ಮಮತಾ ಬ್ಯಾನರ್ಜಿ ಮತ್ತು ಅನುಬ್ರತಾ ಮೊಂಡಲ್
ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ನಲ್ಲಿ ಬಂಡಾಯ ಇನ್ನೂ ಮುಗಿಯುತ್ತಿಲ್ಲ, ನಿಧಾನವಾಗಿ ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವದ ಟಿಎಂಸಿ ಬಣದ ಸಂಖ್ಯೆ ಖಾಲಿಯಾಗುತ್ತಿದ್ದು, ಇಂದು(ಜು. 11) ಮಮತಾ ಅವರ ಆಪ್ತರೆನಿಸಿಕೊಂಡಿದ್ದ ಅನುಬ್ರತಾ ಮಂಡಲ್ ಬಂಡಾಯ ಬಣವನ್ನು ಸೇರ್ಪಡೆಯಾಗಿದ್ದಾರೆ.
ಮಮತಾ ಬ್ಯಾನರ್ಜಿಯವರ ಆಪ್ತ ಸಹಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಅನುಬ್ರತಾ ಮಂಡಲ್, ಮೇ 4ರ ಫಲಿತಾಂಶದ ಬಳಿಕ ಮುಂದಿನ ರಾಜಕೀಯದ ಬಗ್ಗೆ ಮೌನವಾಗಿದ್ದರು. ಮತ್ತು ಅವರು ಬಂಡಾಯ ಬಣ ಸೇರ್ಪಡೆಯಾಗಲಿದ್ದಾರೆ ಎನ್ನುವ ಚರ್ಚೆ ನಡೆದಿತ್ತು. ಅದಕ್ಕೆ ಇಂದು ಫುಲ್ ಸ್ಟಾಪ್ ಬಿದ್ದಿದೆ.
ಟಿಎಂಸಿ ಬಂಡಾಯ ಬಣದ ಮುಖ್ಯಸ್ಥ ರಿತಬ್ರತಾ ಬ್ಯಾನರ್ಜಿ, ಇಂದು ಹಲವಾರು ಜಿಲ್ಲೆಗಳಿಗೆ ಹೊಸ ಅಧ್ಯಕ್ಷರನ್ನಾಗಿ ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಈ ವೇಳೆ ಅನುಬ್ರತಾ ಮಂಡಲ್ ಅವರನ್ನು ಬಿರ್ಭೂಮ್ ಜಿಲ್ಲೆಯ ಮುಖ್ಯಸ್ಥರನ್ನಾಗಿ ಮಾಡಿದ್ದು, ಅವರು ಬಂಡಾಯ ಬಣ ಸೇರ್ಪಡೆಯಾಗಿದ್ದಾರೆ ಎಂಬುದನ್ನು ಖಚಿತ ಪಡಿಸಿದೆ.
ಈ ಕುರಿತು ಮಾತನಾಡಿರುವ ರಿತಬ್ರತಾ ಬ್ಯಾನರ್ಜಿ, ನಾವು ವಿವಿಧ ಜಿಲ್ಲೆಗಳ ಅಧ್ಯಕ್ಷರನ್ನು ನೇಮಿಸಿದ್ದೇವೆ. ಮಾಲ್ಡಾ ಜಿಲ್ಲೆಯ ಅಧ್ಯಕ್ಷರನ್ನಾಗಿ ಪ್ರಸೂನ್ ಬ್ಯಾನರ್ಜಿ, ದಕ್ಷಿಣ ಕೋಲ್ಕತ್ತಾ ಜಿಲ್ಲೆಯ ದೇಬಾಶಿಶ್ ಕುಮಾರ್, ಉತ್ತರ ಕೋಲ್ಕತ್ತಾ ಜಿಲ್ಲೆಯ ಸಂದೀಪನ್ ಸಹಾ, ಬಿರ್ಭೂಮ್ ಜಿಲ್ಲೆಯ ಅನುಬ್ರತ ಮಂಡಲ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಕ್ರಮ ದನ ಕಳ್ಳಸಾಗಾಣೆ ಪ್ರಕರಣದಲ್ಲಿ ಅನುಬ್ರತಾ ಮಂಡಲ್ 2024 ಸೆಪ್ಟೆಂಬರ್ನಲ್ಲಿ ಜಾಮೀನು ಪಡೆಯುವ ಮೊದಲು ಸುಮಾರು 25 ತಿಂಗಳು ಜೈಲಿನಲ್ಲಿದ್ದರು ಎನ್ನಲಾಗಿದೆ (ಏಜೆನ್ಸೀಸ್).