

ಮೊಕಾಮಾ: ನವೆಂಬರ್- ಡಿಸೆಂಬರ್ ತಿಂಗಳನ್ನು ಭಾರತದಲ್ಲಿ ಮದುವೆ ಸೀಸನ್ ಎಂದೇ ಕರೆಯಲಾಗುತ್ತದೆ. ಈ ಸಮಯದಲ್ಲಿ ಹೆಚ್ಚಾಗಿ ಮದುವೆ ನಡೆಯುತ್ತದೆ. ಆದರೆ, ಈಗ ದೇಶದಲ್ಲಿ ಬಿಹಾರದ ಮೊಕಾಮಾ ವಿಧಾನಸಭಾ ಕ್ಷೇತ್ರದ ಶಾಸಕ ಅನಂತ್ ಸಿಂಗ್ ಅವರ ಮಗಳ ಮದುವೆ ವಿಡಿಯೋಗಳೇ ಇಡೀ ಸೋಷಿಯಲ್ ಮೀಡಿಯಾವನ್ನು ಆವರಿಸಿದೆ.
ಇನ್ಸ್ಟಾಗ್ರಾಂ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್, ಟ್ವೀಟರ್ ಟ್ರೆಂಡಿಂಗ್ ಯಾವುದು ತೆರೆದರೂ ಅದರಲ್ಲಿ ಅನಂತ್ ಸಿಂಗ್ ಅವರ ಮಗಳ ಮದುವೆಗೆ ಸಂಬಂಧಿಸಿದ ವಿಡಿಯೋಗಳೇ ಕಾಣ ಸಿಗುತ್ತಿವೆ. ಅದರಲ್ಲೀಗ ಅನಂತ್ ಸಿಂಗ್ ಅವರ ಅಪರೂಪದ ಗೆಳೆಯನೊಬ್ಬನ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಗೆಳತನ ಎನ್ನುವುದು ಬಾಲ್ಯದಲ್ಲಿ, ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಬೆಸೆಯುವ ಬಂಧವಾಗಿದೆ. ಆದರೆ, ಅನಂತ್ ಸಿಂಗ್ ಅವರ ಮಗಳ ವಿವಾಹಕ್ಕೆ ಬಂದ ವ್ಯಕ್ತಿ ನಾನು, ಅನಂತ್ ಸಿಂಗ್ ಅವರ ಜೈಲಿನ ಗೆಳೆಯ, ನನಗೆ ಅವರು ಜೈಲಿನಲ್ಲಿ ಪರಿಚಯವಾಗಿದ್ದರೆಂದು ಹೇಳಿರುವ ವಿಡಿಯೋ ಟ್ರೆಂಡಿಂಗ್ನಲ್ಲಿದೆ.
ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಒಬ್ಬರ ಜತೆಗೆ ಮಾತನಾಡಿರುವ ಈ ವ್ಯಕ್ತಿ, ನಾನು ಪಟನಾ ಜೈಲಿನಲ್ಲಿದ್ದಾಗ, ಅನಂತ್ ಸಿಂಗ್ ಅವರ ಪರಿಚಯವಾಯಿತು. ನಾನು ಅವರು ಜೈಲು ಸೇರುವುದಕ್ಕಿಂತ ಮೊದಲೇ ಜೈಲುಪಾಲಾಗಿದ್ದೆ. ನನ್ನ ಮೇಲೆ 32 ಪ್ರಕರಣಗಳಿದ್ದವು. ಅದರಿಂದ ನನ್ನನ್ನು ಅವರೇ ಪಾರು ಮಾಡಿದರು. ನಾನು ಅವರ ಪರಮ ಮಿತ್ರ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ನಾನು ಚೋಟೆ ಸರ್ಕಾರ್ (ಅನಂತ್ ಸಿಂಗ್) ಸಲುವಾಗಿ ಏನು ಮಾಡಲು ಕೂಡ ಹೆದರುವುದಿಲ್ಲ, ಅವರಿಗಾಗಿ ಪ್ರಾಣ ಕೊಡಲು ಸಿದ್ಧನೆಂದು ಹೇಳಿದ್ದಾರೆ.
ಶಾಸಕ ಅನಂತ್ ಸಿಂಗ್ ಗಳ ಮದುವೆ ನಿಮಿತ್ತ ಕುದುರೆ ರೇಸ್ ಆಯೋಜಿಸಿದ್ದು, ಇದನ್ನು ನೋಡಲು ಈ ಜೈಲಿನ ಗೆಳೆಯ ಆಗಮಿಸಿದ್ದರು. ಕುದುರೆ ರೇಸ್ ನಡೆಯುತ್ತಿದೆ, ನೀವು ಕೂಡ ಕುದುರೆ ತಂದಿದ್ದೀರಾ? ಎಂಬ ಪ್ರಶ್ನೆಗೆ, ನಾನು ಕೇವಲ ರೇಸ್ ನೋಡಲು ಬಂದಿದ್ದೇನೆ. ನಾನು ಕುದುರೆ ತಂದಿಲ್ಲ, ಆದರೆ 10 ರೈಫಲ್ ಹಾಗೂ ಸುಮಾರು 500 ಸುತ್ತು ಗುಂಡುಗಳನ್ನು ತಂದಿದ್ದೆನೆ ಎಂದಿದ್ದಾನೆ. ಏಕೆ ಇಲ್ಲಿ ಫೈರಿಂಗ್ ನಡೆಯಲಿದೆಯಾ? ಎಂಬ ಮರುಪ್ರಶ್ನೆಗೆ, ಫೈರಿಂಗ್ ಅಲ್ಲ, ನಾನು ನನ್ನ ರಕ್ಷಣೆಗಾಗಿ ಇವನ್ನು ತಂದಿದ್ದೇನೆಂದು ಆ ವ್ಯಕ್ತಿ ಮುಕ್ತವಾಗಿ ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).