ಪೊಲೀಸರ ಬಾಂಬ್ ಸ್ಕ್ವಾಡ್ ಶ್ವಾನಗಳಾದ ಮ್ಯಾಕ್ಸ್, ಸೀಸರ್, ಟೈಗರ್ ಮತ್ತು ಸುಲ್ತಾನ್ 
ದೇಶ

ಮ್ಯಾಕ್ಸ್, ಸೀಸರ್, ಟೈಗರ್, ಸುಲ್ತಾನ್: 26/11 ಉಗ್ರರ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ್ದ 'ಮೂಕ ವೀರರ' ರೋಚಕ ಕಥೆ ಇಲ್ಲಿದೆ! 26/11 Attack

ಮುಂಬೈ: 26/11 ರ ದಾಳಿ ನಡೆದು ಇಂದಿಗೆ ಭರ್ತಿ 18 ವರ್ಷ ತುಂಬಿದೆ. 2008 ರ ಆ ನಾಲ್ಕು ದಿನವನ್ನು ಭಾರತ ಅದರಲ್ಲೂ ಮುಂಬೈ ಕಂಡ ಅತ್ಯಂತ ಕರಾಳ ದಿನಗಳಲ್ಲಿ ಒಂದಾಗಿದೆ. ಪರ ದೇಶದಿಂದ ಬಂದಿಳಿದ ಭಯೋತ್ಪಾದರು ಮುಂಬೈಅನ್ನು ಗುರಿಯಾಗಿಸಿ, ರಕ್ತದೊಕುಳಿಯನ್ನೇ ಹರಿಸಿದರು.

ಈ ಸಂದರ್ಭದಲ್ಲಿ ನಾವು ಅಂದು ಪ್ರಾಣವನ್ನು ಲೆಕ್ಕಿಸದೇ ಹೋರಾಡಿದ ಸೈನಿಕರು, ಎನ್​ಎಸ್​ಜಿ ಕಮಾಂಡೋಗಳು ಹಾಗೂ ಮುಂಬೈ ಪೊಲೀಸರುನ್ನು ನೆನಪಿಸಿಕೊಳ್ಳಬೇಕು, ನೆನಪಿಸಿಕೊಳ್ಳುತ್ತೇವೆ. ಆದರೆ, ಇದೇ ಸಂದಿಗ್ದ ಪರಿಸ್ಥಿತಿಯಲ್ಲಿ ಆ ನಾಲ್ಕು ಶ್ವಾನಗಳ ಸಾಹಸಗಾಥೆಯನ್ನು ಕೂಡ ನಾವಿಂದು ನೆನಪಿಸಿಕೊಳ್ಳಲೇ ಬೇಕು.

ಬಾಂಬ್​ ಸ್ಕ್ವಾಡ್​​ ಶ್ವಾನಗಳಿಗೆ ಸಲಾಂ!

ಪಾಕಿಸ್ತಾನದಿಂದ ತರಬೇತಿ ಪಡೆದು, ಮುಂಬೈನ ಪ್ರಮುಖ ಪ್ರದೇಶಗಳಾದ ತಾಜ್​ ಹೋಟೆಲ್​, ನಾರಿಮನ್​ ಹೌಸ್​, ಕಾಮಾ ಆಸ್ಪತ್ರೆ, ಕೇಂದ್ರ ರೈಲ್ವೆ ನಿಲ್ದಾಣ ಮೊದಲಾದ ಕಡೆ ಈ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದರು.

ಕಂಡಕಂಡಲ್ಲಿ ಬಾಂಬ್​, ಗ್ರೆನೇಡ್​ ಎಸೆಯುತ್ತಾ, ಕಣ್ಮುಂದೆ ಕಾಣಿಸಿದವರಿಗೆ ಗುಂಡನ್ನು ಸಿಡಿಸುತ್ತಾ ಉದ್ವಿಗ್ನ ಸ್ಥಿತಿ ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಗುರುತಿಸಿ, ಅವರ ಬಳಿಯಿದ್ದ ಸ್ಪೋಟಕಗಳನ್ನು ಪತ್ತೆಹಚ್ಚಿ, ಅಪರ ಯೋಜನೆಗಳನೆಲ್ಲಾ ತಲೆಕೆಳಗೆ ಮಾಡಿದ್ದೆ ಈ ಬಾಂಬ್​ ಸ್ಕ್ವಾಡ್​​ ನಾಯಿಗಳಾಗಿವೆ.

