ಮಮತಾ ಸರ್ಕಾರಕ್ಕೆ ಬಡವರ ಶಾಲೆಗಿಂತ ಮದರಸಾಗಳೇ ಮುಖ್ಯ! ಟಿಎಂಸಿ ವಿರುದ್ಧ ಗೃಹ ಸಚಿವ ಅಮಿತ್ ಷಾ ತೀವ್ರ ವಾಗ್ದಾಳಿ 
ದೇಶ

ಮಮತಾ ಸರ್ಕಾರಕ್ಕೆ ಬಡವರ ಶಾಲೆಗಿಂತ ಮದರಸಾಗಳೇ ಮುಖ್ಯ! ಟಿಎಂಸಿ ವಿರುದ್ಧ ಗೃಹ ಸಚಿವ ಅಮಿತ್ ಷಾ ತೀವ್ರ ವಾಗ್ದಾಳಿ | Amit Shah

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ಪಶ್ಚಿಮ ಮೇದಿನಿಪುರದ ಡೆಬ್ರಾದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah), ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ (TMC) ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ದೀದಿ ಸರ್ಕಾರವು ಬಡ ಮಕ್ಕಳಿಗಾಗಿ ಶಾಲೆಗಳನ್ನು ಕಟ್ಟುವ ಬದಲು ಮದ್ರಸಾಗಳನ್ನು ನಿರ್ಮಿಸುವುದಕ್ಕೇ ಆದ್ಯತೆ ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಶಿಕ್ಷಣದ ಹೆಸರಲ್ಲಿ ತುಷ್ಟೀಕರಣದ ರಾಜಕಾರಣ?

ಟಿಎಂಸಿ ಸರ್ಕಾರದ ನೀತಿಗಳನ್ನು ಟೀಕಿಸಿದ ಅಮಿತ್ ಷಾ, ಪಶ್ಚಿಮ ಬಂಗಾಳದಲ್ಲಿ ಶೈಕ್ಷಣಿಕ ಮೂಲಸೌಕರ್ಯಗಳು ಹದಗೆಟ್ಟಿವೆ. ಹಿಂದುಳಿದ ಸಮುದಾಯದ ಮಕ್ಕಳಿಗೆ ಉತ್ತಮ ಶಾಲೆಗಳ ಅಗತ್ಯವಿದೆ. ಆದರೆ ಮಮತಾ ಬ್ಯಾನರ್ಜಿ ಅವರು ಕೇವಲ ಒಂದು ನಿರ್ದಿಷ್ಟ ವರ್ಗದ ಮತ ಬ್ಯಾಂಕ್ ಓಲೈಕೆಗಾಗಿ ಮದ್ರಸಾಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದಾರೆ. ಇದು ಬಡ ಮತ್ತು ದೀನದಲಿತ ಸಮುದಾಯಗಳನ್ನು ಮತ್ತಷ್ಟು ಅಂಧಕಾರಕ್ಕೆ ದೂಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಘಾಟಲ್ ಮಾಸ್ಟರ್ ಪ್ಲಾನ್: 1,500 ಕೋಟಿಯ ಯೋಜನೆಯನ್ನು ತಿರಸ್ಕರಿಸಿದ ದೀದಿ!

