West Bengal Elections: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಜಿದ್ದಾಜಿದ್ದಿ ಜೋರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಆಡಳಿತ, ಬುಡಕಟ್ಟು ಸಮುದಾಯಗಳ ಹಕ್ಕುಗಳು ಮತ್ತು ಸರ್ಕಾರಿ ಯಂತ್ರೋಪಕರಣಗಳ ದುರುಪಯೋಗದಂತಹ ಗಂಭೀರ ವಿಷಯಗಳ ಮೇಲೆ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದಲ್ಲಿ ತುಷ್ಟೀಕರಣ ರಾಜಕೀಯಕ್ಕೆ ಒತ್ತು ನೀಡುತ್ತಿದೆ ಮತ್ತು ಬುಡಕಟ್ಟು ಪ್ರದೇಶಗಳನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರೆ, ಮಮತಾ ಬ್ಯಾನರ್ಜಿ ಪ್ರಧಾನಿಯವರು ರಾಜಕೀಯ ಪ್ರಚಾರಕ್ಕಾಗಿ ಅಧಿಕೃತ ವೇದಿಕೆಗಳನ್ನು ಬಳಸಿಕೊಳ್ಳುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಜಂಗಲ್‌ಮಹಲ್‌ನಲ್ಲಿ ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ಘರ್ಜನೆ
ಪುರುಲಿಯಾದಲ್ಲಿ ನಡೆದ ಬೃಹತ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬುಡಕಟ್ಟು ಜನರೇ ಹೆಚ್ಚಾಗಿರುವ ಜಂಗಲ್‌ಮಹಲ್ ಪ್ರದೇಶದಲ್ಲಿ ಬಿಜೆಪಿಯ ಪ್ರಚಾರಕ್ಕೆ ಚಾಲನೆ ನೀಡಿದರು. ಟಿಎಂಸಿ ಸರ್ಕಾರವು ಬಂಗಾಳದಲ್ಲಿ ಮಹಾ ಜಂಗಲ್‌ರಾಜ್ ಮುನ್ನಡೆಸುತ್ತಿದೆ ಎಂದು ಕಿಡಿಕಾರಿದ ಅವರು, ಒಳನುಸುಳುವಿಕೆಯಿಂದಾಗಿ ಬಂಗಾಳದ ಸಾಂಸ್ಕೃತಿಕ ರಚನೆ ಬದಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬುಡಕಟ್ಟು ಜನರ ಗುರುತು, ಭಾಷೆ ಮತ್ತು ಅಭಿವೃದ್ಧಿಯನ್ನು ಬದಿಗಿಡಲಾಗಿದೆ ಎಂದು ಆರೋಪಿಸಿದ ಮೋದಿ, ಪುರುಲಿಯಾ, ಬಂಕುರಾ ಮತ್ತು ಝಾರ್‌ಗ್ರಾಮ್‌ನಂತಹ ಜಿಲ್ಲೆಗಳು ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ ಎಂದರು. ಭ್ರಷ್ಟಾಚಾರ ಮತ್ತು ಕಟ್ ಮನಿ ಪದ್ಧತಿಗಳಿಂದ ರಾಜ್ಯದ ಆಡಳಿತ ಪಾರ್ಶ್ವವಾಯುವಿಗೆ ತುತ್ತಾಗಿದೆ ಎಂದು ಟೀಕಿಸಿದರು. ರಾಜ್ಯದಲ್ಲಿನ ಶಾಲಾ ನೇಮಕಾತಿ ಹಗರಣವು ಟಿಎಂಸಿ ಸರ್ಕಾರದ ವ್ಯವಸ್ಥಿತ ವೈಫಲ್ಯಕ್ಕೆ ಸಾಕ್ಷಿಯಾಗಿದ್ದು, ಮಹಿಳಾ ಶಾಸಕರು ಸಬಲೀಕರಣಗೊಂಡರೆ ತಮ್ಮ ಅಧಿಕಾರಕ್ಕೆ ಸವಾಲು ಎದುರಾಗಬಹುದು ಎಂಬ ಭಯದಿಂದ ಟಿಎಂಸಿ ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಿದೆ ಎಂದು ದೂರಿದರು.
