ಹೆಂಡತಿ ಸಲುವಾಗಿ 'ಹೌಸ್ ಹಸ್ಬೆಂಡ್' ಆಗಿ ಬದಲಾದ ಬಿಹಾರದ ಅಮಿತ್​ ಕುಮಾರ್​ 
ದೇಶ

ಹೆಂಡತಿಯ ಕರಿಯರ್‌ಗಾಗಿ 'ಹೌಸ್ ಹಸ್ಬೆಂಡ್' ಆದ ಮೆಕ್ಯಾನಿಕಲ್ ಎಂಜಿನಿಯರ್: ಗಂಡನಿದ್ದರೆ ಹೀಗಿರಬೇಕು ಎಂದ ನೆಟ್ಟಿಗರು! House Husband

ಬಿಹಾರ್​: ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಒಂದು ಮಾತು ಕೇಳಿಬರುತ್ತದೆ ಹೆಂಡತಿಯ ದುಡ್ಡಿನಲ್ಲಿ ತಿನ್ನೋದು ನಾಚಿಕೆಗೇಡು ಅಂತ. ಆದರೆ, ಈ ಮಾತಿಗೆಲ್ಲಾ ತಲೆಕೆಡಿಸಿಕೊಳ್ಳದ ಅಮಿತ್ ಕುಮಾರ್ ದುಬೆ ಎಂಬುವರು ಈಗ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಇವರು, ಈಗ ತಮ್ಮ ಪತ್ನಿಗೋಸ್ಕರ ಹೌಸ್ ಹಸ್ಬಂಡಾ(House Husband)ಗಿ ಬದಲಾಗಿದ್ದಾರೆ.

ಕಥೆ ಶುರುವಾಗಿದ್ದು ಹೇಗೆ?

ಅಮಿತ್ ಮತ್ತು ಪ್ರೀತಿ ಮದುವೆಯಾಗುವಾಗ ಇಬ್ಬರೂ ಚೆನ್ನಾಗಿಯೇ ದುಡಿಯುತ್ತಿದ್ದರು. ಪ್ರೀತಿ ಆರಂಭದಿಂದಲೂ ತುಂಬಾ ಜವಾಬ್ದಾರಿಯುತ ಹುಡುಗಿ. ಮದುವೆಯಾದ ಮೇಲೂ ಆಫೀಸ್ ಕೆಲಸ ಮತ್ತು ಮನೆ ಕೆಲಸಗಳ ನಡುವೆ ನಲುಗುತ್ತಿದ್ದರು. ಅತಿಯಾದ ಒತ್ತಡದಿಂದಾಗಿ ಪ್ರೀತಿಯ ಆರೋಗ್ಯ ದಿನದಿಂದ ದಿನಕ್ಕೆ ಹಾಳಾಗುತ್ತಿತ್ತು. ಕೆಲಸ ಮತ್ತು ಆರೋಗ್ಯದ ನಡುವೆ ಆಯ್ಕೆ ಮಾಡಬೇಕಾದ ಸಂದರ್ಭ ಬಂದಾಗ, ಅಮಿತ್ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡರು. ನೋಡು ಪ್ರೀತಿ, ನಾನು ಮನೆಯನ್ನು ನೋಡಿಕೊಳ್ಳುತ್ತೇನೆ, ನೀನು ನಿನ್ನ ಕೆಲಸದ ಮೇಲೆ ಗಮನ ಕೊಡು. ನಿನ್ನ ಕನಸುಗಳನ್ನು ನನಸು ಮಾಡಿಕೋ ಎಂದು ಹೇಳಿ ಆಫೀಸ್‌ಗೆ ಗುಡ್‌ಬೈ ಹೇಳಿದ್ದಾರೆ.

ಜನ ಏನೆಲ್ಲಾ ಹೇಳಿದರು?

