ದೇಶ

ದೀಪಾವಳಿ ಹಬ್ಬದ ವೇಳೆ ಮನೆಯಲ್ಲಿ ಭಾರಿ ಅಗ್ನಿ ಅವಘಡ: ಕುಟುಂಬದ ಆರು ಮಂದಿ ಸಜೀವ ದಹನ | fire incident

ದೀಪಾವಳಿ ಹಬ್ಬದ ವೇಳೆ ದಿನಸಿ ಅಂಗಡಿಯಲ್ಲಿ ಪೂಜೆ ನಡೆಸಿ , ಹಬ್ಬದ ಊಟ ಸೇವಿಸಿ ಮನೆಯೊಂದರಲ್ಲಿ ಮಲಗಿಕೊಂಡ ಬಳಿಕ ಭಾರಿ ಅಗ್ನಿ ಅವಘಡ ಸಂಭವಿಸಿ, ಒಂದೇ ಕುಟುಂಬ ಆರು ಮಂದಿ ಸಜೀವ ದಹನವಾಗಿರುವ ಘಟನೆ ಸೋಮವಾರ(ನ. 09) ವರದಿಯಾಗಿದೆ.

ಮುಂಬೈ: ದೀಪಾವಳಿ ಹಬ್ಬದ ವೇಳೆ ದಿನಸಿ ಅಂಗಡಿಯಲ್ಲಿ ಪೂಜೆ ನಡೆಸಿ , ಹಬ್ಬದ ಊಟ ಸೇವಿಸಿ ಮನೆಯೊಂದರಲ್ಲಿ ಮಲಗಿಕೊಂಡ ಬಳಿಕ ಭಾರಿ ಅಗ್ನಿ ಅವಘಡ ಸಂಭವಿಸಿ, ಒಂದೇ ಕುಟುಂಬ ಆರು ಮಂದಿ ಸಜೀವ ದಹನವಾಗಿರುವ ಘಟನೆ ಸೋಮವಾರ(ನ. 09) ವರದಿಯಾಗಿದೆ.

ಮಹಾರಾಷ್ಟ್ರದ ಧರಾಶಿವ್ ಜಿಲ್ಲೆಯ ಯದ್ಶಿ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ಗ್ರಾಮದ 75 ವರ್ಷದ ಉತ್ತಮ್ ತ್ರಿಂಬಕ್ ಎಂಬುವರು ತಮ್ಮ ಮನೆಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ದೀಪಾವಳಿ ಹಬ್ಬದ ಪೂಜೆ ಬಳಿಕ, ಊಟ ಮಾಡಿ ಕುಟುಂಬದ ಎಲ್ಲಾ ಸದಸ್ಯರು ಎಂದಿನಂತೆ ಮನೆಯ ಛಾವಣಿಯ ಮೇಲೆ ಮಲಗಿದ್ದರು ಎನ್ನಲಾಗಿದೆ.

ಮಧ್ಯರಾತ್ರಿ, ದಿನಸಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ರಮೇಣ, ಮನೆಗೂ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಬೆಂಕಿ ವೇಗವಾಗಿ ಮನೆ ತುಂಬಾ ಹರಡಿ ಮಲಗಿದ್ದ ಸದಸ್ಯರು ಹೊರಬರಲಾಗದೇ ಆರು ಮಂದಿಯೂ ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

ಮೃತರು ಉತ್ತಮ್ ತ್ರಿಂಬಕ್(75), ಅವರ ಪತ್ನಿ ಚಂದ್ರಕಲಾ(70), ಮಗ ಗೋವಿಂದ್(47), ಮಗಳು ಜ್ಯೋತಿ(42), ಮತ್ತು ಮೊಮ್ಮಕ್ಕಳಾದ ಗಾಯತ್ರಿ (16) ಮತ್ತು ಸಿದ್ಧಿ (15) ಎಂದು ಗುರುತಿಸಲಾಗಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ದಿನಸಿ ಅಂಗಡಿಯಲ್ಲಿನ ಯಾವುದೋ ಸುಡುವ ವಸ್ತುವಿನಿಂದ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ (ಏಜೆನ್ಸೀಸ್).