ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ನ (138th Mann Ki Baat) 138ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ದೇಶದ ಭದ್ರತೆ, ಭಯೋತ್ಪಾದನಾ ವಿರೋಧಿ ನೀತಿ, ಪರಿಸರ ಸಂರಕ್ಷಣೆ, ಸಂಸ್ಕೃತಿ ಹಾಗೂ ಸಮಾಜಮುಖಿ ಉಪಕ್ರಮಗಳ ಕುರಿತು ಪ್ರಧಾನಿ ಸುದೀರ್ಘವಾಗಿ ಮಾತನಾಡಿದರು.
ಭಾರತವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ (Zero-Tolerance) ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು. ದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಯಾವುದೇ ಯತ್ನಕ್ಕೆ ಭಾರತ ತನ್ನದೇ ಆದ ಶೈಲಿಯಲ್ಲಿ ಸೂಕ್ತ ಪ್ರತ್ಯುತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದ ಅವರು, ಕಳೆದ ದಶಕದಲ್ಲಿ ನಡೆದ 2016 ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್, 2019 ರ ಬಾಲಾಕೋಟ್ ಏರ್ ಸ್ಟ್ರೈಕ್ ಹಾಗೂ ಕಳೆದ ವರ್ಷದ ಆಪರೇಷನ್ ಸಿಂಧೂರ ಕಾರ್ಯಾಚರಣೆಗಳನ್ನು ಸ್ಮರಿಸಿದರು. ಈ ಕಾರ್ಯಾಚರಣೆಗಳು ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವನ್ನು ಜಗತ್ತಿಗೆ ಸಾರಿವೆ ಎಂದು ಬಣ್ಣಿಸಿದರು.
ಇದನ್ನೂ ಓದಿ:ಜಾಗತಿಕ ಶಾಂತಿಗೆ ಭಯೋತ್ಪಾದನೆಯೇ ದೊಡ್ಡ ಹೆಮ್ಮಾರಿ: ಪಾಕಿಸ್ತಾನದ ಕುತಂತ್ರಕ್ಕೆ ವಿಶ್ವಸಂಸ್ಥೆಯಲ್ಲೇ ಚಾಟಿ ಬೀಸಿದ ಜೈಶಂಕರ್! | S Jaishankar
ಇದೇ ವೇಳೆ ಶ್ರೀ ಅಶೋಕ್ ಸಿಂಘಾಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ, ಸಮಾಜಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದರು. ಮುಂಬರುವ ಜನಗಣತಿಯು ಪ್ರತಿಯೊಬ್ಬ ನಾಗರಿಕನ ರಾಷ್ಟ್ರೀಯ ಜವಾಬ್ದಾರಿಯಾಗಿದ್ದು, ಎಲ್ಲರೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಸೂರ್ಯ ಆರಾಧನೆಯು ಭಾರತದಲ್ಲಿ ಬೆಳಕು, ಶಕ್ತಿ ಮತ್ತು ವಿಜ್ಞಾನದ ಸಂಕೇತವಾಗಿದೆ ಎಂದ ಮೋದಿ, ಗುಜರಾತ್‌ನ ಮೊಧೇರಾ ಸೂರ್ಯ ದೇವಾಲಯದ ಇತಿಹಾಸವನ್ನು ನೆನಪಿಸಿಕೊಂಡರು. ಕ್ರಿ.ಶ 1026 ರಲ್ಲಿ ಮಹಮೂದ್ ಘಜ್ನಿ ದಾಳಿಯಿಂದ ಹಾನಿಗೊಳಗಾಗಿದ್ದ ದೇವಾಲಯವನ್ನು ರಾಜ ಭೀಮದೇವ-1 ಅತ್ಯಲ್ಪ ಅವಧಿಯಲ್ಲಿ ಪುನರ್ನಿರ್ಮಿಸಿದ್ದನ್ನು ಸ್ಮರಿಸಿದ ಅವರು, ಇಂದು ಮೊಧೇರಾ ದೇಶದ ಮೊದಲ ಸೌರ ಗ್ರಾಮವಾಗಿ (Solar Village) ಹೆಮ್ಮೆ ಮೂಡಿಸಿದೆ ಎಂದರು.
