ಅಶ್ರಫಿ ಅಲಿಯಾಸ್ ಸಿಯಾ ( Septic Tank )
- ಮಧ್ಯಪ್ರದೇಶದ ಭೋಪಾಲ್ನಲ್ಲಿ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆಯಾದ ಯುವತಿಯ ಮೃತದೇಹ
- ಮೃತ ಯುವತಿ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಅಶ್ರಫಿ ಅಲಿಯಾಸ್ ಸಿಯಾ
- ಇನ್ಸ್ಟಾಗ್ರಾಂ ಪ್ರಿಯಕರನನ್ನು ಹುಡುಕಿಕೊಂಡು ಮಧ್ಯಪ್ರದೇಶಕ್ಕೆ ಹೋದ ಯುವತಿ ಬರ್ಬರ ಹತ್ಯೆ
Septic Tank : ಫೆಬ್ರವರಿ 14 ಪ್ರೇಮಿಗಳ ದಿನ. ಈ ವಿಶೇಷ ದಿನದಂದು ಪ್ರೇಮಿಗಳು ಶುಭಾಶಯ ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಸಂತೋಷದ ಸಮಯವನ್ನು ಕಳೆಯುವ ದಿನ. ಆದರೆ, ಇಲ್ಲೊಬ್ಬ ಪ್ರೇಮಿ ಘೋರ ಅಪರಾಧ ಎಸಗಿದ್ದಾನೆ. ತನ್ನ ಗೆಳತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಅಶ್ರಫಿ ಅಲಿಯಾಸ್ ಸಿಯಾ ಎಂಬ ಯುವತಿ ಒಂದು ವರ್ಷದ ಹಿಂದಷ್ಟೇ ಇನ್ಸ್ಟಾಗ್ರಾಂನಲ್ಲಿ ಭೋಪಾಲ್‌ನ ವಿವಾಹಿತ ವ್ಯಕ್ತಿ ಸಮೀರ್‌ನನ್ನು ಭೇಟಿಯಾದಳು. ಸಮೀರ್, ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ಬಲೆ ಬೀಸಿದ. ಪ್ರತಿದಿನ ಚಾಟಿಂಗ್ ಮಾಡುವ ಮೂಲಕ ಅವರಿಬ್ಬರು ದಿನದಿಂದ ದಿನಕ್ಕೆ ತುಂಬಾ ಹತ್ತಿರವಾದರು. ಇದರ ನಡುವೆ ಪ್ರೀತಿಯಿಂದ ಕುರುಡಳಾಗಿದ್ದ ಸಿಯಾ, ಮೂರು ತಿಂಗಳ ಹಿಂದಷ್ಟೇ ತನ್ನ ಮನೆಯನ್ನು ತೊರೆದು ಸಮೀರ್ ಜೊತೆ ವಾಸಿಸಲು ಭೋಪಾಲ್‌ಗೆ ಹೋದಳು.
ಸಮೀರ್ ವಾಸವಿರುವ ಸ್ಥಳಕ್ಕೆ ಹೋದಾಗ ಸಿಯಾ ಒಂದು ಕ್ಷಣ ಶಾಕ್ ಆದಳು. ಏಕೆಂದರೆ, ಸಮೀರ್ ಈಗಾಗಲೇ ಮದುವೆಯಾಗಿದ್ದಾನೆ. ಅಲ್ಲದೆ, ಆತನಿಗೆ ಇಬ್ಬರು ಮಕ್ಕಳು ಕೂಡ ಇದಾರೆ. ಈ ವಿಚಾರ ತಿಳಿದು ಸಿಯಾ ಚಿಂತಿತಳಾದಳು. ಬಳಿಕ ಕಮಲಾ ನಗರದಲ್ಲಿ ಸಮೀರ್ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಇದೇ ಸಂದರ್ಭದಲ್ಲಿ, ಪ್ರೇಮಿಗಳ ನಡುವೆ ಜಗಳಗಳು ಆರಂಭವಾದವು. ಇನ್ನೊಂದೆಡೆ ಸಿಯಾ ಮತ್ತು ಸಮೀರ್ ಪತ್ನಿಯ ನಡುವೆಯೂ ನಿರಂತರವಾಗಿ ಜಗಳಗಳು ನಡೆಯುತ್ತಿದ್ದವು.
