ನಾಯಿಗೆ ಬ್ರೆಡ್​ ಮತ್ತು ಹಾಲನ್ನು ನೀಡುತ್ತಿರುವ ಡೆಲವರಿ ಹುಡುಗ 
ದೇಶ

ಬೀದಿ ನಾಯಿಗಳಿಗೆ ಆಹಾರ ನೀಡಿದ ಲಖನೌ ಮಹಿಳೆ; ಡೆಲಿವರಿ ಬಾಯ್ ಎಡವಟ್ಟಿಗೆ ನೆಟ್ಟಿಗರ ಆಕ್ರೋಶ! ವಿಡಿಯೋ ವೈರಲ್​ | Viral Video

ಲಖನೌ: ಪ್ರಾಣಿ ಪ್ರೇಮ ಅನ್ನೋದು ಒಂದು ಅದ್ಭುತ ಗುಣ. ಅದೆಷ್ಟೇ ಬ್ಯುಸಿ ಇದ್ದರೂ ತಮ್ಮನ್ನು ನಂಬಿದ ನಾಯಿಗಳಿಗೆ ಆಹಾರ ನೀಡುವ ಮನಸ್ಸುಗಳು ಇಂದಿಗೂ ಜೀವಂತವಾಗಿವೆ ಎನ್ನುವುದಕ್ಕೆ ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿರುವ ಘಟನೆಯೇ ಸಾಕ್ಷಿ. ಆದರೆ, ಈ ಒಳ್ಳೆ ಕೆಲಸದ ನಡುವೆ ನಡೆದ ಒಂದು ಸಣ್ಣ ಎಡವಟ್ಟು ಈಗ ಸಾಮಾಜಿಕ ಜಾಲತಾಣದಲ್ಲಿ (Viral Video) ದೊಡ್ಡ ಮಟ್ಟದ ಚರ್ಚೆಗೆ ದಾರಿಯಾಗಿದೆ.

ಮದುವೆಯ ನಡುವೆಯೂ ಮರೆಯದ ಮಾನವೀಯತೆ

ಲಖನೌದ ಮಹಿಳೆಯೊಬ್ಬರು ಪ್ರತಿದಿನ ತಮ್ಮ ಕಾಲೋನಿಯ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದರು. ಅಂದು ಅವರ ಮನೆಯಲ್ಲಿ ಮದುವೆ ಸಮಾರಂಭವಿತ್ತು. ಮದುವೆಯ ಗಡಿಬಿಡಿಯಲ್ಲಿ ಸಮಯಕ್ಕೆ ಸರಿಯಾಗಿ ಮನೆಗೆ ಮರಳಲು ಸಾಧ್ಯವಾಗದಿದ್ದಾಗ, ಹಸಿದಿರುವ ತನ್ನ ನಾಲ್ಕು ಕಾಲಿನ ಗೆಳೆಯರ ನೆನಪಾಗಿದೆ. ತಾನು ಇಲ್ಲದಿದ್ದರೂ ನಾಯಿಗಳು ಉಪವಾಸ ಇರಬಾರದು ಎಂದು ನಿರ್ಧರಿಸಿದ ಆಕೆ, ಆನ್‌ಲೈನ್ ಮೂಲಕ ಬ್ರೆಡ್ ಮತ್ತು ಹಾಲನ್ನು ಆರ್ಡರ್ ಮಾಡಿದರು.
ಡೆಲವರಿ ಹುಡುಗನಿಗೆ (Delivery Partner) ಕರೆ ಮಾಡಿ, ನಾನು ಮದುವೆಗೆ ಬಂದಿದ್ದೇನೆ, ನಾಯಿಗಳಿಗೆ ಆಹಾರ ನೀಡಲು ತಡವಾಗುತ್ತಿದೆ. ದಯವಿಟ್ಟು ಆರ್ಡರ್ ತಂದು ಆ ನಾಯಿಗಳಿಗೆ ನೀಡಿ ಎಂದು ವಿನಂತಿಸಿಕೊಂಡರು. ಡೆಲಿವರಿ ಹುಡುಗ ಕೂಡಾ ಮಹಿಳೆಯ ಈ ಕಾಳಜಿಗೆ ಬೆರಗಾಗಿ, ಖಂಡಿತಾ ಮಾಡುತ್ತೇನೆ ಮೇಡಂ, ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಒಪ್ಪಿಕೊಂಡಿದ್ದಾನೆ.

ಮೆಚ್ಚುಗೆಯ ನಡುವೆ ಸಿವಿಕ್ ಸೆನ್ಸ್ ಪ್ರಶ್ನೆ!

