

ನವದೆಹಲಿ: ಸಿಜೆಪಿ ವಕ್ತಾರ, ಸೌರವ್ ದಾಸ್ ಅವರನ್ನು ವಿದೇಶಕ್ಕೆ ಪ್ರಯಾಣಿಸದಂತೆ ತಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇಂದು ದೆಹಲಿ ಹೈಕೋರ್ಟ್ಗೆ ಪ್ರಮುಖ ಹೇಳಿಕೆಯೊಂದನ್ನು ದಾಖಲಿಸಿದೆ.
ಸೌರವ್ ದಾಸ್ ಅವರ ಪಾಸ್ಪೋರ್ಟ್ನಲ್ಲಿ ಅವರ ಶೈಕ್ಷಿಣಿಕ ಹಿನ್ನಲೆ, ವಿಳಾಸ ಹಾಗೂ ಪೋಷಕರ ಹಿನ್ನಲೆಯಲ್ಲಿ ಕೆಲ ಗೊಂದಲಗಳಿದ್ದು, ಇದನ್ನು ಪ್ರಶ್ನಿಸುವ ಉದ್ದೇಶದಿಂದ ಮುಂಬೈ ಪೊಲೀಸರು ದಾಸ್ ಅವರಿಗೆ ಈ ಮೊದಲೇ ಲುಕ್ಔಟ್ ನೋಟಿಸ್ (LOC) ಅನ್ನು ಜಾರಿಗೊಳಿಸಿತ್ತು. ಆದರೆ, ಈ ನೋಟಿಸ್ಗೆ ದಾಸ್, ಪ್ರತಿಕ್ರಿಯೆ ನೀಡದ ಹಿನ್ನಲೆ ಅವರನ್ನು ವಿದೇಶಕ್ಕೆ ಪ್ರಯಾಣ ಬೆಳೆಸದಂತೆ ತಡೆಯಲಾಗಿದೆ ಎಂದು ಸರ್ಕಾರ ನ್ಯಾಯಪೀಠಕ್ಕೆ ತಿಳಿಸಿದೆ.
ನವೆಂಬರ್ 27 ರಂದು ಬ್ರಿಟನ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದ, ಸಿಜೆಪಿ ಚಳುವಳಿ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಲು ಸೌರವ್ ದಾಸ್ ನವೆಂಬರ್ 24 ರಂದು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದರು. ಆದರೆ, ಅವರ ಪಾಸ್ಪೋರ್ಟ್ನಲ್ಲಿ ದೋಷವಿದ್ದ ಕಾರಣ ಅವರನ್ನು ವಿದೇಶಕ್ಕೆ ಪ್ರಯಾಣಿಸದಂತೆ ತಡೆಯಲಾಯಿತು.
ಸರ್ಕಾರದ ಈ ಕ್ರಮವನ್ನು ವಿರೋಧಿಸಿ ದಾಸ್, ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರ ತಾನು ಕೈಗೊಂಡ ಕ್ರಮಕ್ಕೆ ಸಮರ್ಥನೆ ನೀಡಿದ್ದು, ಸೌರವ್ ದಾಸ್ ಅವರ ಮುಂದಿನ ನಡೆ ಏನಿರಲಿದೆ ಎಂದು ಕಾದು ನೋಡಬೇಕಿದೆ.
ಇನ್ನು ಕೇಂದ್ರ ಸರ್ಕಾರ ಮುಂದಿಟ್ಟ ವಾದಕ್ಕೆ ಕೌಂಟರ್ ಮಾಡಿರುವ ದಾಸ್, ನನಗೆ ಪೊಲೀಸರು ಇಲ್ಲಿವರೆಗೆ ಯಾವುದೇ ನೋಟಿಸ್ ನೀಡಿಲ್ಲ. ಇದೆಲ್ಲಾ ನಮ್ಮ ಹೋರಾಟವನ್ನು ಹತ್ತಿಕ್ಕಲು ಮಾಡುತ್ತಿರುವ ತಂತ್ರ ಎಂದು ಸೌರವ್ ದೂರಿದ್ದಾರೆ. ಎರಡು ಪಕ್ಷಗಳ ವಾದವನ್ನು ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಡಿಸೆಂಬರ್ 9 ಕ್ಕೆ ಮುಂದೂಡಿದೆ, (ಏಜೆನ್ಸೀಸ್).