Love Marriage 
ದೇಶ

Love Marriage ದ್ವೇಷ: ಹೆಂಡತಿಯ ಕಣ್ಣೆದುರಲ್ಲೇ ಪತಿಯನ್ನು ಗುಂಡಿಕ್ಕಿ ಕೊಂದ ಬಾಮೈದ!

ಸಹರಾನ್‌ಪುರ: ಅವಳು ಪೊಲೀಸ್ ಇಲಾಖೆಗೆ ಸೇರಿ ದೇಶದ ಸೇವೆ ಮಾಡಬೇಕು, ಮೈಮೇಲೆ ಖಾಕಿ ಸಮವಸ್ತ್ರ ಧರಿಸಬೇಕು ಎಂದು ಕನಸು ಕಂಡಿದ್ದಳು. ಗಂಡ ಕೂಡ ಹೆಂಡತಿಯ ಕನಸಿಗೆ ಸಾಥ್ ನೀಡಿ, ಅವಳನ್ನು ಪೊಲೀಸ್ ನೇಮಕಾತಿ ಪರೀಕ್ಷೆಗೆ ಕರೆದುಕೊಂಡು ಬಂದಿದ್ದನು. ಆದರೆ, ಪರೀಕ್ಷೆ ಮುಗಿಸಿ ಖುಷಿಯಿಂದ ಮನೆಗೆ ಮರಳುವಷ್ಟರಲ್ಲಿ ಹೆಂಡತಿಯ ಕಣ್ಣೆದುರೇ ಪತಿಯನ್ನು ಗುಂಡಿಕ್ಕಿ ಕೊಲ್ಲಲಾದ ಭೀಕರ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದಿದೆ. ಕೇವಲ 4 ತಿಂಗಳ ಹಿಂದೆ ನಡೆದ ಪ್ರೇಮ ವಿವಾಹದ(Love Marriage) ದ್ವೇಷವೇ ಈ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.

ನಡೆದಿದ್ದೇನು?

ಶಾಮ್ಲ ಜಿಲ್ಲೆಯ ಬಾಬ್ರಿ ಪ್ರದೇಶದ ನಿವಾಸಿ 24 ವರ್ಷದ ಶಿವ ಕುಮಾರ್ ಮತ್ತು ಆಕಾಂಕ್ಷಾ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಯುವತಿಯ ಮನೆಯವರ ವಿರೋಧವಿತ್ತು. ಕುಟುಂಬದವರ ಅಸಮ್ಮತಿಯ ಹೊರತಾಗಿಯೂ ಇವರಿಬ್ಬರು ಸುಮಾರು ನಾಲ್ಕು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು (Love Marriage). ಮದುವೆಯ ನಂತರ ದಂಪತಿಗಳು ಯುವತಿಯ ಕುಟುಂಬದಿಂದ ತೀವ್ರ ವಿರೋಧ ಮತ್ತು ಅಸಮಾಧಾನವನ್ನು ಎದುರಿಸುತ್ತಿದ್ದರು.

ಪರೀಕ್ಷಾ ಕೇಂದ್ರದ ಹೊರಗೇ ಹೊಂಚು ಹಾಕಿದ್ದ ಹಂತಕ!

ಆಕಾಂಕ್ಷಾ ಅವರಿಗೆ ಸಹರಾನ್‌ಪುರದ ಗೋಚಾರ್ ಇಂಟರ್ ಕಾಲೇಜಿನಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆ ಇತ್ತು. ಪತಿ ಶಿವಕುಮಾರ್ ತನ್ನ ಹೆಂಡತಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು, ಪರೀಕ್ಷೆ ಮುಗಿಯುವವರೆಗೂ ಕೇಂದ್ರದ ಹೊರಗೇ ಕಾಯುತ್ತಿದ್ದರು. ಪರೀಕ್ಷೆ ಮುಗಿದ ನಂತರ ಆಕಾಂಕ್ಷಾ ಹೊರಗೆ ಬಂದಿದ್ದಾರೆ. ಇಬ್ಬರೂ ಸೇರಿ ಮನೆಗೆ ಮರಳಲು ತಮ್ಮ ಸ್ಕಾರ್ಪಿಯೋ ಕಾರನ್ನು ಹತ್ತಿದ್ದಾರೆ. ಕಾರು ಹೆದ್ದಾರಿ ತಲುಪುತ್ತಿದ್ದಂತೆ ಹೊಂಚು ಹಾಕಿ ಬಂದಿದ್ದ ಆಕಾಂಕ್ಷಾಳ ಸ್ವಂತ ಸಹೋದರ (ಮೃತನಿಗೆ ಸೋದರ ಮಾವ) ಮಂಜೀತ್, ತಂಗಿಯ ಕಣ್ಣೆದುರೇ ಪತಿ ಶಿವಕುಮಾರ್ ತಲೆಗೆ ನೇರವಾಗಿ ಗುಂಡು ಹಾರಿಸಿದ್ದಾನೆ.

ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವು

ಹಗಲು ಹೊತ್ತಿನಲ್ಲೇ ನಡೆದ ಈ ಶೂಟೌಟ್‌ನಿಂದಾಗಿ ಹೆದ್ದಾರಿಯಲ್ಲಿದ್ದ ಜನರು ಭಯಭೀತರಾಗಿದ್ದಾರೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ಶಿವಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಅಳಲು ತೋಡಿಕೊಂಡ ಪತ್ನಿ: "ನಮ್ಮ ಮದುವೆ ನನ್ನ ಹೆತ್ತವರಿಗೆ ಇಷ್ಟವಿರಲಿಲ್ಲ. ಅವರು ಯಾವಾಗಲೂ ನಮ್ಮ ಸಂಬಂಧವನ್ನು ವಿರೋಧಿಸುತ್ತಿದ್ದರು. ಇದೇ ದ್ವೇಷದಿಂದ ನನ್ನ ಸಹೋದರ ಮಂಜೀತ್ ನನ್ನ ಪತಿಯನ್ನು ಕೊಲೆ ಮಾಡಿದ್ದಾನೆ" ಎಂದು ಆಕಾಂಕ್ಷಾ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ. ಮೃತನ ಸಹೋದರ ಶಿವಂ ಕುಮಾರ್ ಕೂಡ ಕೌಟುಂಬಿಕ ಕಲಹವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸ್ ತನಿಖೆ ತೀವ್ರ

ಘಟನೆ ನಡೆದ ತಕ್ಷಣ ಎಸ್‌ಪಿ ಸಿಟಿ ಪ್ಲೋಮ್ ಬಿಂದಾಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ (Forensic) ತಂಡ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ಮಂಜೀತ್ ಪತ್ತೆಗಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್​).