Mallikarjun Kharge 
ದೇಶ

'ಕೇರಳದವ್ರು ಇಂಟಲಿಜೆಂಟ್ಸ್​, ಗುಜರಾತ್​ನ ಅನಕ್ಷರಸ್ಥ ಜನರಂತೆ ಮರುಳು ಮಾಡೋಕೆ ಹೋಗ್ಬೇಡಿ': ಮಲ್ಲಿಕಾರ್ಜುನ್ ಖರ್ಗೆ..Mallikarjun Kharge

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್ 9ರ ಕೇರಳ ವಿಧಾನಸಭೆ ಚುನಾವಣೆ, ಪ್ರಚಾರದಲ್ಲಿ ತೊಡಗಿದ ರಾಷ್ಟ್ರೀಯ ನಾಯಕರು
  • ಕೇರಳದ ಜನರು ಬುದ್ಧಿವಂತರು ಅವರನ್ನು ಗುಜರಾತ್‌ನ ಅನಕ್ಷರಸ್ಥರಂತೆ ಮರುಳು ಮಾಡೋಕೆ ಹೋಗ್ಬೇಡಿ
  • ಗುಜರಾತ್‌ನ ಆರು ಕೋಟಿ ಜನರಿಗೆ ಮತ್ತು ಮಹಾಪುರುಷರ ಪರಂಪರೆಗೆ ಮಾಡಿದ ಅವಮಾನ
ತಿರುವನಂತಪುರಂ: ಕೇರಳದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸಬೇಡಿ. ಇಲ್ಲಿನ ಜನರು ಬಹಳ ಬುದ್ಧಿವಂತರು ಮತ್ತು ವಿದ್ಯಾವಂತರು. ಸುಶಿಕ್ಷಿತರಾದ ಅವರನ್ನು ಗುಜರಾತ್‌ನ ಅನಕ್ಷರಸ್ಥ (Illiterate Gujarat)ಜನರಂತೆ ಮರುಳು ಮಾಡೋಕೆ ಆಗೋದಿಲ್ಲ ಎಂದು ಪ್ರಧಾನಿ ಮೋದಿಯವರನ್ನು ತೆಗಳುವ ಭರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಕೊಟ್ಟ ಹೇಳಿಕೆಯು ಸದ್ಯ ರಾಜಕೀಯವಲಯದಲ್ಲಿ ಕಿಚ್ಚನ್ನು ಎಬ್ಬಿಸಿದೆ.
ಕೇರಳ ವಿಧಾನಸಭೆ ಚುನಾವಣೆ 2026ರ ಏಪ್ರಿಲ್ 9ರಂದು(Kerala Assembly Election 2026) ನಡೆಯಲಿದ್ದು, ಈಗಾಗಲೇ ಪ್ರಚಾರದ ಕಾವು ಜೋರಾಗಿದೆ. ಈ ಹೊತ್ತಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಡುಕ್ಕಿ ಜಿಲ್ಲೆಯಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವುದು ಸದ್ಯ ಬಿಜೆಪಿ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಖರ್ಗೆ ಹೇಳಿದ್ದೇನು?
 ಪ್ರಧಾನಿ ಮೋದಿ(PM Modi) ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ಅವರು, ಕೇರಳದ ಜನರನ್ನು ದಾರಿ ತಪ್ಪಿಸುವ ಪ್ರಯತ್ನಕ್ಕೆ ಕೈ ಹಾಕಬೇಡಿ. ಇಲ್ಲಿನ ಜನರು ನಿಮ್ಮ ಮಾತಿಗೆ ಮರಳು ಹೋಗುವವರಲ್ಲ. ಬಹಳ ಬುದ್ಧಿವಂತರು ಮತ್ತು ವಿದ್ಯಾವಂತರು. ಮೋದಿ ಜೀ ಮತ್ತು ವಿಜಯನ್ ಅವರೇ, ನೀವು ಗುಜರಾತ್ ಅಥವಾ ಇತರ ಕಡೆಗಳಲ್ಲಿ ಇರುವ ಅನಕ್ಷರಸ್ಥರನ್ನು ಮರುಳು ಮಾಡಬಹುದು, ಆದರೆ ಕೇರಳದ ಜನರನ್ನಲ್ಲ ಎಂದು ಮಲ್ಲಿಕಾರ್ಜುನ್​ ಖರ್ಗೆ ಹೇಳಿರುವುದು ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್​ ನಡುವಿನ ಮಾತಿನ ತಿಕ್ಕಾಟಕ್ಕೆ ಕಾರಣವಾಗಿದೆ.

ಬಿಜೆಪಿ ಹೇಳಿದ್ದೇನು?

ಇದು ಆರು ಕೋಟಿ ಗುಜರಾತ್​ ಜನರಿಗೆ ಮಾಡಿದ ಅವಮಾನ. ಕಾಂಗ್ರೆಸ್​ನ ಮನಸ್ಥಿತಿ ಹೇಗಿದೆ ಅನ್ನೋದನ್ನ ಮಲ್ಲಿಕಾರ್ಜುನ್​ ಖರ್ಗೆ ಹೇಳಿಕೆ ಮೂಲಕ ತಿಳಿದುಬಂದಿದೆ. ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಮತ್ತು ಪ್ರಧಾನಿ ಮೋದಿಯವರನ್ನು ನೀಡಿದ ನಾಡನ್ನು ಕಾಂಗ್ರೆಸ್​ ಪದೇ ಪದೆ ಗುರಿ ಮಾಡಿಕೊಂಡು ಹೀಯಾಳಿಸುತ್ತಿದೆ. ಗುಜರಾತ್​ನ  ಪ್ರಜ್ಞಾವಂತ ಜನರು ಈ ಹೇಳಿಕೆಯನ್ನು ಎಂದು ಕ್ಷಮಿಸೊಲ್ಲ ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಂಘವಿ ಹೇಳಿದರು, (ಏಜೆನ್ಸೀಸ್​).