Jitan Ram Manjhi | ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ  
ದೇಶ

ನನ್ನ ಅಭ್ಯರ್ಥಿ ಹೆಜ್ಜೆ ಹಿಂದಿಡುವುದು ನನಗೆ ಇಷ್ಟವಿರಲಿಲ್ಲ..ಮತಕಳ್ಳತನದ ಬಗ್ಗೆ ಮಾಂಝಿ ಶಾಕಿಂಗ್​ ಹೇಳಿಕೆ! | Jitan Ram Manjhi

ಮಣಿಕಂಠ ಪಾ ಹಿರೇಮಠ
ಪಟನಾ: 2020ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಹಿನ್ನಡೆ ಅನುಭವಿಸಿದ್ದ ಎಚ್​ಎಎಂ ಅಭ್ಯರ್ಥಿ ಅನಿಲ್ ಕುಮಾರಗೆ, ಎಚ್​ಎಎಂ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ನೆರವಾಗಿದ್ದರು ಎನ್ನಲಾದ ವಿಡಿಯೋವೊಂದನ್ನು ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳ ಇತ್ತೀಚೆಗೆ ಹಂಚಿಕೊಂಡಿದ್ದು, ಈ ಆರೋಪವನ್ನು ಮಾಂಝಿ ಅಲ್ಲಗಳೆದಿದ್ದಾರೆ.
ವಿಪಕ್ಷಗಳ ಆರೋಪವನ್ನು ತಿರಸ್ಕರಿಸಿರುವ ಮಾಂಝಿ, ಮತ ಎಣಿಕೆಯ ಮರು ಲೆಕ್ಕಾಚಾರದ ಅಂಕಿಅಂಶಗಳನ್ನು ಹಿಂದೂಸ್ತಾನಿ ಅವಾಮ್ ಮೋರ್ಚಾಗೆ ಒದಗಿಸುವಂತೆ ಟಿಕಾರಿ ಜಿಲ್ಲಾ ಮ್ಯಾಜಿಸ್ಟ್ರೇಟ್​ರನ್ನು ಈಗಾಗಲೇ ಕೇಳಿಕೊಂಡಿದ್ದು, ಆಗಿನ ಎಚ್​ಎಎಂ ಅಭ್ಯರ್ಥಿ ಓಡಿಹೋಗುವುದು ತನಗೆ ಇಷ್ಟವಿಲ್ಲ, ಮರು ಎಣಿಕೆ ನಡೆಯಲಿ ಎಂದು ಬಯಸಿದ್ದರು ಎಂದು ಮಾಂಝಿ ತಿಳಿಸಿದರು.
ಅದು ನಕಲಿ ವಿಡಿಯೋ, ಮರು ಎಣಿಕೆಗೆ ಮನವಿ ಮಾಡಿದ್ದು, ಅದಾದ ಬಳಿಕವೇ ನಮ್ಮ ಅಭ್ಯರ್ಥಿ ಗೆಲುವು ಘೋಷಣೆಯಾಗಿದೆ, ಮರು ಎಣಿಕೆಯ ಅಂಕಿ ಅಂಶಗಳನ್ನು ನೀಡುವಂತೆ ನಾವು ಅಂದಿನ ಡಿಎಂ ಅಭಿಷೇಕ್ ಸಿಂಗ್ ಅವರನ್ನು ಕೇಳಿದ್ದೆವು, ಅವರು ಅವುಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ವಿಡಿಯೋದಲ್ಲಿರುವುದೇನು..?

