ನವದೆಹಲಿ: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ( Social media influencer ) ಮೇಲಿನ ಒನ್ ಸೈಡೆಡ್ ಪ್ರೀತಿಯು ಯುವಕನೊಬ್ಬನ ದುರಂತ ಅಂತ್ಯಕ್ಕೆ ಕಾರಣವಾಗಿದೆ. ಮದುವೆಯಾಗುವಂತೆ ಒತ್ತಾಯಿಸಿ ಯುವತಿಯ ಮನೆಗೆ ನುಗ್ಗಿದ ಯುವಕನನ್ನು ಆಕೆಯ ಕುಟುಂಬಸ್ಥರು ಮತ್ತು ನೆರೆಹೊರೆಯವರು ಹಿಗ್ಗಾಮುಗ್ಗಾ ಥಳಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಇನ್ಸ್ಟಾಗ್ರಾಮ್ನಲ್ಲಿ 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಹಾಗೂ ಪ್ರತಿಯೊಂದು ರೀಲ್ಸ್ಗೂ ಲಕ್ಷಾಂತರ ವೀಕ್ಷಣೆ ಪಡೆಯುತ್ತಿರುವ ದೆಹಲಿಯ ಖ್ಯಾತ ಕಂಟೆಂಟ್ ಕ್ರಿಯೇಟರ್ ನೇಹಾ ಬಿಷ್ಟ್ ಅವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇತ್ತೀಚೆಗೆ ನೇಹಾ ಅವರು ತಮ್ಮ ನಿಶ್ಚಿತಾರ್ಥದ ವಿಡಿಯೋಗಳು ಮತ್ತು ಮುಂಬರುವ ಮದುವೆಯ ಸಿದ್ಧತೆಗಳ ಕುರಿತು ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ನಲ್ಲಿ ನಿರಂತರವಾಗಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಉತ್ತರ ಪ್ರದೇಶದ ಗಾಜಿಪುರ ಮೂಲದ ಹಾಗೂ ಚೆನ್ನೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿನವ್ ಎಂಬ ಯುವಕ, ಚೆನ್ನೈನಿಂದ ನೇರವಾಗಿ ದೆಹಲಿಗೆ ಬಂದು ನವೆಂಬರ್ 7ರಂದು ಪೂರ್ವ ದೆಹಲಿಯ ಮಧು ವಿಹಾರ್ನಲ್ಲಿರುವ ನೇಹಾ ಬಿಷ್ಟ್ ಅವರ ಮನೆಗೆ ಬಲವಂತವಾಗಿ ನುಗ್ಗಿದ್ದಾನೆ.
ಮನೆಯೊಳಗೆ ನುಗ್ಗಿದ ಅಭಿನವ್, ನೇಹಾ ಮನೆಯಲ್ಲಿರುವಾಗಲೇ ತನ್ನನ್ನೇ ಮದುವೆಯಾಗಬೇಕೆಂದು ಪಟ್ಟು ಹಿಡಿದು ಗಲಾಟೆ ಮಾಡಿದ್ದಾನೆ. ಮರುದಿನ ದಾಖಲಾದ ಎಫ್ಐಆರ್ನಲ್ಲಿ ಆತ ವಿಪರೀತ ಮದ್ಯಪಾನ ಮಾಡಿದ್ದನು ಎಂದು ಆರೋಪಿಸಲಾಗಿದೆ. ಯುವಕನ ಈ ವರ್ತನೆಯಿಂದ ತೀವ್ರ ಆಕ್ರೋಶಗೊಂಡ ನೇಹಾ ಬಿಷ್ಟ್ ಅವರ ಕುಟುಂಬ ಸದಸ್ಯರು ಮತ್ತು ಕೆಲ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡುವ ಮುನ್ನವೇ ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಅಭಿನವ್ ಬೆನ್ನು ಮತ್ತು ಬಲಗಾಲಿಗೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗುತ್ತಿದ್ದ ಸ್ಥಿತಿಯಲ್ಲಿದ್ದನು. ತಕ್ಷಣವೇ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸುಮಾರು ಒಂದು ವಾರಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ ಅಭಿನವ್, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 15ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಪೊಲೀಸರ ತನಿಖೆಯ ವೇಳೆ ಈ ಪ್ರಕರಣದ ಹಿಂದಿನ ಅಸಲಿ ಸಂಗತಿಗಳು ಬಯಲಾಗಿವೆ. ಮೃತ ಅಭಿನವ್ ನಿಯಮಿತವಾಗಿ ನೇಹಾ ಬಿಷ್ಟ್ ಅವರ ಸೋಶಿಯಲ್ ಮೀಡಿಯಾ ಕಂಟೆಂಟ್ಗಳನ್ನು ವೀಕ್ಷಿಸುತ್ತಿದ್ದು, ಕಾಲಕ್ರಮೇಣ ಆಕೆಯ ಮೇಲೆ ಒನ್ ಸೈಡೆಡ್ ಪ್ರೀತಿ ಬೆಳೆಸಿಕೊಂಡಿದ್ದನು. ಅಷ್ಟೇ ಅಲ್ಲದೆ ಕೆಲವು ತಿಂಗಳುಗಳ ಹಿಂದೆ ಅಭಿಮಾನಿಯ ಸೋಗಿನಲ್ಲಿ ಆಕೆಯ ಮನೆಗೂ ಭೇಟಿ ನೀಡಿದ್ದನು.
ನೇಹಾ ಬೇರೊಬ್ಬರೊಂದಿಗೆ ಮದುವೆಯಾಗುತ್ತಿರುವ ವಿಚಾರ ತಿಳಿದು ಆತ ಖಿನ್ನತೆ ಮತ್ತು ಆಕ್ರೋಶಕ್ಕೆ ಒಳಗಾಗಿದ್ದನು, ಆದರೆ ನೇಹಾ ಅವರಿಗೆ ಅಭಿನವ್ ಯಾರೆಂಬುದೇ ತಿಳಿದಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸದ್ಯ ಯುವಕನ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು 'ನರಹತ್ಯೆ' (Culpable Homicide) ಪ್ರಕರಣ ದಾಖಲಿಸಿಕೊಂಡಿದ್ದು, ಇನ್ಫ್ಲುಯೆನ್ಸರ್ ತಂದೆ ವೀರೇಂದ್ರ ಬಿಷ್ಟ್ ಮತ್ತು ಓರ್ವ ನೆರೆಹೊರೆಯವನನ್ನು ಬಂಧಿಸಿದ್ದಾರೆ ಹಾಗೂ ಕೃತ್ಯದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ, (ಏಜೆನ್ಸೀಸ್).