Melody | ಸ್ಕೂಲ್ ಬ್ಯಾಗ್‌ನಿಂದ ರೋಮ್ ಕೋಟೆಯವರೆಗೆ! 
ದೇಶ

ಸ್ಕೂಲ್ ಬ್ಯಾಗ್‌ನಿಂದ ರೋಮ್ ಕೋಟೆಯವರೆಗೆ!...1 ರೂಪಾಯಿಯ ಇಂಡಿಯನ್​ ಟಾಫಿ ವಿಶ್ವ ರಾಜಕಾರಣದ ಅಸ್ತ್ರವಾಗಿದ್ದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಅಸಲಿ ಕಹಾನಿ | Melody

Melody: 1983ರಲ್ಲಿ ಪಾರ್ಲೆ (Parle) ಸಂಸ್ಥೆ ಮೆಲೊಡಿ ಚಾಕೊಲೇಟ್ ಮಾರುಕಟ್ಟೆಗೆ ಪರಿಚಯಿಸಿದಾಗ, ಈ ಪುಟ್ಟ ಕ್ಯಾರಮೆಲ್-ಚಾಕೊಲೇಟ್ ಮಿಠಾಯಿ ಎಂದಾದರೂ ಒಂದು ದಿನ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ (International Diplomacy) ಭಾಗವಾಗಬಹುದು ಎಂಬುದನ್ನು ಬಹುಶಃ ಯಾರೂ ಊಹಿಸಿರಲಿಲ್ಲವೇನೋ.
ಶಾಲೆಯ ಬ್ಯಾಗುಗಳಲ್ಲಿ, ಗಲ್ಲಿಯ ಕಿರಾಣಿ ಅಂಗಡಿಗಳಲ್ಲಿ ಚಿಲ್ಲರೆ ಕಾಸಿಗೆ ಸಿಗುತ್ತಿದ್ದ ಈ 1 ರೂಪಾಯಿಯ ಸಾಮಾನ್ಯ ಚಾಕೊಲೇಟ್, ಇಂದು ಇಂಟರ್ನೆಟ್ ಜಗತ್ತಿನ ಅತ್ಯಂತ ಜನಪ್ರಿಯ ರಾಜಕೀಯ ಮೀಮ್ (Meme) ಆದ ಮೆಲೋಡಿ (Melodi) ಗೆ ಅಧಿಕೃತ ಮುದ್ರೆ ಒತ್ತಿದೆ. ಹೌದು, ರೋಮ್‌ನಲ್ಲಿ ನಡೆದ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಹೆಮ್ಮೆಯ ಮೆಲೊಡಿ ಟಾಫಿಗಳನ್ನು ಉಡುಗೊರೆಯಾಗಿ ನೀಡಿದ್ದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಭಾರತೀಯರ ಭಾವನೆಯಾಗಿತ್ತು ಮೆಲೊಡಿ!

1980ರ ದಶಕದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಮೆಲೊಡಿ, ಮಧ್ಯಮ ವರ್ಗದ ಜೇಬಿಗೆ ಹೊರೆಯಾಗದಂತೆ ವಿಶಿಷ್ಟ ಕ್ಯಾರಮೆಲ್ ಮತ್ತು ಒಳಗಡೆ ಕರಗುವ ಚಾಕೊಲೇಟ್ ರುಚಿಯೊಂದಿಗೆ ಲಾಂಚ್ ಆಗಿತ್ತು. ಮೆಲೊಡಿ ಇತ್ನಿ ಚಾಕೊಲೇಟಿ ಕ್ಯು ಹೈ? (ಮೆಲೊಡಿ ಇಷ್ಟೊಂದು ಚಾಕೊಲೇಟಿ ಯಾಕಿದೆ?) ಎಂಬ ಜಾಹೀರಾತು ಇಂದಿಗೂ ಭಾರತೀಯರ ಮನಸಲ್ಲಿ ಅಚ್ಚೊತ್ತಿದೆ. ಮಾರುಕಟ್ಟೆಗೆ ಎಷ್ಟೇ ವಿದೇಶಿ ಬ್ರ್ಯಾಂಡ್‌ಗಳು ಬಂದರೂ ಮೆಲೊಡಿ ತನ್ನ ಪ್ಯಾಕಿಂಗ್ ಮತ್ತು ಟೇಸ್ಟ್ ಬದಲಿಸದೇ ತಲೆಮಾರುಗಳನ್ನು ದಾಟಿ ಭಾರತೀಯರ ನೆನಪಿನ ಭಾಗವಾಗಿ ಉಳಿದುಕೊಂಡಿತು.

ಮೆಲೊಡಿ (Melodi) ಟ್ರೆಂಡ್ ಶುರುವಾಗಿದ್ದು ಹೇಗೆ?