ಸಂಸ್ಕೃತಿ ಮತ್ತು ಪರಿಸರ ಸಂರಕ್ಷಣೆಯ ಭಾಗವಾಗಿ, ಗಮನಕ್ಕೆ ಬಾರದೇ ಉಳಿದಿದ್ದ ಪ್ರಾಚೀನ ವಿಗ್ರಹಗಳನ್ನು ಗುರುತಿಸುತ್ತಿರುವ ತಮಿಳುನಾಡಿನ ಎ. ಸೆಲ್ವರಾಜು ಅವರ ಶ್ರಮವನ್ನು ಕೊಂಡಾಡಿದರು. ಅಸ್ಸಾಂನಲ್ಲಿ ಅಳಿವಿನಂಚಿನಲ್ಲಿದ್ದ ಪಿಗ್ಮಿ ಹಾಗ್ ಪ್ರಭೇದದ ಸಂರಕ್ಷಣಾ ಯೋಜನೆಯ ಫಲವಾಗಿ ಅವುಗಳ ಸಂಖ್ಯೆ 190 ಕ್ಕೆ ಏರಿಕೆಯಾಗಿರುವುದನ್ನು ಹಂಚಿಕೊಂಡರು. ಸುಂದರಬನ್ಸ್‌ನಲ್ಲಿ ಹುಲಿ ದಾಳಿಗೆ ಪತಿಯನ್ನು ಕಳೆದುಕೊಂಡ ಮಹಿಳೆಯರು ಜೀವನಾಧಾರಕ್ಕಾಗಿ ಹಾಗೂ ಗ್ರಾಮಗಳ ರಕ್ಷಣೆಗಾಗಿ ಮ್ಯಾಂಗ್ರೋವ್ ಕಾಡುಗಳನ್ನು ಬೆಳೆಸುತ್ತಿರುವ ಸಾಧನೆಯನ್ನು ಪ್ರಶಂಸಿಸಿದರು.
ಯುವಜನತೆ ನಶಾ ಮುಕ್ತ ಯುವ ಅಭಿಯಾನದ ಮೂಲಕ ಮಾದಕದ್ರವ್ಯದ ವಿರುದ್ಧ ಒಂದಾಗುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ, ವ್ಯಸನಿಗಳನ್ನು ಆರೋಗ್ಯಕರ ಜೀವನಕ್ಕೆ ತರಲು ಬೆಂಬಲಿಸುವಂತೆ ಮನವಿ ಮಾಡಿದರು. ಜೊತೆಗೆ ರೌಂಡ್ ಗ್ಲಾಸ್ ಹಾಕಿ ಅಕಾಡೆಮಿ ಮೂಲಕ ಗ್ರಾಮೀಣ ಭಾಗದ ಹಾಕಿ ಪ್ರತಿಭೆಗಳನ್ನು ಬೆಳೆಸುತ್ತಿರುವ ರಾಜಿಂದರ್ ಸಿಂಗ್ ಸೇವೆಯನ್ನು ಶ್ಲಾಘಿಸಿದರು.
ಅಪೌಷ್ಟಿಕತೆ ನಿರ್ಮೂಲನೆಯ ವಿವಿಧ ಪ್ರಯೋಗಗಳನ್ನು ಉಲ್ಲೇಖಿಸಿದ ಅವರು, ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ನೆಲ್ಲಿಕಾಯಿ ಸಂಸ್ಕರಣೆಯಿಂದ ಮಹಿಳೆಯರು ಸಬಲರಾಗುತ್ತಿರುವುದನ್ನು ತಿಳಿಸಿದರು. ಮಿಜೋರಾಂನ ತ್ಲಾವ್ಮ್-ನ್ಗೈಹ್ನಾ ನಿಸ್ವಾರ್ಥ ಸೇವಾ ಪರಂಪರೆಯಡಿ ಪೌಷ್ಟಿಕ ತೋಟಗಳ ನಿರ್ವಹಣೆ, ಛತ್ತೀಸ್‌ಗಢದಲ್ಲಿ ಹರ್ ಘರ್ ಮುಂಗಾ ಅಭಿಯಾನದಡಿ ನುಗ್ಗೆಕಾಯಿ ಬಳಕೆ, ಗುಜರಾತ್‌ನಲ್ಲಿ ಸಿರಿಧಾನ್ಯ ಖಾದ್ಯ ಸ್ಪರ್ಧೆ ಹಾಗೂ ಮಹಾರಾಷ್ಟ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಅಪೌಷ್ಟಿಕತೆ ನಿರ್ಮೂಲನಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಥೈಲ್ಯಾಂಡ್‌ನಲ್ಲಿ ಅಷ್ಟವಿನಾಯಕ ಯಾತ್ರೆ ಜನಪ್ರಿಯವಾಗಿದ್ದು, ಅಲ್ಲಿನ ಚಿಯಾಂಗ್ ಮಾಯಿಯಲ್ಲಿರುವ ಗಣೇಶ ಹಿಮಾಲ್ ಮ್ಯೂಸಿಯಂನಲ್ಲಿ 10,000 ಕ್ಕೂ ಹೆಚ್ಚು ಗಣೇಶನ ವಿಗ್ರಹಗಳಿವೆ ಎಂದು ಮೋದಿ ತಿಳಿಸಿದರು. ಥೈಲ್ಯಾಂಡ್‌ನಲ್ಲಿ ಗಣೇಶನನ್ನು ಫ್ರಾ ಫಿಕಾನೆಟ್ ಎಂದು ಪೂಜಿಸಲಾಗುತ್ತದೆ ಎಂದು ಪ್ರಧಾನಿ ಮನ್ ಕೀ ಬಾತ್ ಸಂಚಿಕೆಯಲ್ಲಿ ವಿವರಿಸಿದರು(ಏಜೆನ್ಸೀಸ್).