ಆದರೆ, ಸಿಯಾ ಮಾತ್ರ ತನ್ನನ್ನು ಮದುವೆಯಾಗುವಂತೆ ಸಮೀರ್ಗೆ ಒತ್ತಡ ಹೇರಲು ಪ್ರಾರಂಭಿಸಿದಳು. 5 ಲಕ್ಷ ರೂ. ಕೊಡು ಇಲ್ಲ ಮದುವೆ ಆಗು ಎಂದು ಒತ್ತಡ ಹೇರಿದಳು. ಮದುವೆ ಆಗದಿದ್ದರೆ, ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದಳು. ಇದರಿಂದ ಸಮೀರ್ಗೆ ಏನು ಮಾಡಬೇಕೆಂದು ತೋಚಲಿಲ್ಲ. ಇದರ ನಡುವೆ, ಸಮೀರ್ ಪತ್ನಿ, ಜಬಲ್ಪುರದಲ್ಲಿರುವ ತನ್ನ ಹೆತ್ತವರ ಮನೆಗೆ ಹೋದಳು.
ಹೆಂಡತಿ ತವರು ಮನೆಗೆ ಹೋದ ಸಂದರ್ಭದಲ್ಲಿ ಕಳೆದ ಸೋಮವಾರ (ಫೆ.9) ಸಿಯಾ ಮತ್ತು ಸಮೀರ್ ನಡುವೆ ಮತ್ತೊಂದು ಸುತ್ತಿನ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಕೋಪಗೊಂಡ ಸಮೀರ್, ತನ್ನ ಕುಟುಂಬ ಸದಸ್ಯರೊಂದಿಗೆ ಸಿಯಾಳ ಕತ್ತು ಹಿಸುಕಿ ಕೊಂದನು. ಇದಾದ ನಂತರ, ಆತ ಶವವನ್ನು ಕಬ್ಬಿಣದ ಪಾತ್ರೆಯಲ್ಲಿ ಹಾಕಿ ನಿಶಾತ್‌ಪುರ ಪ್ರದೇಶದ ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮಂಗಳವಾರ (ಫೆ.10) ಮಧ್ಯರಾತ್ರಿ ಎಸೆದು ಬಂದನು.
ಗುರುವಾರ (ಫೆ.12) ಸ್ಥಳೀಯರು ಸೆಪ್ಟಿಕ್ ಟ್ಯಾಂಕ್‌ನಲ್ಲಿ ದುರ್ವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ತಿಳಿಸಿದರು. ಈ ವೇಳೆ ಸೆಪ್ಟಿಕ್ ಟ್ಯಾಂಕ್ ಪರಿಶೀಲಿಸಿದಾಗ ಅದರಲ್ಲಿ ಮಹಿಳೆಯ ಕೊಳೆತ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಚ್ಚೆಯ ಆಧಾರದ ಮೇಲೆ 24 ಗಂಟೆಗಳಲ್ಲಿ ಪ್ರಕರಣದ ನಿಗೂಢತೆಯನ್ನು ಭೇದಿಸಿದರು.
ಸದ್ಯ ಪ್ರಮುಖ ಆರೋಪಿ ಸಮೀರ್, ತಲೆಮರೆಸಿಕೊಂಡಿದ್ದು, ಆತನ ತಾಯಿ ಮತ್ತು ಅವನಿಗೆ ಸಹಾಯ ಮಾಡಿದ ಸಹೋದರಿಯನ್ನು ಬಂಧಿಸಲಾಗಿದೆ. ಸಮೀರ್ ಪತ್ನಿಯನ್ನೂ ಬಂಧಿಸಲಾಗಿದೆ. ಕುಟುಂಬದ ಉಳಿದ ಸದಸ್ಯರಿಗೂ ಕೊಲೆಯ ಬಗ್ಗೆ ತಿಳಿದಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸ್ ತನಿಖೆಯ ಸಮಯದಲ್ಲಿ ಆಘಾತಕಾರಿ ವಿಷಯಗಳು ಸಹ ಬಹಿರಂಗಗೊಂಡಿವೆ. ಸಿಯಾ ಈ ಹಿಂದೆ ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಮೂರು ಬಾರಿ ವಿವಾಹವಾಗಿದ್ದರು ಎಂದು ಕಂಡುಬಂದಿದೆ. ಪೊಲೀಸರು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ, (ಏಜೆನ್ಸೀಸ್).