ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಮೇಲೆ ಮೊಟ್ಟೆ ಎಸೆತ 
ದೇಶ

ಮತ್ತೆ ಮೊಟ್ಟೆ ದಾಳಿಗೆ ಗುರಿಯಾದ ಮಹುವಾ ಮೊಯಿತ್ರಾ; ‘ಸ್ವಾತಂತ್ರ್ಯ ಹೋರಾಟಗಾರರಂತೆ ಧೈರ್ಯವಾಗಿ ಎದುರಿಸಿದೆ’ ಎಂದ ಸಂಸದೆ! Mahua Moitra

ಕೊಲ್ಕತ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ. ನುಡಿಯಾ ಜಿಲ್ಲೆಯ ತೆಹಟ್ಟಾ ಪ್ರದೇಶಕ್ಕೆ ಭೇಟಿ ನೀಡಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರ ಮೇಲೆ ಕೆಲವರು ಮೊಟ್ಟೆಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಭಾರೀ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಮಹುವಾ ಮೊಯಿತ್ರಾ, ಸ್ಥಳೀಯ ಪೊಲೀಸ್ ಆಡಳಿತಕ್ಕೆ ಮುಂಚಿತವಾಗಿಯೇ ಮಾಹಿತಿ ನೀಡಿ ಪಕ್ಷದ ಸಭೆಗೆ ತೆರಳಿದ್ದರು. ಸಭೆ ಮುಗಿಸಿ ಹೊರಬರುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯವನ್ನು ಸ್ವತಃ ಸಂಸದೆ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

ಪೊಲೀಸರ ಕಣ್ಣೆದುರೇ ಮೊಟ್ಟೆ ದಾಳಿ!

ಕಿಡಿಗೇಡಿಗಳು ಪೊಲೀಸರ ಕಣ್ಣೆದುರಲ್ಲೇ ಅಂಗಡಿಯಿಂದ ಮೊಟ್ಟೆಗಳನ್ನು ಖರೀದಿಸಿ ತಮ್ಮ ಮೇಲೆ ಎಸೆದರು ಎಂದು ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ. ಹೈಕೋರ್ಟ್ ಆದೇಶದ ಪ್ರಕಾರ ಪೊಲೀಸ್ ರಕ್ಷಣೆಯಲ್ಲಿದ್ದರೂ, ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸುವ ಬದಲು ಬಲವಂತವಾಗಿ ತಮ್ಮನ್ನು ಕಾರಿನೊಳಗೆ ಕೂರಿಸಿದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿಯ ಸಮಯದಲ್ಲಿ ಮಹುವಾ ಮೊಯಿತ್ರಾ ಅವರ ಮುಖದ ಮೇಲೆ ಒಡೆದ ಮೊಟ್ಟೆಯ ಚಿಪ್ಪುಗಳು ಮತ್ತು ಹಳದಿ ಲೋಳೆ ಅಂಟಿಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ಬಿಜೆಪಿ ಕಾರ್ಯಕರ್ತರ ಕೈವಾಡ

ಸ್ಥಳೀಯ ಮಂಡಲ ಅಧ್ಯಕ್ಷರು ಹಾಗೂ ಪಂಚಾಯತ್ ಸಮಿತಿಯ ಕೆಲ ಪದಾಧಿಕಾರಿಗಳು ಸೇರಿದಂತೆ ಸುಮಾರು 7 ರಿಂದ 10 ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ನುಗ್ಗಿ ಜೈ ಶ್ರೀ ರಾಮ್ ಘೋಷಣೆ ಕೂಗುತ್ತಾ ಮೊಟ್ಟೆ ಎಸೆದಿದ್ದಾರೆಂದು ಮೊಯಿತ್ರಾ ದೂರಿದ್ದಾರೆ. ಈ ಎಲ್ಲಾ ಗಲಾಟೆಯ ನಡುವೆಯೂ ಸಂಸದೆ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿ, ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂಬುದನ್ನು ಜನರಿಗೆ ತೋರಿಸಲು ಯತ್ನಿಸಿದ್ದಾರೆ.
ಸುಪ್ರೀಂ ಕೋರ್ಟ್ ಮಾತನ್ನು ನೆನಪಿಸಿಕೊಂಡ ಸಂಸದೆ!
ಘಟನೆಯ ಬಳಿಕ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ಮಹುವಾ ಮೊಯಿತ್ರಾ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ಮಾತನ್ನು ಉಲ್ಲೇಖಿಸಿದ್ದಾರೆ. ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯೊಂದರ ವೇಳೆ ನ್ಯಾಯಮೂರ್ತಿಗಳು, ನೀವು ಸಂಸದರಾಗಿದ್ದೀರಿ, ರಾಜಕೀಯಕ್ಕೆ ಬಂದಮೇಲೆ ಮೊಟ್ಟೆಗಳಿಗೆ ಹೆದರುತ್ತೀರಾ? ಸ್ವಾತಂತ್ರ್ಯ ಹೋರಾಟಗಾರರು ಎದೆಗೆ ಗುಂಡುಗಳನ್ನು ಎದುರಿಸಿರಲಿಲ್ಲವೇ? ಎಂದು ಮೌಖಿಕವಾಗಿ ಹೇಳಿದ್ದರು.ಇದೇ ಮಾತನ್ನು ನೆನಪಿಸಿಕೊಂಡಿರುವ ಮಹುವಾ ಮೊಯಿತ್ರಾ, ನ್ಯಾಯಮೂರ್ತಿಗಳ ಸಲಹೆಯಂತೆ ಸ್ವಾತಂತ್ರ್ಯ ಹೋರಾಟಗಾರರಂತೆ ನಾನು ಈ ದಾಳಿಯನ್ನು ಧೈರ್ಯದಿಂದ ಎದುರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಮೊದಲ ಮೊಟ್ಟೆ ದಾಳಿ!

ಜು. 1 ರಂದು ಕೃಷ್ಣಾನಗರದ ಸಂಸದೆ, ಮಹುವಾ ಮೊಯಿತ್ರಾ ತಮ್ಮ ಕ್ಷೇತ್ರದ ರೆಸ್ಟೋರೆಂಟ್​ವೊಂದಕ್ಕೆ ಬೇಟಿ ನೀಡಿದ್ದ ಸಂದರ್ಭದಲ್ಲಿ ರೊಚ್ಚಿಗೆದ್ದ ಜನ ಅವರ ಮೇಲೆ ಮೊಟ್ಟೆ ಎಸೆದಿದ್ದರು. ಈ ಘಟನೆಯನ್ನು ತಮ್ಮ ಮೊಬೈಲ್​ನಲ್ಲಿ ಹಂಚಿಕೊಂಡಿದ್ದ ಸಂಸದೆ, ಬಂಗಾಳದಲ್ಲಿ ಚುನಾವಣೆ ಮುಗಿದ ಮೇಲೆ ಬಿಜೆಪಿ ಗೂಂಡಾಗಿರಿ ಎಲ್ಲೆ ಮೀರಿದ್ದು, ಇಂದು ನನ್ನ ಮೇಲೆ ಮೊಟ್ಟೆ ಎಸೆದಿದ್ದಾರೆ. ಇದನ್ನು ತಡೆಯಬೇಕಿದ್ದ ಪೊಲೀಸರು ಸುಮ್ಮನೆ ನೋಡುತ್ತಾ ನಿಂತಿದ್ದಾರೆಂದು ವಿಡಿಯೋನಲ್ಲಿ ಆರೋಪಿಸಿದ್ದರು, (ಏಜನ್ಸೀಸ್​). ​