2020 ರ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ 2,700 ಮತಗಳಿಂದ ಹಿನ್ನಡೆ ಅನುಭವಿಸಿದ್ದರು, ನನಗೆ ಕರೆ ಮಾಡಿದರು, ನಾನು ಸಂಬಂಧಪಟ್ಟ ಅಧಿಕಾರಿಗೆ ಫೋನ್ ಮಾಡಿದೆ. ಅಂತಿಮವಾಗಿ, ಅವರನ್ನು ವಿಜೇತರೆಂದು ಘೋಷಿಸಲಾಯಿತು ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಮಾಂಝಿ ಸ್ಥಳೀಯ ಭಾಷೆಯಲ್ಲಿ ಹೇಳುವುದು ಸ್ಪಷ್ಟವಾಗಿದೆ.  ಈ ಬಾರಿ ನಮ್ಮ ಅಭ್ಯರ್ಥಿ 1,600 ಮತಗಳಿಂದ ಸೋತರು. ಆದರೆ ನನ್ನನ್ನು ಸಂಪರ್ಕಿಸುವ ಬದಲು ಅವರು ಸೋಲನ್ನು ಒಪ್ಪಿಕೊಳ್ಳಲು ನಿರ್ಧರಿಸಿದರು. ಈಗ ತ್ರಿಪುರದಲ್ಲಿ ನಿಯೋಜಿತರಾಗಿರುವ ಗಯಾದ ಅಂದಿನ ಜಿಲ್ಲಾಧಿಕಾರಿ ಈ ಬಾರಿ ಏನು ತಪ್ಪಾಗಿದೆ ಎಂದು ವಿಚಾರಿಸಲು ನನಗೆ ದೂರವಾಣಿ ಕರೆ ಮಾಡಿದರು. ಅಭ್ಯರ್ಥಿ ನನ್ನನ್ನು ಸಂಪರ್ಕಿಸದೆ ಮನೆಗೆ ಮರಳುವ ನಿರ್ಧಾರ ಮಾಡಿದಾಗ ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಆರ್​ಜೆಡಿ ಆರೋಪ...

ಮಾಂಝಿ ಹೇಳಿಕೆಯ ಕುರಿತಾದ ವಿಡಿಯೋವನ್ನು ಆರ್​ಜೆಡಿ ಹಂಚಿಕೊಂಡಿದ್ದು, ಎನ್‌ಡಿಎ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಲು ಹೊಸ ಅಸ್ತ್ರ ಸಿಕ್ಕಂತಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಕೃತಕ ಜನಪ್ರಿಯತೆಯ ಬಗ್ಗೆ ಸತ್ಯವನ್ನು ತೋರಿಸುತ್ತಿದ್ದು, 2025 ರ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ, ಚುನಾವಣಾ ಆಯೋಗದ ಸಹಾಯದಿಂದ ಗೆದ್ದಿದೆ ಎಂದು ಆರೋಪಿಸಿದೆ. ವಿಡಿಯೋ ನೋಡಿ ಎನ್ ಡಿಎ ವೋಟ್ ಚೋರಿಯಲ್ಲಿ ಮುಳುಗಿದೆ ಎಂದು ಕಾಂಗ್ರೆಸ್ ಹೇಳಿದೆ. ಮತ ಕಳ್ಳತನದ ಆರೋಪಗಳಿಗೆ ಪ್ರತಿಕ್ರಿಯಿಸುವಾಗ ಕೇಂದ್ರ ಗೃಹ ಸಚಿವರು ಇತ್ತೀಚೆಗೆ ಸಂಸತ್ತಿನೊಳಗೆ ಬೆಂಕಿ ಮತ್ತು ಗಂಧಕದಂತೆ ವರ್ತಿಸುತ್ತಿದ್ದರು. ಈಗ, ಅವರ ಸಂಪುಟ ಸಹೋದ್ಯೋಗಿಯ ತಪ್ಪೊಪ್ಪಿಗೆಯು ನಡೆಯುತ್ತಿರುವುದು ಮತ ಚೋರಿ ಅಲ್ಲ, ಮತ ದರೋಡೆ ಎನ್ನುವುದನ್ನು ಸೂಚಿಸುತ್ತದೆ ಎಂದು ಬಿಹಾರ ಕಾಂಗ್ರೆಸ್ ವಕ್ತಾರ ಅಸಿತ್ ನಾಥ್ ತಿವಾರಿ ಆರೋಪಿಸಿದ್ದಾರೆ(ಏಜೆನ್ಸೀಸ್​).