NEET Paper Leak | ಸಿಬಿಐ ಚಾರ್ಜ್‌ಶೀಟ್‌ನಿಂದ ಶಾಕಿಂಗ್ ಸತ್ಯ ಬಹಿರಂಗ 
ದೇಶ

ಪ್ರಶ್ನೆಗಳನ್ನು ನೆನಪಿಟ್ಟುಕೊಂಡು ನೀಟ್ ಪೇಪರ್ ಲೀಕ್!...ಸಿಬಿಐ ಚಾರ್ಜ್‌ಶೀಟ್‌ನಿಂದ ಶಾಕಿಂಗ್ ಸತ್ಯ ಬಹಿರಂಗ | NEET Paper Leak

ಪ್ರಶ್ನೆಗಳನ್ನು ನೆನಪಿನಲ್ಲಿಡುವುದು, ತುಂಡು ಕಾಗದಗಳಲ್ಲಿ ಬರೆದುಕೊಳ್ಳುವುದು ಮತ್ತು ಪುಸ್ತಕಗಳಲ್ಲಿ ಸಂಬಂಧಿಸಿದ ಪ್ಯಾರಾಗ್ರಾಫ್‌ಗಳನ್ನು ಗುರುತಿಸುವುದು ನೀಟ್-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳ ಮುಖ್ಯ ಕಾರ್ಯವೈಖರಿಯಾಗಿತ್ತು ಎಂದು ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಬಹಿರಂಗವಾಗಿದೆ.

ಮೇ ತಿಂಗಳ ಆರಂಭದಲ್ಲಿ ದೇಶಾದ್ಯಂತ ಸದ್ದು ಮಾಡಿದ್ದ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಬೃಹತ್ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ, ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್ ಎನ್‌ಡಿಟಿವಿಗೆ ಲಭ್ಯವಾಗಿದೆ.
94 ಪುಟಗಳ ಸಿಬಿಐ ದಾಖಲೆಯು, ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊತ್ತಿದ್ದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ತಂಡದ ಭಾಗವಾಗಿದ್ದ ಮೂವರು ವಿಷಯ ತಜ್ಞರು ಪ್ರಶ್ನೆಗಳನ್ನು ಹೇಗೆ ಸೋರಿಕೆ ಮಾಡಿದ್ದಾರೆ ಎಂಬುದನ್ನು ವಿವರವಾಗಿ ತಿಳಿಸುತ್ತದೆ. ಪಿ.ವಿ. ಕುಲಕರ್ಣಿ, ಮನೀಷಾ ಮಂಧಾರೆ ಮತ್ತು ಮನೀಷಾ ಹವಾಲ್ದಾರ್ ಅವರನ್ನು ಈ ಪೇಪರ್ ಲೀಕ್‌ನ ಮುಖ್ಯ ಮೂಲಗಳು ಎಂದು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿದೆ.

ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಲೀಕ್​ ಮಾಡಿದ್ದು ಹೀಗೆ

ಕುಲಕರ್ಣಿ ರಸಾಯನಶಾಸ್ತ್ರದ (Chemistry) ವಿಷಯ ತಜ್ಞರಾಗಿದ್ದರೆ, ಮಂಧಾರೆ ಮತ್ತು ಹವಾಲ್ದಾರ್ ಕ್ರಮವಾಗಿ ಸಸ್ಯಶಾಸ್ತ್ರ (Botany) ಮತ್ತು ಭೌತಶಾಸ್ತ್ರದ (Physics) ತಜ್ಞರಾಗಿದ್ದರು. ನೀಟ್ ಪೇಪರ್ ಲೀಕ್ ಸಂಬಂಧ ಏಜೆನ್ಸಿಯಿಂದ ಬಂಧಿಸಲ್ಪಟ್ಟು ಆರೋಪ ಹೊತ್ತಿರುವ 13 ಆರೋಪಿಗಳಲ್ಲಿ ಇವರೂ ಸೇರಿದ್ದಾರೆ. ಚಾರ್ಜ್‌ಶೀಟ್ ಪ್ರಕಾರ, ಎನ್‌ಟಿಎ ಕೇಂದ್ರದಲ್ಲಿ ಪ್ರಶ್ನೆಗಳ ಪರಿಶೀಲನೆ ನಡೆಯುವಾಗ ಇವರೆಲ್ಲಾ ಪ್ರಶ್ನೆಗಳನ್ನು ತುಂಡು ಕಾಗದಗಳಿಗೆ ನಕಲು ಮಾಡಿಕೊಂಡಿದ್ದಾರೆ ಮತ್ತು ಎನ್‌ಸಿಇಆರ್‌ಟಿ ಪುಸ್ತಕಗಳಲ್ಲಿ ಪ್ಯಾರಾಗ್ರಾಫ್‌ಗಳನ್ನು ಗುರುತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಶ್ನೆ ಸಿದ್ಧಪಡಿಸುವ ಮತ್ತು ಅನುವಾದಿಸುವ ಪ್ರಕ್ರಿಯೆಯ ಸಮಯದಲ್ಲಿ ಅವರು ವಿವಿಧ ವಿಭಾಗಗಳಿಗೆ ಪ್ರವೇಶವನ್ನು ಹೊಂದಿದ್ದರು ಎಂದು ಸಿಬಿಐ ತಿಳಿಸಿದೆ. ಅವರು ಪ್ರಶ್ನೆಗಳನ್ನು ಕಾಗದದ ಚೀಟಿಗಳಿಗೆ ನಕಲು ಮಾಡಿ, ಅದಕ್ಕೆ ಸಂಬಂಧಿಸಿದ ಎನ್‌ಸಿಇಆರ್‌ಟಿ ಅಧ್ಯಾಯಗಳು ಮತ್ತು ಪ್ಯಾರಾಗ್ರಾಫ್‌ಗಳನ್ನು ಗುರುತಿಸಿ, ನಂಬಿಕಸ್ಥ ಮಧ್ಯವರ್ತಿಗಳು ಮತ್ತು ಕೋಚಿಂಗ್ ನೆಟ್‌ವರ್ಕ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಡಿಜಿಟಲ್ ಸುಳಿವುಗಳನ್ನು ಬಿಡದಿರಲು ಮತ್ತು ಅದೇ ಸಮಯದಲ್ಲಿ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಮಾರ್ಗವನ್ನು ಬಳಸಲಾಗಿದ್ದು, ಹಣದ ಲಾಭ ಮತ್ತು ಕೆಲವು ಆರೋಪಿಗಳು ನಡೆಸುತ್ತಿದ್ದ ಟ್ಯೂಷನ್ ಕ್ಲಾಸ್‌ಗಳ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುವ ಆಸೆಯು ಈ ಸೋರಿಕೆಗೆ ಕಾರಣ ಎಂದು ಸಿಬಿಐ ಅಭಿಪ್ರಾಯಪಟ್ಟಿದೆ.

ತಪಾಸಣೆ ವ್ಯವಸ್ಥೆಯೇ ಮಾಯ!

ಎನ್‌ಟಿಎನಲ್ಲಿದ್ದ ಲೋಪದೋಷಗಳನ್ನು ಸಿಬಿಐ ಎತ್ತಿಹಿಡಿದಿದ್ದು, ಎನ್‌ಟಿಎಯ ಗೌಪ್ಯ ವಿಭಾಗಕ್ಕೆ ಪ್ರವೇಶಿಸುವಾಗ ಅಥವಾ ನಿರ್ಗಮಿಸುವಾಗ ತಜ್ಞರನ್ನು ತಪಾಸಣೆ ಮಾಡುವ ಯಾವುದೇ ಅಭ್ಯಾಸ ಇರಲಿಲ್ಲ. ಆರೋಪಿ ಪಿ.ವಿ. ಕುಲಕರ್ಣಿ (A-2) 31.03.2026 ರಿಂದ 02.04.2026 ರವರೆಗೆ ಅಂದರೆ 3 ದಿನಗಳ ಅವಧಿಯಲ್ಲಿ ಮೂರು ಸೆಟ್ ಪ್ರಶ್ನೆಗಳಿಗೆ (ಒಟ್ಟು 135 ಪ್ರಶ್ನೆಗಳು) ಬ್ಯಾಕ್-ಟ್ರಾನ್ಸ್‌ಲೇಷನ್ ಕೆಲಸ ಮಾಡಿದ್ದರು ಎಂದು ಚಾರ್ಜ್‌ಶೀಟ್ ಹೇಳಿದೆ.

