ಮಹಿಳೆಯ ದೇಹ ಮನರಂಜನೆಯ ವಸ್ತುವಲ್ಲ! ಜಾನ್ವಿ ಕಪೂರ್​ ಡೀಪ್​ಫೇಕ್​ ವಿಡಿಯೋ ವಿವಾದ; ನಟಿ ಬೆನ್ನಿಗೆ ನಿಂತ ಖುಷ್ಬೂ! Kushboo Sundar

ಜಾನ್ವಿ ಕಪೂರ್ ಡೀಪ್‌ಫೇಕ್ ವಿಡಿಯೋ ವಿವಾದದ ಬೆನ್ನಲ್ಲೇ ನಟಿ ಖುಷ್ಬೂ ಸುಂದರ್ ಆಕ್ರೋಶ ವ್ಯಕ್ತಪಡಿಸಿದ್ದು, ಎಐ ದುರುಪಯೋಗ ಮತ್ತು ಮಹಿಳೆಯರ ಮೇಲಿನ ಡಿಜಿಟಲ್ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ.
Actress Kushboo Sundar and Janhvi Kapoor speaking about the AI ​​deepfake video controversy.
ನಟಿ ಖುಷ್ಬೂ ಸುಂದರ್ ಮತ್ತು ಜಾನ್ವಿ ಕಪೂರ್ ಎಐ ಡೀಪ್‌ಫೇಕ್ ವಿಡಿಯೋ ವಿವಾದದ ಕುರಿತು ಮಾತನಾಡುತ್ತಿರುವುದು
Published on: 

ಸಿನಿಮಾ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದರೆ ಎಐ (AI) ತಂತ್ರಜ್ಞಾನ ಬೆಳವಣಿಗೆ ಹೊಂದಿದ ನಂತರ ಸೆಲೆಬ್ರಿಟಿಗಳ ಖಾಸಗಿಯತೆಗೆ ಬೆಲೆಯೇ ಇಲ್ಲವೆಂಬಂತ್ತಾಗಿದೆ. ಯಾರದ್ದೋ ಮುಖವನ್ನು ಮತ್ತೊಬ್ಬರ ಮೈಮೇಲೆ ಅಂಟಿಸಿ, ಅಸಹ್ಯವಾದ ಮಾರ್ಪಡಿಸಿದ ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಡುವ ಪಿಡುಗು ದಿನದಿಂದ ದಿನಕ್ಕ ಹೆಚ್ಚುತ್ತಲೇ ಇದೆ. ಈಗ ಬಾಲಿವುಡ್‌ನನಟಿ ಜಾನ್ವಿ ಕಪೂರ್ ಅವರ 'ದೇವಾರ' ಸಿನಿಮಾದ 'ಚುಟ್ಟಮಲ್ಲೆ' ಹಾಡಿನ ಡೀಪ್‌ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ದೊಡ್ಡ ಬಿರುಗಾಡಿಯನ್ನೇ ಎಬ್ಬಿಸಿದೆ.

ಈ ಕೃತ್ಯದ ವಿರುದ್ಧ ಹಿರಿಯ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಸಿಡಿದೆದ್ದಿದ್ದಾರೆ. ಜಾನ್ವಿ ಕಪೂರ್ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿರುವ ಖುಷ್ಬೂ, ಎಐ ದುರುಪಯೋಗ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

"ಇದು ತಮಾಷೆಯಲ್ಲ, ಡಿಜಿಟಲ್ ದೌರ್ಜನ್ಯ"

ಎಕ್ಸ್ (ಟ್ವಿಟರ್) ನಲ್ಲಿ ಆಕ್ರೋಶ ಹೊರಹಾಕಿರುವ ಖುಷ್ಬೂ ಸುಂದರ್, "ಮಹಿಳೆಯೊಬ್ಬರ ಮೇಲೆ ಡಿಜಿಟಲ್ ದೌರ್ಜನ್ಯ ನಡೆದಾಗ, ಅವರನ್ನು ಕೀಳಾಗಿ ಕಂಡು ಅವಮಾನಿಸಿದಾಗ ನಾನು ಸುಮ್ಮನಿರಲು ಸಾಧ್ಯವಿಲ್ಲ. ಎಐ ಮೂಲಕ ಇಂತಹ ವಿಡಿಯೋಗಳನ್ನು ಮಾಡುವುದು ಯಾವುದೇ ಕಾರಣಕ್ಕೂ ತಮಾಷೆ ಅಥವಾ ಮನರಂಜನೆಯೂ ಅಲ್ಲ. ಇದು ಅತ್ಯಂತ ಕ್ರೂರ, ಅಸಹ್ಯ ಹಾಗೂ ನಿಂದನೀಯ ಕೃತ್ಯ" ಎಂದು ತೀವ್ರವಾಗಿ ಖಂಡಿಸಿದ್ದಾರೆ.

"ಇಂದು ಇದು ಜಾನ್ವಿ ಕಪೂರ್ ವಿಷಯವಾಗಿರಬಹುದು. ಆದರೆ, ನಾಳೆ ಅದು ನಾನಾಗಬಹುದು, ನೀವಾಗಬಹುದು ಅಥವಾ ನಮ್ಮ ಮನೆಯ ಹೆಣ್ಣುಮಕ್ಕಳಾಗಬಹುದು. ಬೇರೆಯವರ ವಿಚಾರ ತಾನೇ ಎಂದು ಮೌನವಾಗಿರಬಾರದು. ಹೆಣ್ಣಿನ ಘನತೆಯ ಮೇಲೆ ದಾಳಿ ನಡೆದಾಗ ನಾವೆಲ್ಲರೂ ಒಟ್ಟಾಗಿ ಎದ್ದು ನಿಲ್ಲಬೇಕು" ಎಂದಿದ್ದಾರೆ.