ಮುಂಬೈ ಪೊಲೀಸರ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದಲ್ಲಿದ್ದ ನಾಲ್ಕು ಲ್ಯಾಬ್ರಡಾರ್‌ ತಳಿಯ ನಾಯಿಗಳಾದ ಮ್ಯಾಕ್ಸ್, ಟೈಗರ್, ಸುಲ್ತಾನ್ ಮತ್ತು ಸೀಸರ್ ಈ ಶ್ವಾನಗಳು ಸಲ್ಲಿಸಿದೆ ಅದ್ವೀತಿಯ ಸಾಹಸದ ಫಲವಾಗಿಯೇ ನಾವಿಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದರು ತಪ್ಪಾಗದು.

ಆರ್​​ಡಿಎಕ್ಸ್​ ಕಿಂಗ್​ ಮ್ಯಾಕ್ಸ್:

2008 ರ ಈ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಮ್ಯಾಕ್ಸ್ ಸುಮಾರು 8 ಕೆ.ಜಿ ಆರ್​​ಡಿಎಕ್ಸ್ ಹಾಗೂ 25 ಕ್ಕೂ ಹೆಚ್ಚಿನ ಹ್ಯಾಂಡ್​ ಗ್ರೇನೆಡ್​​ಗಳನ್ನು ಪತ್ತೆ ಹಚ್ಚಿ, ದಾಳಿಯ ತೀವ್ರತೆಯನ್ನು ತೀರಾ ಕಡಿಮೆಗೊಳಿಸಿತು.

ತಾಜ್​ ಹೋಟೆಲ್​ನಲ್ಲಿ ಅಡಗಿ ಕುಳಿತಿದ್ದ, ಉಗ್ರರ ಬಳಿ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಧೈರ್ಯವಾಗಿ ಮುನ್ನುಗುತ್ತಿದ್ದ ಮ್ಯಾಕ್ಸ್ ತನ್ನ ಅದ್ವತೀಯ ಸಾಧನಗೆಗಾಗಿ ಚಿನ್ನದ ಪದಕವನ್ನು ಪಡೆದುಕೊಂಡಿತು. 2015 ರಲ್ಲಿ ಸೇವಾ ನಿವೃತ್ತಿ ಹೊಂದಿದ ಈ ಶ್ವಾನ 2016 ರಲ್ಲಿ ನಿಧನಹೊಂದಿತು.

ರೈಲ್ವೆ ನಿಲ್ದಾಣದ ರಕ್ಷಕ ಸೀಸರ್:

ಮುಂಬೈ ಪ್ರವೇಶಿಸಿದ ಉಗ್ರರು ಛತ್ರಪತಿ ಶಿವಾಜಿ ಮಹಾರಾಜ್​ ರೈಲ್ವೆ ನಿಲ್ದಾಣದಲ್ಲಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿ, ಅಲ್ಲಿಂದ ಬೇರೆಡೆ ಪರಾರಿ ಆಗಿದ್ದರು. ಆದರೆ, ಅಲ್ಲಿ ಕೆಲವೊಂದಿಷ್ಟು ಬಾಂಬ್​ಗಳನ್ನು ಹಾಗೂ ಆರ್​​ಡಿಎಕ್ಸ್​ ಗಳನ್ನೂ ಹೂತಿಟ್ಟು ಹೋಗಿದ್ದಾರೆಂಬ ಮಾಹಿತಿ ಇತ್ತು.

ಇದರ ಬೆನ್ನಲ್ಲೇ ಸೀಸರ್ ಛತ್ರಪತಿ ಶಿವಾಜಿ ಮಹಾರಾಜ್​ ರೈಲ್ವೆ ನಿಲ್ದಾಣದಲ್ಲಿ ಸುಮಾರು 10 ಕ್ಕೂ ಅಧಿಕ ಗ್ರೇನೆಡ್​​ಗಳನ್ನು ಪತ್ತೆ ಹಚ್ಚಿವ ಮೂಲಕ ರೈಲ್ವೆ ನಿಲ್ದಾಣವನ್ನು ರಕ್ಷಿಸಿತು.