ಸಮಾಜ ಅಲ್ವಾ, ಸುಮ್ಮನಿರುತ್ತಾ? ಹೆಂಡತಿ ಸಂಪಾದಿಸುತ್ತಿದ್ದಾಳೆ ಅಂತ ಮನೆಗೆ ಸೀಮಿತವಾದ್ರಾ?, ಗಂಡು ಅಂದ್ರೆ ದುಡಿಯಲೇಬೇಕು ಅಲ್ವಾ? ಅಂತೆಲ್ಲಾ ಅನೇಕರು ಟೀಕಿಸಿದರು. ಆದರೆ, ಅಮಿತ್ ಇವ್ಯಾವುದಕ್ಕೂ ಕ್ಯಾರೆ ಅಂದಿಲ್ಲ. ಪ್ರೀತಿ ಅವರಿಗೆ ಬಡ್ತಿ ಸಿಕ್ಕಾಗಲೆಲ್ಲಾ ಅವರು ಖುಷಿ ಪಟ್ಟರು. ಮುಜಫರ್‌ಪುರದಿಂದ ಕೋಲ್ಕತ್ತಾ, ಅಲ್ಲಿಂದ ಭುವನೇಶ್ವರ. ಹೀಗೆ ಸಿಟಿ ಬದಲಾದ್ರೂ ಅಮಿತ್ ಮಾತ್ರ ತಮ್ಮ ಪಾತ್ರವನ್ನು ಬದಲಾಯಿಸಲಿಲ್ಲ. ಐದು ವರ್ಷದ ಮಗಳನ್ನು ನೋಡಿಕೊಳ್ಳುವುದು, ಅಡುಗೆ ಮಾಡುವುದು, ಮನೆ ಕ್ಲೀನ್ ಮಾಡುವುದು ಇದನ್ನೆಲ್ಲಾ ಯಾವುದೇ ಕೆಲಸದವರ ಸಹಾಯವಿಲ್ಲದೆ ಅಮಿತ್ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ನೆಟ್ಟಿಗರು ಫುಲ್​ ಫಿದಾ!

ಈ ದಂಪತಿಯ ಕಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ತಂಡಗಳಾಗಿದ್ದಾರೆ. ಹೆಚ್ಚಿನವರು ಅಮಿತ್ ಅವರ ಧೈರ್ಯಕ್ಕೆ ಭೇಷ್ ಎಂದಿದ್ದಾರೆ. ಒಬ್ಬ ಪುರುಷ ತನ್ನ ಅಹಂಕಾರವನ್ನು ಬದಿಗಿಟ್ಟು ಹೆಂಡತಿಯ ಬೆಳವಣಿಗೆಗೆ ಶ್ರಮಿಸುತ್ತಿರುವುದು ನಿಜಕ್ಕೂ ಸೆಲ್ಯೂಟ್ ಮಾಡಬೇಕಾದ ವಿಷಯ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಪ್ರತಿಯೊಬ್ಬ ಗೃಹಿಣಿ ಮಾಡುವ ಕೆಲಸಕ್ಕೂ ಇಷ್ಟೇ ಗೌರವ ಸಿಗಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ.
ಆದರೆ, ಕೆಲವರು ಇಬ್ಬರೂ ಕೆಲಸ ಮಾಡಿ ಕೆಲಸದವರನ್ನು ಇಟ್ಟುಕೊಳ್ಳಬಹುದಿತ್ತಲ್ಲಾ, ಇದ್ಯಾಕೆ ಬೇಕಿತ್ತು? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಮಿತ್ ಅವರೇ ಉತ್ತರ ನೀಡಿದ್ದಾರೆ. ನಾನು ಮಾಡಿದ್ದು ತ್ಯಾಗವಲ್ಲ, ಇದು ನಮ್ಮಿಬ್ಬರ ನಡುವಿನ ಸಹಕಾರ. ಪಾಲುದಾರರು ಅಂದಮೇಲೆ ಒಬ್ಬರನ್ನೊಬ್ಬರು ಅರ್ಥ ಮಾಡ್ಕೋಬೇಕು ಅಷ್ಟೇ ಎನ್ನುವುದು ಅಮಿತ್​ ಅವರ ವಾದವಾಗಿದೆ,(ಏಜನ್ಸೀಸ್​).