Also Read
"ಮತದಾನದ ಹಕ್ಕನ್ನು ಕಸಿದರೆ, ಪ್ರಜಾಪ್ರಭುತ್ವದ ಆತ್ಮವನ್ನೇ ಕಿತ್ತಂತೆ": SIR ವಿರುದ್ಧ ಗುಡುಗಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ! Ujjal Bhuyan
Actress Kushboo Sundar and Janhvi Kapoor speaking about the AI ​​deepfake video controversy.

ಮಹಿಳೆಯರ ದೇಹ ಮನರಂಜನೆಯ ವಸ್ತುವಲ್ಲ!

"ತಂತ್ರಜ್ಞಾನವನ್ನು ಬಳಸಿ ನಮ್ಮ ಖ್ಯಾತಿ, ಘನತೆ ಮತ್ತು ಸುರಕ್ಷತೆಗೆ ಕುತ್ತು ತರಬಹುದು ಎಂಬ ಭಯದಲ್ಲೇ ಯಾವ ಮಹಿಳೆಯೂ ಬದುಕಬಾರದು. ಹೆಣ್ಣಿನ ದೇಹ ಕೇವಲ 'ಕಂಟೆಂಟ್' ಅಲ್ಲ, ಅವಳ ಘನತೆ ಆಟದ ವಸ್ತುವಲ್ಲ. ಎಐ ಎಂದಿಗೂ ಮಹಿಳೆಯರ ವಿರುದ್ಧ ಬಳಸುವ ಅಸ್ತ್ರವಾಗಬಾರದು" ಎಂದು ಖುಷ್ಬೂ ಕಿಡಿಕಾರಿದ್ದಾರೆ.

ಅಲ್ಲದೆ, ಇಂತಹ ಕೃತ್ಯ ಎಸಗುವ ವಿಕೃತ ಮನಸ್ಸಿನವರನ್ನು ಸುಮ್ಮನೆ ಬಿಡಬಾರದು. ಇದನ್ನು ಸೃಷ್ಟಿಸುವವರು, ಶೇರ್ ಮಾಡುವವರು ಹಾಗೂ ಪ್ರಚಾರ ಮಾಡುವ ಎಲ್ಲರನ್ನೂ ಕಾನೂನಿನ ಅಡಿಯಲ್ಲಿ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಆಗ ಮಾತ್ರ ಇಂತಹವರಿಗೆ ಬುದ್ಧಿ ಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊನೆಯಲ್ಲಿ ಜಾನ್ವಿ ಕಪೂರ್ ಅವರಿಗೆ ಧೈರ್ಯ ತುಂಬಿರುವ ಖುಷ್ಬೂ, "ಧೈರ್ಯವಾಗಿರಿ ಮಗು, ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ" ಎಂದು ಬೆಂಬಲ ಸೂಚಿಸಿದ್ದಾರೆ.

ಜೂನಿಯರ್ ಎನ್‌ಟಿಆರ್, ಜಾನ್ವಿ ಕಿಡಿ

ಕೇವಲ ಖುಷ್ಬೂ ಮಾತ್ರವಲ್ಲದೆ, ದೇವರಾ ಸಿನಿಮಾದಲ್ಲಿ ನಟಿಸಿರು ಜೂನಿಯರ್​ ಎನ್​ಟಿಆರ್​ ಹಾಗೂ ಖುದ್ದು ಜಾನ್ವಿ ಕಪೂರ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಅತ್ಯಂತ ಆಕ್ಷೇಪಾರ್ಹ ಮತ್ತು ಅಸಹ್ಯಕರವಾಗಿದೆ ಎಂದು ಜೂನಿಯರ್ ಎನ್‌ಟಿಆರ್ ಕಿಡಿಕಾರಿದ್ದಾರೆ. ಮಹಿಳೆಯರನ್ನು ತಾಯಂದಿರು ಮತ್ತು ದೇವತೆಯರಂತೆ ಕಾಣುವ ನಮ್ಮ ಸಂಸ್ಕೃತಿಯಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚುಟ್ಟಾಮಲ್ಲೆ ಹಾಡಿನ ಎಐ ತುಣಕಿಗೆ ವಿರೋಧ ವ್ಯಕ್ತಪಡಿಸಿರುವ ನಟಿ ಜಾನ್ವಿ ಕಪೂರ್​, ಬೇರೊಬ್ಬ ಮಹಿಳೆಗೆ ಅಗೌರವ ತೋರುವ ಮೊದಲು ನಿಮ್ಮ ಅಮ್ಮನು ಕೂಡ ಒಬ್ಬ ಹೆಣ್ಣು ಎನ್ನುವುದನ್ನು ಮರೆಯದಿರಿ, ಮೊದಲು ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಿರಿ, ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೊದಲು ವಿವೇಕಯುತರಾಗಿರಿ ಎಂದು ನಟಿ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net