ಸಿಜೆಪಿ ವಕ್ತಾರ ಸೌರವ್ ದಾಸ್ 
ದೇಶ

ಸೌರವ್​​ ದಾಸ್​ ವಿರುದ್ಧ ಲುಕ್​​ಔಟ್​ ನೋಟಿಸ್​​ ಜಾರಿ: ದೆಹಲಿ ಹೈಕೋರ್ಟ್​ಗೆ ಕೇಂದ್ರದ ಮಾಹಿತಿ! Sourav Das

ನವದೆಹಲಿ: ಸಿಜೆಪಿ ವಕ್ತಾರ, ಸೌರವ್​​ ದಾಸ್​​ ಅವರನ್ನು ವಿದೇಶಕ್ಕೆ ಪ್ರಯಾಣಿಸದಂತೆ ತಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇಂದು ದೆಹಲಿ ಹೈಕೋರ್ಟ್​ಗೆ ಪ್ರಮುಖ ಹೇಳಿಕೆಯೊಂದನ್ನು ದಾಖಲಿಸಿದೆ.

ಸೌರವ್​​ ದಾಸ್​​ ಅವರ ಪಾಸ್​ಪೋರ್ಟ್​ನಲ್ಲಿ ಅವರ ಶೈಕ್ಷಿಣಿಕ ಹಿನ್ನಲೆ, ವಿಳಾಸ ಹಾಗೂ ಪೋಷಕರ ಹಿನ್ನಲೆಯಲ್ಲಿ ಕೆಲ ಗೊಂದಲಗಳಿದ್ದು, ಇದನ್ನು ಪ್ರಶ್ನಿಸುವ ಉದ್ದೇಶದಿಂದ ಮುಂಬೈ ಪೊಲೀಸರು ದಾಸ್​ ಅವರಿಗೆ ಈ ಮೊದಲೇ ಲುಕ್​ಔಟ್​ ನೋಟಿಸ್​ (LOC) ಅನ್ನು ಜಾರಿಗೊಳಿಸಿತ್ತು. ಆದರೆ, ಈ ನೋಟಿಸ್​​ಗೆ ದಾಸ್​​, ಪ್ರತಿಕ್ರಿಯೆ ನೀಡದ ಹಿನ್ನಲೆ ಅವರನ್ನು ವಿದೇಶಕ್ಕೆ ಪ್ರಯಾಣ ಬೆಳೆಸದಂತೆ ತಡೆಯಲಾಗಿದೆ ಎಂದು ಸರ್ಕಾರ ನ್ಯಾಯಪೀಠಕ್ಕೆ ತಿಳಿಸಿದೆ.

ಆಕ್ಸ್​​ಫರ್ಡ್​ಗೆ ಹೊರಟಿದ್ದ ದಾಸ್​!

ನವೆಂಬರ್​ 27 ರಂದು ಬ್ರಿಟನ್​​ನ ಆಕ್ಸ್​​ಫರ್ಡ್​ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದ, ಸಿಜೆಪಿ ಚಳುವಳಿ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಲು ಸೌರವ್​ ದಾಸ್ ನವೆಂಬರ್​​ 24 ರಂದು​ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದ್ದರು. ಆದರೆ, ಅವರ ಪಾಸ್​ಪೋರ್ಟ್​ನಲ್ಲಿ ದೋಷವಿದ್ದ ಕಾರಣ ಅವರನ್ನು ವಿದೇಶಕ್ಕೆ ಪ್ರಯಾಣಿಸದಂತೆ ತಡೆಯಲಾಯಿತು.

ಸರ್ಕಾರದ ಈ ಕ್ರಮವನ್ನು ವಿರೋಧಿಸಿ ದಾಸ್​, ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದು, ಸರ್ಕಾರ ತಾನು ಕೈಗೊಂಡ ಕ್ರಮಕ್ಕೆ ಸಮರ್ಥನೆ ನೀಡಿದ್ದು, ಸೌರವ್​ ದಾಸ್​ ಅವರ ಮುಂದಿನ ನಡೆ ಏನಿರಲಿದೆ ಎಂದು ಕಾದು ನೋಡಬೇಕಿದೆ.

ನನಗೆ ಯಾವುದೇ ನೋಟಿಸ್​ ನೀಡಿಲ್ಲ!

ಇನ್ನು ಕೇಂದ್ರ ಸರ್ಕಾರ ಮುಂದಿಟ್ಟ ವಾದಕ್ಕೆ ಕೌಂಟರ್​ ಮಾಡಿರುವ ದಾಸ್​, ನನಗೆ ಪೊಲೀಸರು ಇಲ್ಲಿವರೆಗೆ ಯಾವುದೇ ನೋಟಿಸ್​ ನೀಡಿಲ್ಲ. ಇದೆಲ್ಲಾ ನಮ್ಮ ಹೋರಾಟವನ್ನು ಹತ್ತಿಕ್ಕಲು ಮಾಡುತ್ತಿರುವ ತಂತ್ರ ಎಂದು ಸೌರವ್​ ದೂರಿದ್ದಾರೆ. ಎರಡು ಪಕ್ಷಗಳ ವಾದವನ್ನು ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಡಿಸೆಂಬರ್​​ 9 ಕ್ಕೆ ಮುಂದೂಡಿದೆ, (ಏಜೆನ್ಸೀಸ್​).