ಬ್ಯಾಗ್ ಮತ್ತು ಬ್ರೀಫ್‌ಕೇಸ್‌ಗಳಲ್ಲಿ ಪತ್ತೆಯಾದ ವಿವಿಧ ಬ್ರಾಂಡ್‌ಗಳ 75 ಲೀಟರ್ ಮದ್ಯದ ಬಾಟಲಿಗಳು.
ಬಿಹಾರ: ಬಿಹಾರದಲ್ಲಿ ಮದ್ಯಬಂದಿ ಜಾರಿಯಲ್ಲಿದ್ದರೂ ಕಳ್ಳಮಾರ್ಗದ ಮೂಲಕ ಮದ್ಯ ಸಾಗಿಸುವವರ ಲೀಲೆಗೆ ಕೊನೆಯೇ ಇಲ್ಲದಂತಾಗಿದೆ. ಅದೆಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕಳ್ಳಸಾಗಾಣಿಕೆ (Bihar Liquor Seizure) ದಾರರು ಹೊಸ ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತಲೇ ಇರುತ್ತಾರೆ.
ಸದ್ಯ ದೆಹಲಿಯಿಂದ ಬಿಹಾರಕ್ಕೆ ಐಷಾರಾಮಿ ಫಸ್ಟ್ ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಾ, ಬ್ಯಾಗ್‌ಗಳಲ್ಲಿ ಮದ್ಯ ಸಾಗಿಸುತ್ತಿದ್ದ ಯುವತಿಯೊಬ್ಬಳನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿರುವ ರೋಚಕ ಘಟನೆ ಬೆಳಕಿಗೆ ಬಂದಿದೆ.
ರೈಲಿನಲ್ಲಿ ನಡೆದ ದಿಢೀರ್ ದಾಳಿ!
ನವದೆಹಲಿಯಿಂದ ಜಯನಗರದತ್ತ ಹೊರಟಿದ್ದ 'ಸ್ವಾತಂತ್ರ್ಯ ಸೇನಾನಿ ಎಕ್ಸ್‌ಪ್ರೆಸ್' ರೈಲಿನಲ್ಲಿ ಮದ್ಯ ಕಳ್ಳಸಾಗಣೆ ಆಗುತ್ತಿದೆ ಎಂಬ ಖಚಿತ ಸುಳಿವು ಆರ್‌ಪಿಎಫ್ (RPF), ಜಿಆರ್‌ಪಿ (GRP) ಮತ್ತು ಸಿಐಬಿ (CIB) ಜಂಟಿ ತಂಡಕ್ಕೆ ಸಿಕ್ಕಿದೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಸಮಸ್ತಿಪುರ ರೈಲು ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆ ತರಾತುರಿಯಲ್ಲಿ ತಾವಿದ್ದ ರೈಲಿನ ಫಸ್ಟ್ ಎಸಿ ಕೋಚ್ ಕಡೆಗೆ ದೌಡಾಯಿಸಿದ್ದಾರೆ.
ರೈಲಿನ ಆ ಕಂಪಾರ್ಟ್‌ಮೆಂಟ್ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅನುಮಾನಗೊಂಡು ಬಾಗಿಲು ತೆರೆಸಿ ಒಳಗೆ ಹೋಗಿ ಶೋಧ ನಡೆಸಿದ ಅಧಿಕಾರಿಗಳಿಗೆ ದಂಗಾಗುವಂತಹ ದೃಶ್ಯ ಕಾದಿತ್ತು. ಯುವತಿಯ ಬಳಿಯಿದ್ದ ದೊಡ್ಡ ದೊಡ್ಡ ಬ್ಯಾಗ್‌ಗಳು ಮತ್ತು ಬ್ರೀಫ್‌ಕೇಸ್‌ಗಳನ್ನು ಬಿಡಿಸಿ ನೋಡಿದಾಗ ಬರೋಬ್ಬರಿ 75 ಲೀಟರ್ ಮದ್ಯ ಪತ್ತೆಯಾಗಿದೆ. ವಿವಿಧ ದುಬಾರಿ ಬ್ರಾಂಡ್‌ಗಳ ಮದ್ಯದ ಬಾಟಲಿಗಳನ್ನು ಬಟ್ಟೆಗಳ ನಡುವೆ ಕೂದಲಿಗೇ ವ್ಯತ್ಯಾಸವಿಲ್ಲದಂತೆ ಅಂದವಾಗಿ ಜೋಡಿಸಿ ಕಳ್ಳಸಾಗಣೆ ಮಾಡಲಾಗುತ್ತಿತ್ತು.
