Kunki Choudhury | ಈ ಬಾರಿಯ ಅಸ್ಸಾಂ ಚುನಾವಣೆಯ ಅತಿಕಿರಿಯ ಅಭ್ಯರ್ಥಿ ಕುಂಕಿ ಚೌಧರಿ 
ದೇಶ

ಬಿಜೆಪಿ ಹಿರಿಯ ನಾಯಕನಿಗೆ 26ರ ಯುವತಿಯ ಸವಾಲ್​.. ಅಸ್ಸಾಂನ ಅತಿ ಕಿರಿಯ ಅಭ್ಯರ್ಥಿ ಕುಂಕಿ ಚೌಧರಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ | Kunki Chowdhury

Kunki Choudhury: ಅಸ್ಸಾಂ ರಾಜಕೀಯದ ಅಪರೂಪದ ಕ್ಷಣ ಸಾಕ್ಷಿಯಾಗುತ್ತಿದ್ದು, ಒಂದೆಡೆ ದಶಕಗಳ ರಾಜಕೀಯ ಅನುಭವ ಹೊಂದಿರುವ ಬಿಜೆಪಿಯ ಹಿರಿಯ ನಾಯಕ ವಿಜಯ್ ಕುಮಾರ್ ಗುಪ್ತಾ ಇದ್ದರೆ, ಅವರ ಎದುರಾಳಿಯಾಗಿ ಕೇವಲ 26 ವರ್ಷದ ಉತ್ಸಾಹಿ ಯುವತಿ ಕುಂಕಿ ಚೌಧರಿ ಕಣಕ್ಕಿಳಿದಿದ್ದಾರೆ.
ಕಂದು ಬಣ್ಣದ ಕುರ್ತಾ ಪೈಜಾಮ ಧರಿಸಿ, ಮುಖದಲ್ಲಿ ಆತ್ಮವಿಶ್ವಾಸದ ನಗೆ ಹೊತ್ತು ಅಸ್ಸಾಂ ರಾಷ್ಟ್ರೀಯ ಪರಿಷತ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕುಂಕಿ ಮನೆ-ಮನೆ ಪ್ರಚಾರ ನಡೆಸುತ್ತಿರುವುದು ಗುವಾಹಟಿಯ ಜನರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಕೇವಲ 26 ವರ್ಷದ ಕುಂಕಿ ಚೌಧರಿ ಈ ಬಾರಿಯ ಚುನಾವಣೆಯ ಅತಿಕಿರಿಯ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಇವರ ಶೈಕ್ಷಣಿಕ ಹಿನ್ನೆಲೆ ಬೆರಗುಗೊಳಿಸುವಂತಿದೆ. ಮುಂಬೈನ ಪ್ರತಿಷ್ಠಿತ ನರ್ಸೀ ಮಾನ್ಜೀ ಇನ್‌ಸ್ಟಿಟ್ಯೂಟ್‌ನಲ್ಲಿ ಪದವಿ ಮುಗಿಸಿದ್ದು, ಲಂಡನ್‌ನ ಯೂನಿವರ್ಸಿಟಿ ಕಾಲೇಜಿನಿಂದ ಎಜುಕೇಷನ್​ ಲೀಡರ್​ಶಿಪ್​ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವಿದೇಶದಲ್ಲಿ ಉನ್ನತ ಶಿಕ್ಷಣ ಮುಗಿಸಿ ಕಳೆದ ವರ್ಷವಷ್ಟೇ ತವರಿಗೆ ಮರಳಿದ ಕುಂಕಿ, ತಮ್ಮ ಕುಟುಂಬದ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ರಾಜಕೀಯ ನನಗೇನೋ ಹೊಸದು, ಆದರೆ ಅಸ್ಸಾಂ ಜನರಿಗಾಗಿ ಕೆಲಸ ಮಾಡಲು ಸಿಕ್ಕ ಈ ಅವಕಾಶವನ್ನು ನಾನು ಸದುಪಯೋಗಪಡಿಸಿಕೊಳ್ಳುತ್ತೇನೆ ಎಂದು ಅವರು ಮಾಧ್ಯವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಗುವಾಹಟಿಯ ಬೀದಿಬೀದಿಗಳಲ್ಲಿ ಸಂಚರಿಸುತ್ತಾ ರಸ್ತೆಬದಿಯ ವ್ಯಾಪಾರಿಗಳಿಂದ ಹಿಡಿದು ಗಣ್ಯರವರೆಗೆ ಪ್ರತಿಯೊಬ್ಬರಿಗೂ ಕರಪತ್ರಗಳನ್ನು ಹಂಚುತ್ತಿರುವ ಕುಂಕಿಯನ್ನು ಬೆಂಬಲಿಗರು ಅಸ್ಸಾಂನ ಮಗಳು ಎಂದೇ ಕರೆಯುತ್ತಿದ್ದಾರೆ. ಎದುರಾಳಿ ವಿಜಯ್ ಗುಪ್ತಾರ ಅನುಭವವನ್ನು ಗೌರವಿಸುವ ಕುಂಕಿ, ಯಾರು ಅಧಿಕಾರಕ್ಕೆ ಬರಬೇಕು ಎಂಬುದನ್ನು ನಿರ್ಧರಿಸುವವರು ಅಸ್ಸಾಂನ ಜನರು ಮಾತ್ರ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.‘
ಕುಂಕಿ ಕಾರ್ಯಸೂಚಿ ಅತ್ಯಂತ ಸ್ಪಷ್ಟವಾಗಿದ್ದು, ನಗರದ ಪ್ರಮುಖ ಸಮಸ್ಯೆಯಾದ ಪ್ರವಾಹ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವುದು, ಮಹಿಳೆಯರ ಸುರಕ್ಷತೆ, ಹೈಟೆಕ್ ಪಾರ್ಕಿಂಗ್ ಮತ್ತು ಯುವಜನತೆಗೆ ಕೌಶಲ್ಯ ಆಧಾರಿತ ಶಿಕ್ಷಣ ನೀಡುವುದು ಅವರ ಪ್ರಮುಖ ಗುರಿಗಳಾಗಿವೆ.
ಈ ಬದಲಾವಣೆಯನ್ನು ಅನೇಕರು ಸ್ವಾಗತಿಸುತ್ತಿದ್ದು, ಕುಂಕಿ ಪ್ರಚಾರ ಶೈಲಿ ಮತ್ತು ಅವರ ದೂರದೃಷ್ಟಿ ನಮ್ಮ ಮೇಲೆ ಪ್ರಭಾವ ಬೀರಿದೆ. ನಗರದ ನೀರಿನ ಕೊರತೆ ಮತ್ತು ಕಸ ವಿಲೇವಾರಿಯಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ನಮಗಿದೆ ಎನ್ನುತ್ತಾರೆ ಸ್ಥಳೀಯ ಮತದಾರರಾದ ಮನೋಜಿತ್ ಚೌಧರಿ. ಏಪ್ರಿಲ್ 9 ರಂದು ನಡೆಯಲಿರುವ ಚುನಾವಣೆಯು ಅಸ್ಸಾಂನಲ್ಲಿ ಅನುಭವ ಮತ್ತು ಆಧುನಿಕ ಯುವ ನಾಯಕತ್ವದ ನಡುವಿನ ಘರ್ಷಣೆಯಾಗಿ ಬದಲಾಗಿದ್ದು, ಇಡೀ ರಾಜ್ಯದ ಕಣ್ಣು ಈಗ ಸೆಂಟ್ರಲ್ ಗುವಾಹಟಿಯತ್ತ ನೆಟ್ಟಿದೆ(ಏಜೆನ್ಸೀಸ್​).