ತಾಜ್ ರಕ್ಷಣೆಗೆ ನಿಂತ ಟೈಗರ್​​:

ಇನ್ನೂ ಟೈಗರ್​, ತಾಜ್ ಹೋಟೆಲ್​ ಬಳಿ ಸುಮಾರು 8 ದಿನಗಳ ಗಸ್ತುನಿಂತಿದ್ದು, ಭಯೋತ್ಪಾದರೆಲ್ಲರೂ ಸತ್ತ ನಂತರವೂ ಹೋಟೆಲ್​ನ ಮೂಲೆ ಮೂಲೆಗೆ ತೆರಳಿ, ಅಲ್ಲಿ ಅಡಗಿರಬಹುದಾದ ಸ್ಪೋಟಕಗಳನ್ನು ಪತ್ತೆ ಹಚ್ಚುವಲ್ಲಿ ಟೈಗರ್​​ ಮೆರೆದ ಸಾಹಸ ಅಷ್ಟಿಷ್ಟಲ್ಲ. 2016 ರಲ್ಲಿ ಟೈಗರ್​ ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪಿತು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಸಲ್ಲಿಸಲಾಗಿತ್ತು.

ಎಲ್ಲರ ಸ್ನೇಹಿತ ಸುಲ್ತಾನ್​:

ಇನ್ನು ಸುಲ್ತಾನ್​ ಬೇರೆ ನಾಯಿಗಳ ರೀತಿ ಬಾಂಬ್​ಗಳನ್ನು ಪತ್ತೆಹಚ್ಚಲು ನೇರವಾಗಿ ಭಾಗಿಯಾಗದಿದ್ದರೂ, ಇತರ ನಾಯಿಗಳ ಜತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದ, ಅದರಲ್ಲೂ ಟೈಗರ್​ ಇತನ ಆಪ್ತಮಿತ್ರನಾಗಿದ್ದ. ತಾಜ್​ನಲ್ಲಿ ಇವನು ಬಾಂಬ್​ ಪತ್ತೆ ಹಚ್ಚಿಲ್ಲದಿದ್ದರೂ, ಗೊರೆಗಾಂವ್​ನಲ್ಲಿ ಇದೇ ಉಗ್ರರು ಹೂತಿಟ್ಟಿದ್ದ ಸ್ಪೋಟಕವನ್ನು ಸುಲ್ತಾನ್​ ಬಯಲಿಗೆಳೆದಿದ್ದ. ಇವನು ಕೂಡ ತನ್ನ ಮಿತ್ರನಂತೆ 2016 ರಲ್ಲಿಯೇ ನಿಧನ ಹೊಂದಿದ.

ಈ ಮ್ಯಾಕ್ಸ್, ಟೈಗರ್, ಸುಲ್ತಾನ್ ಮತ್ತು ಸೀಸರ್​ ಎಂಬ ಮೂಕ ಪ್ರಾಣಿಗಳಿಗೆ ತಮ್ಮ ಸುತ್ತಲೂ ನಡೆಯುತ್ತಿದ್ದ ಆ ದುರಂತವನ್ನಾಗಲಿ ಅಥವಾ ಇತಿಹಾಸದಲ್ಲಿ ಅದಕ್ಕಿರುವ ಮಹತ್ವವನ್ನಾಗಲಿ ಅರ್ಥಮಾಡಿಕೊಳ್ಳುವ ಶಕ್ತಿ ಅವಕ್ಕಿರಲಿಲ್ಲ. ಆದರೂ ತಮ್ಮ ಪ್ರಾಣವನ್ನು ಲೆಕ್ಕಿಸದೇ ಅವುಗಳು ಸಲ್ಲಿಸಿದ ಸೇವೆಯನ್ನು ನಾವಿಂದು ನೆನಪಿಸಿಕೊಳ್ಳಲೇಬೇಕು, (ಏಜೆನ್ಸೀಸ್​).