ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಿಡಿ 
ದೇಶ

Messi Event | ವಿಐಪಿ ಸಂಸ್ಕೃತಿಯೇ ಇದಕ್ಕೆಲ್ಲಾ ಕಾರಣ... ಮಮತಾ ಬಂಧನಕ್ಕೆ ಆಗ್ರಹಿಸಿದ ಅಸ್ಸಾಂ ಸಿಎಂ ಹಿಮಂತ ಶರ್ಮಾ

ಕೋಲ್ಕತ್ತಾ: ಇಲ್ಲಿನ ಸಾಲ್ಟ್ ಲೇಕ್​ ಮೈದಾನದಲ್ಲಿ ನಡೆದ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಉಂಟಾದ ಅವ್ಯವಸ್ಥೆಯ ಬಗ್ಗೆ ಕಿಡಿಕಾರಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಶರ್ಮಾ, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಎನ್ನುವುದು ಸಂಪೂರ್ಣವಾಗಿ ಕುಸಿದಿದೆ, ಕ್ರೀಡಾಕೂಟ ಹಾಳಾಗಲು ರಾಜ್ಯದಲ್ಲಿ ಬೇರೂರಿರುವ ವಿಐಪಿ ಸಂಸ್ಕೃತಿಯೇ ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ. ಹೊಣೆಗಾರಿಕೆ ಎನ್ನುವುದು ಮೇಲಿನಿಂದ ಆರಂಭವಾಗಬೇಕು, ರಾಜ್ಯದ ಗೃಹ ಖಾತೆ ಮುಖ್ಯಮಂತ್ರಿಗಳ ಬಳಿಯೇ ಇರುವುದರಿಂದ ಅವರೇ ಇದರ ಜವಾಬ್ದಾರಿ ಹೊರಬೇಕು, ಘಟನೆಯ ಕುರಿತಾದ ಸತ್ಯ ಹೊರಬರಬೇಕಾದರೆ ಸಿಎಂ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಆಸ್ಸಾಂನ ಸಾರ್ವಜನಿಕ ಕಾರ್ಯಕ್ರಮವನ್ನು ಉಲ್ಲೇಖಿಸಿದ ಸಿಎಂ ಶರ್ಮಾ, ಜುಬೀನ್ ಗರ್ಗ್ ನಿಧನರಾದಾಗ ಗುವಾಹಟಿಯ ರಸ್ತೆಗಳು ಮೂರು ದಿನಗಳವರೆಗೆ ಸುಮಾರು 10 ಲಕ್ಷ ಜನರಿಂದ ತುಂಬಿದ್ದವು, ಆದರೆ ಅಲ್ಲಿ ಯಾವುದೇ ಅಪಘಾತದ ವರದಿಯಾಗಿಲ್ಲ. ಪೋಸ್ಟ್ ಮ್ಯಾಲೋನ್ ಅವರ ಕಾರ್ಯಕ್ರಮವು ಶಾಂತಿಯುತವಾಗಿ ನಡೆಯಿತು. ಸುಮಾರು 50,000 ಜನರು ಅಲ್ಲಿಗೆ ಹೋದರು, ಮತ್ತು ಯಾವುದೇ ಧುರ್ಘಟನೆ ವರದಿಯಾಗಿಲ್ಲ. ಮುಂಬೈನಲ್ಲಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ಕಾರ್ಯಕ್ರಮವು ಸುಸೂತ್ರವಾಗಿಯೇ ನಡೆಯಿತು. ಆದರೆ ಪಶ್ಚಿಮ ಬಂಗಾಳವು ಏನನ್ನೂ ಊಹಿಸಲಾಗದ ರಾಜ್ಯವಾಗಿದೆ. ಅಲ್ಲಿ ವಿಐಪಿ ಸಂಸ್ಕೃತಿ ದೊಡ್ಡ ಮಟ್ಟದಲ್ಲಿದೆ ಎಂದು ಹೇಳಿದರು.
ಈ ಘಟನೆಯ ಬಳಿಕ ರಾಜ್ಯದ ನಾಯಕತ್ವ ವಹಿಸಿಕೊಂಡಿರುವ ವ್ಯಕ್ತಿಗಳು ಆತ್ಮಾವಲೋಕನ ಮಾಡಿಕೊಳ್ಳುಬೇಕಿದೆ, ಮೆಸ್ಸಿ ಇಡೀ ಜಗತ್ತಿಗೆ ಆದರ್ಶ, ಬಂಗಾಳದಲ್ಲಿ ಪ್ರತಿದಿನ ಮುಗ್ಧ ಜನರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದು ಕಳವಳಕಾರಿ ಸಂಗತಿ ಎಂದು ಹೇಳಿದರು(ಏಜೆನ್ಸೀಸ್​).