Maharashtra civic Polls 
ದೇಶ

ಮಹಾರಾಷ್ಟ್ರ ಚುನಾವಣೆಯಲ್ಲಿ ಮಾರ್ಕರ್ ಪೆನ್ ಬಳಸಿ ಅಕ್ರಮ..? ಪ್ರಜಾಪ್ರಭುತ್ವದ ಕೊಲೆ ಎಂದು ವಿಪಕ್ಷಗಳ ಆಕ್ರೋಶ | Maharashtra civic Polls

ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರರ ಬೆರಳುಗಳಿಗೆ ಅಳಿಸಲಾಗದ ಶಾಯಿಯ ಬದಲು, ಮಾರ್ಕರ್ ಪೆನ್ನುಗಳನ್ನು ಬಳಸುವ ಬಗ್ಗೆ ವಿವಾದ ಭುಗಿಲೆದ್ದಿದ್ದು, ಈ ಕ್ರಮವು ಚುನಾವಣಾ ವಂಚನೆಗೆ ಪರೋಕ್ಷವಾಗಿ ಅವಕಾಶ ನೀಡುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದು, ಚುನಾವಣೆಗಳನ್ನು ಗೆಲ್ಲಲು ಸರ್ಕಾರ ವಂಚನೆಯ ದಾರಿ ಹಿಡಿದಿದೆ, ಈ ವ್ಯವಸ್ಥೆಯನ್ನು ಹೇಗೆ ಜಾರಿಗೆ ತರುತ್ತಿದೆ ಎಂಬುದನ್ನು ನಾನು ಎಲ್ಲರ ಗಮನಕ್ಕೆ ತರಲು ಬಯಸುತ್ತೇನೆ. ಆಡಳಿತ ನಡೆಸುತ್ತಿರುವವರು ಯಾವುದೇ ಬೆಲೆ ತೆತ್ತಾದರೂ ಸರಿ ಚುನಾವಣೆಗಳನ್ನು ಗೆಲ್ಲಲು ಬಯಸುತ್ತಾರೆ, ಅದಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದರು.
ಮಾರ್ಕರ್ ಪೆನ್ನುಗಳ ಬಳಕೆಯನ್ನು ನಿರ್ದಿಷ್ಟವಾಗಿ ಆಕ್ಷೇಪಿಸಿದ ರಾಜ್​, ಈಗ ಶಾಯಿ ಬಳಸುವ ಬದಲು ಮಾರ್ಕರ್ ಪೆನ್ನುಗಳನ್ನು ಬಳಸುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ಇಂತಹ ವಂಚನೆ ಚುನಾವಣೆಗಳಿಂದ ಯಾವುದೇ ಪ್ರಯೋಜನವಿಲ್ಲ. ನಾಗರಿಕರು ಎಚ್ಚರದಿಂದಿರಲು ನಾನು ಮನವಿ ಮಾಡುತ್ತೇನೆ ಎಂದರು. ನಕಲಿ ಮತ್ತು ಎರಡು ಬಾರಿ ಮತ ಚಲಾಯಿಸುವುದು ಮತ್ತು ವಿವಿಪಿಎಟಿ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಠಾಕ್ರೆ, ರಾಜಕೀಯ ಪಕ್ಷಗಳನ್ನು ಸಂಪರ್ಕಿಸದೆ ಹೊಸ ಕಾರ್ಯವಿಧಾನಗಳನ್ನು ಪರಿಚಯಿಸಲಾಗುತ್ತಿದೆ, ನೂತನ ಸಾಧನಗಳನ್ನು ಬಳಸುವ ಮುನ್ನ ನಮ್ಮನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ವಿಷಯ ಬಹಿರಂಗವಾಗಿದ್ದೇಗೆ..?

ಈ ವಿಷಯವನ್ನು ಮೊದಲು ಕಲ್ಯಾಣ್ ಕ್ಷೇತ್ರದ ಮಹಾರಾಷ್ಟ್ರ ನವನಿರ್ಮಾಣ ಸೇನಾ ಅಭ್ಯರ್ಥಿ ಊರ್ಮಿಳಾ ತಾಂಬೆ ಪ್ರಸ್ತಾಪಿಸಿದ್ದು, ರಾಜ್ಯ ಚುನಾವಣಾ ಆಯೋಗವು ಆಡಳಿತ ಪಕ್ಷಕ್ಕೆ ಸಹಾಯವಾಗುವಂತೆ ಅಳಿಸಲಾಗದ ಶಾಯಿಯ ಬದಲಿಗೆ ಮಾರ್ಕರ್ ಪೆನ್ನುಗಳನ್ನು ಉದ್ದೇಶಪೂರ್ವಕವಾಗಿ ಬಳಸುತ್ತಿದೆ ಎಂದು ಆರೋಪಿಸಿದರು. ಈ ಸುದ್ದಿ ಬಹಿರಂಗಗೊಂಡ ಬೆನ್ನಲ್ಲೇ ಮುಂಬೈ ತಕ್‌ನ ಪತ್ರಕರ್ತರು ಸತ್ಯಶೋಧನೆ ನಡೆಸಿ, ಅಸಿಟೋನ್ ಹಚ್ಚಿದ ಬಳಿಕ ಬೆರಳಿನ ಮೇಲಿನ ಗುರುತು ಮಾಯವಾಗಿದೆ ಎಂದು ತೋರಿಸಿದರು(ಏಜೆನ್ಸೀಸ್​).