Fuel Price Hike | ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಆಕ್ರೋಶ 
ದೇಶ

ಮೋದಿ ಸರ್ಕಾರಕ್ಕೆ ಜನರ ಹಿತಕ್ಕಿಂತ ತೈಲ ಕಂಪನಿಗಳ ಲಾಭವೇ ಮುಖ್ಯ; ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಆಕ್ರೋಶ | Fuel Price Hike

Fuel Price Hike: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಸರಣಿ ಏರಿಕೆಯ ವಿರುದ್ಧ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ, ಪ್ರಧಾನಿ ನರೇಂದ್ರ ಮೋದಿ ತೈಲ ಕಂಪನಿಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಾ ಸಾಮಾನ್ಯ ಜನರ ಮೇಲೆ ಹೊರೆ ಹೇರುತ್ತಿದ್ದಾರೆ ಎಂದು ಆರೋಪಿಸಿದೆ.
ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಷಿಕೊಂಡಿರುವ ಕಾಂಗ್ರೆಸ್, ಪ್ರಧಾನಿ ಮೋದಿಯವರನ್ನು ಹಣದುಬ್ಬರ ಪುರುಷ ಎಂದು ಲೇವಡಿ ಮಾಡಿದೆ. ಕಳೆದ ಒಂಬತ್ತು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಐದು ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದ್ದು, ಶನಿವಾರ ಮತ್ತೊಮ್ಮೆ ಪೆಟ್ರೋಲ್ ಬೆಲೆಯನ್ನು 94 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 95 ಪೈಸೆಯಷ್ಟು ಏರಿಕೆ ಮಾಡಲಾಗಿದೆ ಎಂದು ಉಲ್ಲೇಖಿಸಿದೆ.
ಹಣದುಬ್ಬರದಿಂದ ತತ್ತರಿಸುತ್ತಿರುವ ನಾಗರಿಕರಿಗೆ ಪರಿಹಾರ ನೀಡುವ ಬದಲು, ಮೋದಿ ಸರ್ಕಾರಕ್ಕೆ ತೈಲ ಕಂಪನಿಗಳ ಲಾಭದ ಬಗ್ಗೆಯೇ ಹೆಚ್ಚಿನ ಕಾಳಜಿ ಇದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಮೋದಿ ಅವರಿಗೆ ಕೇವಲ ತೈಲ ಕಂಪನಿಗಳ ಲಾಭದ ಮೇಲಷ್ಟೇ ಕಣ್ಣಿದೆ, ಪ್ರಪಂಚದಾದ್ಯಂತದ ಸರ್ಕಾರಗಳು ತಮ್ಮ ಜನರಿಗೆ ಪರಿಹಾರವನ್ನು ನೀಡುತ್ತಿದ್ದರೆ, ಇಲ್ಲಿನ ಸರ್ಕಾರವು ತನ್ನದೇ ಆದ ನಾಗರಿಕರನ್ನು ಲೂಟಿ ಮಾಡುವಲ್ಲಿ ಬ್ಯುಸಿಯಾಗಿದೆ, ಕನಿಷ್ಠ ಪಕ್ಷ ಒಮ್ಮೆಯಾದರೂ ಜನರ ಕಲ್ಯಾಣದ ಬಗ್ಗೆ ಯೋಚಿಸಿ, ಬಂಡವಾಳಶಾಹಿಗಳಿಗೆ ಎಷ್ಟು ದಿನ ಹೀಗೆ ಬೆಂಬಲ ನೀಡುತ್ತೀರಿ ಎಂದು ಪಕ್ಷವು ಪ್ರಶ್ನಿಸಿದೆ.
ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ನಿರಂತರ ಏರಿಳಿತಗಳ ನಡುವೆ, ಶನಿವಾರ ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. ಕಳೆದ ಹತ್ತು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಇಂಧನ ದರ ಏರಿಕೆಯಾಗಿರುವುದು ಇದು ಮೂರನೇ ಬಾರಿಯಾಗಿದೆ. ಶನಿವಾರದ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 87 ಪೈಸೆ ಏರಿಕೆಯಾಗಿ ಲೀಟರ್‌ಗೆ 99.51 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ಬೆಲೆ 91 ಪೈಸೆ ಹೆಚ್ಚಳವಾಗಿ ಲೀಟರ್‌ಗೆ 92.49 ರೂಪಾಯಿಗೆ ತಲುಪಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆಯಲ್ಲಿ 94 ಪೈಸೆ ಹೆಚ್ಚಳವಾಗಿದ್ದು ಲೀಟರ್‌ಗೆ 110.64 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ಬೆಲೆ 95 ಪೈಸೆ ಏರಿಕೆಯಾಗಿ ಲೀಟರ್‌ಗೆ 97.02 ರೂಪಾಯಿಗೆ ಮುಟ್ಟಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ಬೆಲೆಯಲ್ಲಿ 90 ಪೈಸೆ ಏರಿಕೆಯಾಗಿದ್ದು ಲೀಟರ್ ದರ 108.49 ರೂಪಾಯಿಯಾಗಿದೆ ಮತ್ತು ಡೀಸೆಲ್ ಬೆಲೆ 94 ಪೈಸೆ ಹೆಚ್ಚಳವಾಗಿ ಲೀಟರ್‌ಗೆ 95.02 ರೂಪಾಯಿಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 82 ಪೈಸೆ ಹೆಚ್ಚಳದೊಂದಿಗೆ ಲೀಟರ್‌ಗೆ 105.31 ರೂಪಾಯಿಗೆ ಏರಿದ್ದರೆ, ಡೀಸೆಲ್ ದರ 87 ಪೈಸೆ ಏರಿಕೆಯಾಗಿ ಲೀಟರ್‌ಗೆ 96.98 ರೂಪಾಯಿಗೆ ತಲುಪಿದೆ.
ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಜಗತ್ತು ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪ್ರಮುಖ ಕಡಲ ವ್ಯಾಪಾರ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಸಾರಿಗೆ ದಿಗ್ಬಂಧನ ಉಂಟಾಗಿದೆ. ಈ ಜಾಗತಿಕ ಪರಿಸ್ಥಿತಿಯ ನಡುವೆ ಇಂಧನ ಸಂರಕ್ಷಣೆಗೆ ಕರೆಗಳು ಕೇಳಿಬರುತ್ತಿರುವ ಬೆನ್ನಲ್ಲೇ, ದೇಶದಲ್ಲಿ ಸತತವಾಗಿ ಈ ತೈಲ ಬೆಲೆ ಏರಿಕೆಗಳು ಸಂಭವಿಸುತ್ತಿವೆ ಎಂದು ಎಎನ್​​ಐ ವರದಿ ಮಾಡಿದೆ(ಏಜೆನ್ಸೀಸ್​​).