ಈ ಚಾಕೊಲೇಟ್ ಕೇವಲ ಮೀಮ್ ಆಗಿ ಬದಲಾಗಿದ್ದು 2023ರ ದೆಹಲಿ ಜಿ-20 ಶೃಂಗಸಭೆಯ ಸಂದರ್ಭದಲ್ಲಿ. ಪ್ರಧಾನಿ ಮೋದಿ ಮತ್ತು ಇಟಲಿ ಪ್ರಧಾನಿ ಮೆಲೋನಿ ಒಟ್ಟಿಗೆ ನಗುತ್ತಿರುವ ಫೋಟೋಗಳು ವೈರಲ್ ಆದಾಗ, ನೆಟ್ಟಿಗರು ಅವರಿಬ್ಬರ ಹೆಸರನ್ನು (Modi + Meloni) ಸೇರಿಸಿ Melodi ಎಂದು ಕರೆಯಲು ಆರಂಭಿಸಿದರು.
ಸಾಮಾನ್ಯವಾಗಿ ರಾಜಕಾರಣಿಗಳು ಇಂತಹ ಜೋಕ್‌ಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ 2024ರ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೆಲೋನಿ ಅವರೇ ಮೋದಿಯವರ ಜೊತೆ ಸೆಲ್ಫಿ ಕ್ಲಿಕ್ಕಿಸಿ, ಅದಕ್ಕೆ #Melodi ಎಂದು ಹ್ಯಾಶ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಿದರು. ಇದು ಇಂಟರ್ನೆಟ್ ಲೋಕದಲ್ಲಿ ಇತಿಹಾಸ ಸೃಷ್ಟಿಸಿತು.

ರೋಮ್ ಸಭೆಯಲ್ಲಿ ಅಚ್ಚರಿಯ ಉಡುಗೊರೆ!

ಈ ವಾರ ಇಟಲಿಯ ರೋಮ್‌ನಲ್ಲಿ ನಡೆದ ಉಭಯ ದೇಶಗಳ ನಾಯಕರ ಸಭೆಯಲ್ಲಿ ಈ ಇಂಟರ್ನೆಟ್ ಮೀಮ್‌ಗೆ ಅಧಿಕೃತ ಸಿಹಿ ಸಿಕ್ಕಿತು. ಪ್ರಧಾನಿ ಮೋದಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೊಡಿ ಚಾಕೊಲೇಟ್ ಪ್ಯಾಕೆಟ್‌ಗಳನ್ನು ಗಿಫ್ಟ್ ಆಗಿ ನೀಡಿದರು. ಮೆಲೋನಿ ಮೋದಿಯವರಿಗೆ ಧನ್ಯವಾದ ತಿಳಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಕ್ಷಣ ಇಂಟರ್ನೆಟ್ ಲೋಕ ಧೂಳೆಬ್ಬಿಸಿತು.
ನೆಟ್ಟಿಗರು ಮೆಲೊಡಿ ಚಾಕೊಲೇಟ್ ಕವರ್‌ಗಳ ಮೇಲೆ ಮೋದಿ-ಮೆಲೋನಿ ಮುಖಗಳನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾರಂಭಿಸಿದರು. ಕೆಲವರು ಇದನ್ನು ಟಾಫಿ ಡಿಪ್ಲೊಮಸಿ (Toffee Diplomacy) ಎಂದು ಕರೆದರೆ, ಇನ್ನು ಕೆಲವರು 2026ರ ಅತ್ಯಂತ ಸಿಹಿಯಾದ ಜಿಯೋಪಾಲಿಟಿಕಲ್ ಕ್ರಾಸ್‌ಓವರ್ ಎಂದು ಬಣ್ಣಿಸಿದರು. ಇಲ್ಲಿ ವಿಶೇಷವೇನೆಂದರೆ, ಮೋದಿ ಯಾವುದೇ ದುಬಾರಿ ವಜ್ರ ಅಥವಾ ಐಷಾರಾಮಿ ಉಡುಗೊರೆ ನೀಡಲಿಲ್ಲ, ಬದಲಾಗಿ ಭಾರತದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ತಿಂದು ಬೆಳೆದ 1 ರೂಪಾಯಿಯ ಚಾಕೊಲೇಟ್ ನೀಡಿದ್ದರು.

ಸಾಫ್ಟ್ ಪವರ್‌ನ ಹೊಸ ರೂಪ!

ರಾಜತಾಂತ್ರಿಕತೆ ಎಂದರೆ ಕೇವಲ ಒಪ್ಪಂದಗಳು, ದೊಡ್ಡ ಭಾಷಣಗಳು ಅಥವಾ ಹಸ್ತಲಾಘವ ಮಾತ್ರವಲ್ಲ, ಕೆಲವೊಮ್ಮೆ ಇಂತಹ ಪುಟ್ಟ ಸಂಕೇತಗಳೂ ದೊಡ್ಡ ಪರಿಣಾಮ ಬೀರುತ್ತವೆ. 1983ರಲ್ಲಿ ಶಾಲೆಯ ಗೇಟ್‌ಗಳ ಹೊರಗೆ ಮಾರಾಟವಾಗುತ್ತಿದ್ದ ಒಂದು ಪುಟ್ಟ ಕ್ಯಾರಮೆಲ್ ಚಾಕೊಲೇಟ್, ಇಂದು ಇಂಟರ್ನೆಟ್ ಕಲ್ಚರ್ ಮತ್ತು ರಾಜಕೀಯದ ನೆರವಿನಿಂದ ಭಾರತ ಮತ್ತು ಇಟಲಿ ನಡುವಿನ ಸ್ನೇಹದ ಜಾಗತಿಕ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ ಅಂದರೆ ಅತಿಶಯೋಕ್ತಿ ಆಗಲಾರದು(ಏಜೆನ್ಸೀಸ್​​).