ಡೆಲಿವರಿ ಹುಡುಗ ಹಾಲಿನ ಪ್ಯಾಕೆಟ್ ಮತ್ತು ಬ್ರೆಡ್ ತಂದು ನಾಯಿಗಳ ಮುಂದೆ ಇಟ್ಟ ವಿಡಿಯೋ ವೈರಲ್ ಆಯಿತು. ಮಹಿಳೆಯ ಉದ್ದೇಶ ಒಳ್ಳೆಯದಾಗಿತ್ತು, ಡೆಲವರಿ ಹುಡುಗ ಸಹ ಒಳ್ಳೆಯ ಮನಸ್ಸುಳ್ಳವನೇ ಆಗಿದ್ದ ಆದರೆ, ಆತ ಆಹಾರ ನೀಡಿದ ರೀತಿ ಮಾತ್ರ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ವಿಡಿಯೋದಲ್ಲಿ ಡೆಲವರಿ ಹುಡುಗ ಬ್ರೆಡ್ ತುಂಡುಗಳನ್ನು ರಸ್ತೆಗೆ ಎಸೆಯುವುದು ಮತ್ತು ಹಾಲನ್ನು ನೇರವಾಗಿ ಡಾಂಬರು ರಸ್ತೆಯ ಮೇಲೆ ಸುರಿಯುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, ಬ್ರೆಡ್ ಮತ್ತು ಹಾಲಿನ ಪ್ಲಾಸ್ಟಿಕ್ ಕವರ್‌ಗಳನ್ನು ಅಲ್ಲೇ ರಸ್ತೆಯಲ್ಲಿ ಎಸೆಯಲಾಗದ್ದು, ಇದು ಆನ್‌ಲೈನ್ ವೀಕ್ಷಕರನ್ನು ಕೆರಳಿಸಿದೆ.

ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?

ಈ ವಿಡಿಯೋ ನೋಡಿದ ಜನರು ಕಮೆಂಟ್ ಬಾಕ್ಸ್‌ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಒಳ್ಳೆಯ ಕೆಲಸವೇನೋ ಸರಿ, ಆದರೆ ರಸ್ತೆಯ ಮೇಲೆ ಹಾಲು ಸುರಿಯುವುದು ಯಾವ ನ್ಯಾಯ? ಸ್ವಲ್ಪ ಕಾಮನ್ ಸೆನ್ಸ್ ಇರಲಿ ಎಂದು ಒಬ್ಬರು ಬರೆದಿದ್ದರೆ, ಬ್ರೆಡ್ ಕವರ್‌ಗಳನ್ನು ಅಲ್ಲೇ ಎಸೆದು ಹೋದರೆ ಆ ತ್ಯಾಜ್ಯದಿಂದ ಪರಿಸರಕ್ಕೆ ಹಾನಿಯಲ್ಲವೇ? ದಯವಿಟ್ಟು ಸ್ವಚ್ಛತೆಯ ಬಗ್ಗೆ ಗಮನವಿರಲಿ ಎಂದು ಮತ್ತೊಬ್ಬರು ಟೀಕಿಸಿದ್ದಾರೆ.ಇನ್ನು ಕೆಲವರು, ಕವರ್ ಮೇಲೆ ಬ್ರೆಡ್ ಇಟ್ಟು ಅದರ ಮೇಲೆ ಹಾಲು ಹಾಕಬಹುದಿತ್ತು. ನೆಲದ ಮೇಲಿನ ಹಾಲನ್ನು ನಾಯಿಗಳು ಹೇಗೆ ನೆಕ್ಕಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಪಾಠವೇನು?

ಈ ಘಟನೆ ನಮಗೆ ಎರಡು ಪಾಠಗಳನ್ನು ಕಲಿಸುತ್ತದೆ. ಒಂದು, ಎಂತಹ ಒತ್ತಡದ ನಡುವೆಯೂ ಮೂಕಪ್ರಾಣಿಗಳ ಬಗ್ಗೆ ದಯೆ ತೋರುವ ಈ ಮಹಿಳೆಯ ಗುಣ ನಿಜಕ್ಕೂ ಅನುಕರಣೀಯ. ಆದರೆ, ಎರಡನೆಯದಾಗಿ, ನಾವು ಮಾಡುವ ಸೇವೆ ಇನ್ನೊಬ್ಬರಿಗೆ ತೊಂದರೆಯಾಗಬಾರದು ಅಥವಾ ಪರಿಸರವನ್ನು ಕೆಡಿಸಬಾರದು ಎಂಬುದು ಅಷ್ಟೇ ಮುಖ್ಯ. ಸೇವೆ ಮತ್ತು ಸ್ವಚ್ಛತೆ ಜೊತೆಜೊತೆಗೆ ಸಾಗಿದಾಗ ಮಾತ್ರ ಆ ಕಾರ್ಯಕ್ಕೆ ಪೂರ್ಣ ಅರ್ಥ ಸಿಗುತ್ತದೆ ಎನ್ನುವುದು ನೆಟ್ಟಿಗರ ಅಭಿಮತವಾಗಿದೆ,(ಏಜನ್ಸೀಸ್​).