ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ಸೈನಿಕನ ಆಂಬ್ಯುಲೆನ್ಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದ ಸ್ಥಳ 
ದೇಶ

ಸೈನಿಕನ ಪಾರ್ಥಿವ ಶರೀರ ಹೊತ್ತ ಆಂಬ್ಯುಲೆನ್ಸ್‌ಗೆ ಲಾರಿ ಡಿಕ್ಕಿ: ಮಗ, ಸಹೋದರ ಸೇರಿ ನಾಲ್ವರು ಸಾವು! Soldier Body

ಸೈನಿಕನ ಪಾರ್ಥಿವ ಶರೀರ ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೈನಿಕನ ಮಗ, ಸಹೋದರ ಸೇರಿದಂತೆ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಪೂರ್ವಾಂಚಲ ಎಕ್ಸ್‌ಪ್ರೆಸ್‌‌ವೇಯ ಭೀಕರ ಅಪಘಾತದ ಸಂಪೂರ್ಣ ವರದಿ ಇಲ್ಲಿದೆ.

ಸುಲ್ತಾನ್​ಪುರ: ಸೇವೆಯಲ್ಲಿದ್ದಾಗಲೇ ನಿಧನದೊಂದಿದ ಸೈನಿಕನ ಪಾರ್ಥಿವ ಶರೀರವನ್ನು ಹೊತ್ತು ಸಾಗುತ್ತಿದ್ದ ಸೇನಾ ಆಂಬ್ಯುಲೆನ್ಸ್, ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ, ಸೈನಿಕನ ಮಗ, ಸಹೋದರ ಸೇರಿದಂತೆ ಒಟ್ಟು ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನ್​ಪುರದಲ್ಲಿ ವರದಿಯಾಗಿದೆ. ಈ ಘಟನೆಯು ಪುರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ಭಾನುವಾರ (ಅ.4) ಬೆಳಿಗ್ಗೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಅಸಲಿಗೆ ಆಗಿದ್ದೇನು?

ಚಂಡೀಗಢದಿಂದ ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮಕ್ಕೆ ಸುಬೇದಾರ್-ಮೇಜರ್ ಸತ್ಯವಾನ್ ಅವರ ಪಾರ್ಥಿವ ಶರೀರವನ್ನು ಆಂಬ್ಯುಲೆನ್ಸ್‌ನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಅಯೋಧ್ಯಾ-ಸುಲ್ತಾನ್‌ಪುರ ಗಡಿಯ ಸಮೀಪವಿರುವ ಹಲಿಯಾಪುರ ಪ್ರದೇಶದ ಎಕ್ಸ್‌ಪ್ರೆಸ್‌ವೇ ಬಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ವೇಗವಾಗಿ ಬರುತ್ತಿದ್ದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಂಬ್ಯುಲೆನ್ಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದವರಿಗೆ ತೀವ್ರ ಪೆಟ್ಟಾಗಿದೆ.

ಸ್ಥಳದಲ್ಲೇ ಇಬ್ಬರ ಸಾವು, ಆಸ್ಪತ್ರೆಯಲ್ಲಿ ಮತ್ತಿಬ್ಬರು!

ಈ ಭೀಕರ ಅಪಘಾತದ ತೀವ್ರತೆಗೆ ಸೈನಿಕನ ಮಗ ಗೌರವ್ ಸಿಂಗ್ (28) ಹಾಗೂ ಆಂಬ್ಯುಲೆನ್ಸ್ ಚಾಲಕ ಜಸ್ಪಾಲ್ (30) ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಸೈನಿಕನ ಸಹೋದರ ರಾಜನ್ ಚೌಧರಿ (35) ಹಾಗೂ ಸೋದರಳಿಯ ರಾಮ್ ಸಮುಜ್ ಸಿಂಗ್ (40) ಅವರನ್ನು ತಕ್ಷಣ ಅಯೋಧ್ಯಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅವರೂ ಕೂಡ ಮೃತಪಟ್ಟಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ.

ದಿಯೋರಿಯಾ ಜಿಲ್ಲೆಯ ರುದ್ರಪುರ ಪ್ರದೇಶದ ಗಲಿಯಾ ದುಧೈಲ್ಲಾ ಗ್ರಾಮದ ನಿವಾಸಿಯಾಗಿದ್ದ ಸುಬೇದಾರ್ ಮೇಜರ್ ಸತ್ಯವಾನ್ ಅವರ ಪಾರ್ಥಿವ ಶರೀರದೊಂದಿಗೆ ಈ ದುರಂತ ಸಂಭವಿಸಿದೆ. ಒಂದೇ ಕುಟುಂಬದ ಮೂವರು ಹಾಗೂ ಚಾಲಕ ಮೃತಪಟ್ಟಿರುವುದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಪೊಲೀಸ್ ಠಾಣೆಯಲ್ಲಿ ಸೈನಿಕನ ಮೃತದೇಹ!

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸುಲ್ತಾನ್‌ಪುರ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಇಂದ್ರಜೀತ್ ಸಿಂಗ್ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಮುಂದಿನ ಅಂತಿಮ ವಿಧಿವಿಧಾನ ಹಾಗೂ ಇತರೆ ವ್ಯವಸ್ಥೆ ಆಗುವವರೆಗೆ ಸುಬೇದಾರ್ ಮೇಜರ್ ಸತ್ಯವಾನ್ ಅವರ ಪಾರ್ಥಿವ ಶರೀರವನ್ನು ಸುರಕ್ಷತೆಯ ದೃಷ್ಟಿಯಿಂದ ಹಲಿಯಾಪುರ ಪೊಲೀಸ್ ಠಾಣೆಯ ಆವರಣದಲ್ಲಿ ಇರಿಸಲಾಗಿದೆ. ಮೃತರ ಕುಟುಂಬದವರಿಗೆ ಈ ದುರಾರ್ತೆಯ ಸುದ್ದಿಯನ್ನು ಮುಟ್ಟಿಸಲಾಗಿದ್ದು, ಕುಟುಂಬದವರ ಆಕ್ರೋಶ ಹಾಗೂ ದುಃಖ ಮುಗಿಲುಮುಟ್ಟಿದೆ, (ಏಜೆನ್ಸೀಸ್​).