ಚಾರ್ಜ್‌ಶೀಟ್‌ನಲ್ಲಿ ಮೂವರು ಎನ್‌ಟಿಎ ವಿಷಯ ತಜ್ಞರು, ಕೋಚಿಂಗ್ ಸಂಸ್ಥೆಗಳಿಗೆ ಸಂಬಂಧಿಸಿದ ವ್ಯಕ್ತಿಗಳು, ಮಧ್ಯವರ್ತಿಗಳು ಮತ್ತು ಫಲಾನುಭವಿ ಅಭ್ಯರ್ಥಿಗಳು ಸೇರಿದಂತೆ 13 ಆರೋಪಿಗಳನ್ನು ಹೆಸರಿಸಲಾಗಿದೆ. ಪ್ರಶ್ನೆ ಪತ್ರಿಕೆಯನ್ನು ಅಂತಿಮಗೊಳಿಸುವ ಮತ್ತು ವಿತರಿಸುವ ಮೊದಲು ಈ ಒಳಗಿನವರೇ ತಮ್ಮ ಅಧಿಕೃತ ಪ್ರವೇಶವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

92 ಕಡೆಗಳಲ್ಲಿ ಶೋಧ ಕಾರ್ಯ!..

ಈ ಆರೋಪಗಳು ಸಿಬಿಐ ಚಾರ್ಜ್‌ಶೀಟ್‌ನ ಭಾಗವಾಗಿದ್ದು, ಇನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಬೇಕಿದೆ. ಅನುಬಂಧಗಳು ಮತ್ತು ಸಂಬಂಧಿತ ಪತ್ರಗಳನ್ನು ಒಳಗೊಂಡಂತೆ ಸಿಬಿಐನ ದಾಖಲೆಗಳ ಸಂಗ್ರಹವು 20,000 ಪುಟಗಳನ್ನು ಹೊಂದಿದ್ದು, ಇದನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.
ಬಿಎನ್‌ಎಸ್ ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ, ಕ್ರಿಮಿನಲ್ ನಂಬಿಕೆ ದ್ರೋಹ, ಸಾಕ್ಷ್ಯ ನಾಶ ಮತ್ತು ಇತರ ಅಪರಾಧಗಳಿಗಾಗಿ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಿಮಿನಲ್ ದುರ್ನಡತೆಯ ಅಪರಾಧಕ್ಕಾಗಿ, ಮತ್ತು ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆ) ಕಾಯ್ದೆ, 2024 ರ ಅಡಿಯ ಅಪರಾಧಗಳಿಗಾಗಿ ಸಿಬಿಐ 13 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಚಾರ್ಜ್‌ಶೀಟ್‌ನಲ್ಲಿ ಸಿಬಿಐ 360 ಸಾಕ್ಷಿಗಳು, 422 ದಾಖಲೆಗಳು ಮತ್ತು 43 ವಸ್ತು ಸಾಕ್ಷಿಗಳನ್ನು ಉಲ್ಲೇಖಿಸಿದೆ. ಚಾರ್ಜ್‌ಶೀಟ್‌ನಲ್ಲಿರುವ ಎಲ್ಲಾ 13 ಜನರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮೇ 12 ರಂದು ಎಫ್‌ಐಆರ್ ದಾಖಲಿಸಿಕೊಂಡ ಸಿಬಿಐ, ತಕ್ಷಣವೇ 72 ಅಧಿಕಾರಿಗಳು/ಸಿಬ್ಬಂದಿ ಮತ್ತು ಎಂಟು ಸೈಬರ್ ಫೊರೆನ್ಸಿಕ್ ತಜ್ಞರನ್ನೊಳಗೊಂಡ ಹಲವು ತಂಡಗಳನ್ನು ರಚಿಸಿತ್ತು. ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ, ದೆಹಲಿ ಮತ್ತು ಇತರ ರಾಜ್ಯಗಳ 92 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಈ ಶೋಧಗಳಿಂದ ಡಿಜಿಟಲ್ ಮತ್ತು ಸಂವಹನ ಸಾಧನಗಳು, ದಾಖಲೆಗಳು ಮುಂತಾದ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸಾಕ್ಷ್ಯಗಳ ಫೊರೆನ್ಸಿಕ್ ಇಮೇಜಿಂಗ್ ಮತ್ತು ವಿಶ್ಲೇಷಣೆಯನ್ನು ನಡೆಸಲಾಗಿದೆ(ಏಜೆನ್ಸೀಸ್).