ಪ್ರಧಾನಿ ವಿರುದ್ಧ ಮಮತಾ ಬ್ಯಾನರ್ಜಿ ಪ್ರತಿಭಟನೆ ಮತ್ತು ಆಕ್ಷೇಪ
ಪ್ರಧಾನಿಯವರ ಆರೋಪಗಳಿಗೆ ಹೂಗ್ಲಿಯ ತಾರಕೇಶ್ವರದ ಪ್ರಚಾರದ ಸಭೆಯಲ್ಲಿ ಕಟುವಾಗಿ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ಸರ್ಕಾರ ರಾಜಕೀಯ ಪ್ರಚಾರಕ್ಕಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಾ, ಮಹಿಳಾ ಮೀಸಲಾತಿ ಮಸೂದೆಯ ಕುರಿತು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮಾಡಿದ ಭಾಷಣವು ಬಿಜೆಪಿ ಪರವಾಗಿ ನಡೆಸಿದ ಅಕ್ರಮ ಪ್ರಚಾರ, ಈ ವರ್ತನೆಯು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಪ್ರಧಾನಿಯವರು ತಮ್ಮ ಪಕ್ಷಕ್ಕಾಗಿ ಕಾನೂನುಬಾಹಿರವಾಗಿ ಪ್ರಚಾರ ಮಾಡುತ್ತಿರುವುದಕ್ಕೆ ದೇಶದ ಜನರಿಗೆ ಉತ್ತರಿಸಬೇಕು ಎಂದಿರುವ ದೀದಿ, ಮಹಿಳಾ ಮೀಸಲಾತಿ ಮಸೂದೆಯು ಈಗಾಗಲೇ ಸೆಪ್ಟೆಂಬರ್ 2023 ರಲ್ಲಿ ಅಂಗೀಕರಿಸಲ್ಪಟ್ಟಿದ್ದರೂ, ಅದನ್ನು ಈವರೆಗೆ ಏಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸುತ್ತಾ, ಒಂದೇ ಮಸೂದೆಯನ್ನು ಸರ್ಕಾರ ಎಷ್ಟು ಬಾರಿ ಮಂಡಿಸುತ್ತದೆ ಮತ್ತು ಈ ಪ್ರಕ್ರಿಯೆಯನ್ನು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯೊಂದಿಗೆ ಏಕೆ ಜೋಡಿಸಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ.
ಮಸೂದೆಯನ್ನು ಅಂಗೀಕರಿಸಲು ಸಂಸತ್ತಿನಲ್ಲಿ ಅಗತ್ಯವಾದ ಸಂಖ್ಯಾಬಲವಿಲ್ಲದಿದ್ದರೂ ಸಹ, ಲೋಕಸಭೆಯಲ್ಲಿ ಅದನ್ನು ಮಂಡಿಸುವ ಮೂಲಕ ಬಿಜೆಪಿ ರಾಜಕೀಯ ನಾಟಕವಾಡುತ್ತಿದೆ ಎಂದು ಮಮತಾ ಆರೋಪಿಸಿದ್ದು, ಈ ಬೆಳವಣಿಗೆಯು ಬಿಜೆಪಿಯ ಅವನತಿಯ ಆರಂಭವನ್ನು ಸೂಚಿಸುತ್ತದೆ ಎಂದರು. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿಫಲವಾದ ಮರುದಿನವೇ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ವಿರೋಧ ಪಕ್ಷಗಳನ್ನು ಭ್ರೂಣ ಹತ್ಯೆಯ ಪಾಪ ಮಾಡಿದವರು ಎಂದು ಟೀಕಿಸಿದ್ದರು. ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಬಂಗಾಳದ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್).