ ಹೊಡೆಯಲು ಪ್ರಯತ್ನಿಸಿದರಾದರೂ, ಆ ಹೊಡೆತ ಗುರಿ ತಪ್ಪಿದ್ದು, ವಿಡಿಯೋದಲ್ಲಿ ದಾಖಲಾಗಿದೆ.

ಇದರ ನಡುವೆ ಅವರ ಬೆಂಬಲಿಗರು ಮೇಳದ ವೇದಿಕೆಗೆ ನುಗ್ಗಿ ಸಂಘರ್ಷದಲ್ಲಿ ಭಾಗಿಯಾದರು. ಮತ್ತು ವೇದಿಕೆಯ ಮೇಲೆ ಗೊಂದಲವನ್ನು ಉಂಟುಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಘಟನೆ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಪ್ರಯತ್ನಿಸಿದ್ದಾರೆ (ಏಜೆನ್ಸೀಸ್).