ಯಾರು ಈ ನೇಹಾ ಕುಮಾರಿ?
ಹೀಗೆ ಎಸಿ ಕೋಚ್‌ನಲ್ಲಿ ಬಿಂದಾಸ್ ಆಗಿ ಮದ್ಯ ಸಾಗಿಸುತ್ತ ಸಿಕ್ಕಿಬಿದ್ದವಳನ್ನು ನೇಹಾ ಕುಮಾರಿ ಅಲಿಯಾಸ್ ನೇಹಾ ಝಾ ಎಂದು ಗುರುತಿಸಲಾಗಿದೆ. ಈಕೆ ದರ್ಭಾಂಗಕ್ಕೆ ಮದ್ಯವನ್ನು ಸಾಗಿಸುತ್ತಿದ್ದಳು ಎನ್ನಲಾಗಿದ್ದು, ಅಲ್ಲಿ ಇದನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ತಲುಪಿಸಬೇಕಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸದ್ಯ ನೇಹಾಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕೇವಲ ಈಕೆಯಷ್ಟೇ ಅಲ್ಲದೆ, ಈ ಕಳ್ಳಸಾಗಣೆ ಜಾಲದ ಹಿಂದಿರುವ ದೊಡ್ಡ ತಲೆಗಳ ಬಗ್ಗೆಯೂ ಬಚಾವ್ ಮಾಡಲು ಸಾಧ್ಯವಾಗದ ರೀತಿಯಲ್ಲಿ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.
ಕುಟುಂಬದ ಹಳೆಯ ಕತೆ ಹೊರಬಿದ್ದಾಗ...
ಪೊಲೀಸರು ನೇಹಾಳ ಹಿನ್ನೆಲೆ ಕೆದಕಿದಾಗ ಅಚ್ಚರಿಯ ಸಂಗತಿಗಳು ಒಂದೊಂದಾಗಿ ಹೊರಬಂದಿವೆ. ನೇಹಾ ಮತ್ತು ಆಕೆಯ ಸಹೋದರಿಯರು ದರ್ಭಾಂಗದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ವಿಶೇಷವೆಂದರೆ, ಆಕೆಯ ಸಹೋದರಿಯೊಬ್ಬರು ಕೂಡ ಜಿಲ್ಲೆಯಲ್ಲಿ ಇದೇ ಮದ್ಯ ಸಾಗಣೆ ಅಥವಾ ಮಾರಾಟದ ಸಂಬಂಧಿತ ಪ್ರಕರಣವನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ಅಲ್ಲದೆ, ನೇಹಾಳ ತಂದೆ ಪಂಕಜ್ ಕುಮಾರ್ ಝಾ ಕೃಷಿ ಕೆಲಸ ಮಾಡಿಕೊಂಡಿದ್ದು, ಇವರನ್ನು ಕೂಡ ಸುಮಾರು ಎರಡು ವರ್ಷಗಳ ಹಿಂದೆ ಮದ್ಯದ ಪ್ರಕರಣವೊಂದರಲ್ಲಿ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಇನ್ನು ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಹಿನ್ನೆಲೆಯಲ್ಲಿ ಮದ್ಯದ ಕಳಂಕವಿದ್ದರೂ, ನೇಹಾಳ ಮೇಲೆ ಈ ಹಿಂದೆ ಯಾವುದೇ ಕ್ರಿಮಿನಲ್ ಕೇಸ್ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, (ಏಜನ್ಸೀನ್).