ಪಶ್ಚಿಮ ಮೇದಿನಿಪುರ ಭಾಗದ ಬಹುಕಾಲದ ಸಮಸ್ಯೆಯಾದ ಘಾಟಲ್ ಪ್ರವಾಹದ ಬಗ್ಗೆ ಪ್ರಸ್ತಾಪಿಸಿದ ಷಾ, ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಅವರು ಘಾಟಲ್ ಅಭಿವೃದ್ಧಿಗಾಗಿ 1,500 ಕೋಟಿ ರೂಪಾಯಿಗಳ ಮಾಸ್ಟರ್ ಪ್ಲಾನ್ ಕಳುಹಿಸಿದ್ದರು. ಇದರ ಶೇ.60 ವೆಚ್ಚವನ್ನು ಕೇಂದ್ರವೇ ಭರಿಸುವುದಾಗಿ ಹೇಳಿತ್ತು. ಆದರೆ ಟಿಎಂಸಿ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಈ ಯೋಜನೆಯನ್ನು ಕಸದ ಬುಟ್ಟಿಗೆ ಹಾಕಿತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಒಂದು ವರ್ಷದೊಳಗೆ ಘಾಟಲ್ ಮಾಸ್ಟರ್ ಪ್ಲಾನ್ ಜಾರಿಗೊಳಿಸಿ ಪ್ರವಾಹ ಮುಕ್ತ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನುಸುಳುಕೋರರಿಗೆ ಮಮತಾ ರಕ್ಷಣೆ: ಅಮಿತ್​ ಷಾ ನೇರ ಎಚ್ಚರಿಕೆ

ಬಂಗಾಳದ ಗಡಿ ಭಾಗದ ನುಸುಳುವಿಕೆ ಸಮಸ್ಯೆಯ ಬಗ್ಗೆ ಮಾತನಾಡಿದ ಅಮಿತ್ ಷಾ, ಮಮತಾ ಬ್ಯಾನರ್ಜಿ ಅವರು ನುಸುಳುಕೋರರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಮತಾ ಜಿ, ನೀವು ಎಷ್ಟೇ ಪ್ರಯತ್ನಿಸಿದರೂ ಸರಿ, ಬಂಗಾಳದಲ್ಲಿರುವ ಪ್ರತಿಯೊಬ್ಬ ಅಕ್ರಮ ನುಸುಳುಕೋರರನ್ನು ಗುರುತಿಸಿ ನಾವು ಹೊರಹಾಕುತ್ತೇವೆ. ಜನ ಕಷ್ಟಪಡುತ್ತಿದ್ದರೆ ಮಮತಾ ಮಾತ್ರ ತಮ್ಮ ಸೋದರಳಿಯನನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಲು ಹವಣಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

'ಕಟ್-ಮನಿ' ಸಂಸ್ಕೃತಿಯಿಂದ ಬಂಗಾಳ ನಾಶ

ರಾಜ್ಯದಲ್ಲಿ ಸಾಂಸ್ಥಿಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದ ಗೃಹ ಸಚಿವರು, ಬಂಗಾಳದಲ್ಲಿ ಕಟ್-ಮನಿ ಸಂಸ್ಕೃತಿ ತಾಂಡವವಾಡುತ್ತಿದೆ. ಪ್ರತಿಯೊಂದು ಕೆಲಸಕ್ಕೂ ಕಮಿಷನ್ ನೀಡಬೇಕಾದ ಪರಿಸ್ಥಿತಿ ಇದೆ. ಟಿಎಂಸಿ ತನ್ನ ಭ್ರಷ್ಟಾಚಾರದ ಮೂಲಕ ಸೋನಾರ್ ಬಾಂಗ್ಲಾವನ್ನು ನಾಶ ಮಾಡಿದೆ. ಬಡವರ ಹಣವನ್ನು ಲೂಟಿ ಮಾಡುವವರನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಚುನಾವಣಾ ಪ್ರಚಾರದ ಈ ಸಮರವು ಬಂಗಾಳದಲ್ಲಿ ಈಗ ಹಿಂದೂ-ಮುಸ್ಲಿಂ, 'ನುಸುಳುವಿಕೆ' ಮತ್ತು 'ಅಭಿವೃದ್ಧಿ' ಎಂಬ ಮೂರು ಆಯಾಮಗಳ ಸುತ್ತ ತಿರುಗುತ್ತಿದ್ದು, ಅಮಿತ್ ಷಾ ಅವರ ಈ ಭೇಟಿ ಬಿಜೆಪಿಗೆ ಹೆಚ್ಚಿನ ಬಲ ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ,(ಏಜೆನ್ಸೀಸ್).