Mamata Banerjee | ಸಾರ್ವಜನಿಕನ ಕಪಾಳಕ್ಕೆ ಬಾರಿಸಿದ ದೀದಿ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನಿವಾಸವಿರುವ ಹರೀಶ್ ಚಟರ್ಜಿ ರಸ್ತೆಯಲ್ಲಿ ಬುಧವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಸಾಗುತ್ತಿದ್ದ ಟಿಎಂಸಿ ಮೆರವಣಿಗೆಯ ವೇಳೆ ಭಾರಿ ಗದ್ದಲ ಉಂಟಾಗಿದೆ. ನೆರೆದಿದ್ದ ಜನಸಂದಣಿಯನ್ನು ಚದುರಿಸಲು ಯತ್ನಿಸುತ್ತಿದ್ದ ಮಮತಾ ಬ್ಯಾನರ್ಜಿ ಸಾರ್ವಜನಿಕರೊಬ್ಬರ ಕಪಾಳಕ್ಕೆ ಬಾರಿಸಿದ ಘಟನೆ ನಡೆದಿದೆ.
ಬಾರುಇಪುರದಲ್ಲಿ ಕೊಲೆಯಾದ ಸಂತ್ರಸ್ತ ವ್ಯಕ್ತಿಯ ಶವದ ಪ್ರತಿಕೃತಿಯೊಂದಿಗೆ ಕಾಳೀಘಾಟ್ ತೃಣಮೂಲ ಸಂಘಟನೆಯು ಈ ಮೆರವಣಿಗೆಯನ್ನು ಆಯೋಜಿಸಿತ್ತು. ಹೈಕೋರ್ಟ್ ಅನುಮತಿಯೊಂದಿಗೆ ಬಾಲಿಗಂಜ್‌ನಿಂದ ಹಜ್ರಾ ಜಂಕ್ಷನ್‌ಗೆ ತೆರಳುತ್ತಿದ್ದ ಈ ಮೆರವಣಿಗೆಯನ್ನು ಬಿಜೆಪಿ ಕಾರ್ಯಕರ್ತರು ತಡೆದರು ಎಂದು ಆರೋಪಿಸಲಾಗಿದೆ. ಈ ವೇಳೆ ಎರಡೂ ಪಕ್ಷಗಳ ಬೆಂಬಲಿಗರ ನಡುವೆ ಕಳ್ಳ, ಕಳ್ಳ ಎಂಬ ಘೋಷಣೆಗಳು ಕೇಳಿಬಂದವು.
ಕ್ರಮೇಣ ಈ ಘರ್ಷಣೆ ತೀವ್ರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ವ್ಯಕ್ತಿಯೊಬ್ಬನನ್ನು ಕಾರಿನ ಬೊನೆಟ್ ಮೇಲೆ ಎಸೆದು ಹಲ್ಲೆ ನಡೆಸುವ ಹಂತಕ್ಕೆ ತಲುಪಿತು. ಅಂತಿಮವಾಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ತಮ್ಮ ಮನೆಯ ಮುಂಭಾಗದಲ್ಲೇ ಭಾರಿ ಗಲಾಟೆ ಮತ್ತು ಗೊಂದಲ ಉಂಟಾಗಿದ್ದನ್ನು ಕಂಡು ನಿವಾಸದಿಂದ ಹೊರಬಂದ ಮಮತಾ ಬ್ಯಾನರ್ಜಿ, ಜನರನ್ನು ದೂರ ಹೋಗುವಂತೆ ಎರಡೂ ಕೈ ಜೋಡಿಸಿ ಮನವಿ ಮಾಡಿದರು. ಆದಾಗ್ಯೂ, ಜನರು ಆ ಜಾಗದಿಂದ ಕದಲದೆ ಮೊಬೈಲ್‌ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡುವುದನ್ನು ಮುಂದುವರಿಸಿದರು. ಈ ಗೊಂದಲದ ನಡುವೆ ಆಕ್ರೋಶಗೊಂಡ ದೀದಿ ಅಲ್ಲಿದ್ದ ವ್ಯಕ್ತಿಯೊಬ್ಬರಿಗೆ ಹೊಡೆದಿದ್ದಾರೆ. ಆದರೆ ಆ ವ್ಯಕ್ತಿಯ ಗುರುತು ಇನ್ನು ತಿಳಿದುಬಂದಿಲ್ಲ.
ಈ ಘಟನೆಗೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು ಆರಾಜಕತೆ ಸೃಷ್ಟಿಯಾಗಿದೆ ಎಂದು ಆರೋಪಿಸಿದರು. ಕೋರ್ಟ್ ಅನುಮತಿ ಇದ್ದರೂ ಮೆರವಣಿಗೆ ತಡೆದು ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಲಾಗಿದೆ ಹಾಗೂ ಬಿಜೆಪಿ ಗೂಂಡಾಗಳು ನನ್ನ ಮನೆಯ ಹೊರಗೆ ನಿಂತು ಬೆದರಿಕೆ ಹಾಕಿದ್ದಾರೆ ಎಂದು ದೂರಿದರು. ಇದು ಸಂಪೂರ್ಣವಾಗಿ ಪೂರ್ವನಿಯೋಜಿತ ದಾಳಿಯಾಗಿದ್ದು, ಇದರ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿ ತಿರುಗೇಟು!; ಸಂಸದ ಮಜುಂದಾರ್ ಹೇಳಿದ್ದೇನು..?
ಮಮತಾ ಬ್ಯಾನರ್ಜಿ ಆರೋಪಗಳಿಗೆ ಬಿಜೆಪಿ ತೀವ್ರ ತಿರುಗೇಟು ನೀಡಿದ್ದು, ಸಂಸದ ಸುಕಾಂತ ಮಜುಂದಾರ್ ಮಾತನಾಡಿ, ಮಮತಾ ಬ್ಯಾನರ್ಜಿ ಅವರು ಅಧಿಕಾರ ಕಳೆದುಕೊಂಡಿರುವ ಮಾನಸಿಕತೆಯಿಂದ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ, ಈಗಾಗಲೇ ಟಿಎಂಸಿ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ, ದೀದಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡಬೇಕು ಎಂದರು(ಏಜೆನ್ಸೀಸ್).