Siya Parents Statement | ಟ್ರೆಕ್ಕಿಂಗ್ ಪ್ಲಾನ್ ಮಾಡಿದ್ದು ಅವಳಲ್ಲ, ಕೇತನ್!
Siya Parents Statement: ಪುಣೆಯ ಪ್ರಸಿದ್ಧ ಉದ್ಯಮಿ ಕೇತನ್ ಅಗರ್ವಾಲ್ ಲೋಹಗಢ್ ಕೋಟೆಯಿಂದ ಬಿದ್ದು ಸಾವನ್ನಪ್ಪಿದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಸೇರಿ ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿರುವ ಬೆನ್ನಲ್ಲೇ, ಈಗ ಸಿಯಾ ಗೋಯಲ್ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಬಂದು ಪೊಲೀಸರ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ತನಿಖೆಗೆ ಹೊಸ ತಿರುವು ನೀಡುವಂತಹ ಹಲವು ಶಾಕಿಂಗ್ ವಿಷಯಗಳನ್ನು ಸಿಯಾ ತಾಯಿ ಪೂಜಾ ಗೋಯಲ್ ಹಂಚಿಕೊಂಡಿದ್ದಾರೆ.
ಟ್ರೆಕ್ಕಿಂಗ್ ಪ್ಲಾನ್ ಮಾಡಿದ್ದು ಕೇತನ್, ಸಿಯಾ ಅಲ್ಲ!
ಇಂಡಿಯಾ ಟುಡೇ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿಯಾ ತಾಯಿ ಪೂಜಾ ಗೋಯಲ್, ಲೋಹಗಢ್ ಕೋಟೆಗೆ ಟ್ರೆಕ್ಕಿಂಗ್ ಹೋಗಬೇಕು ಎಂದು ಸಿಯಾ ಹಠ ಹಿಡಿದಿರಲಿಲ್ಲ, ಬದಲಿಗೆ ಮೃತ ಕೇತನ್ ಅಗರ್ವಾಲ್ ಅವರೇ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಸಿಯಾಗೆ ಅಲ್ಲಿಗೆ ಹೋಗಲು ಇಷ್ಟವಿರಲಿಲ್ಲ, ಘಟನೆ ನಡೆಯುವ ಮರುದಿನವೇ ಈ ಜೋಡಿ ಮಹಾಬಲೇಶ್ವರ ಪ್ರವಾಸಕ್ಕೆ ಹೋಗಬೇಕಿತ್ತು. ಹೀಗಾಗಿ ಟ್ರೆಕ್ಕಿಂಗ್ ಹೋದರೆ ಸುಸ್ತಾಗುತ್ತದೆ ಎಂದು ಸಿಯಾ ನಿರಾಕರಿಸಿದ್ದಳಂತೆ. ಮಮ್ಮಿ, ಕೇತನ್ ನನ್ನನ್ನು ಟ್ರೆಕ್ಕಿಂಗ್ ಬರಲು ಕೇಳುತ್ತಿದ್ದಾನೆ, ನನಗೆ ಹೋಗಲು ಇಷ್ಟವಿಲ್ಲ. ನೀವೇ ಆತನಿಗೆ ಬೇಡ ಎಂದು ಹೇಳಿ ಎಂದು ಸಿಯಾ ತನ್ನ ತಾಯಿಗೆ ತಿಳಿಸಿದ್ದಳಂತೆ.
ಸಿಯಾ ಹೋಗಲು ನಿರಾಕರಿಸಿದಾಗ ಕೇತನ್ ತಾಯಿಯೇ, ಅವನು ಅಷ್ಟೊಂದು ಕರೆಯುತ್ತಿದ್ದಾನಲ್ಲಮ್ಮ ಹೋಗು, ನಿನಗಾಗಿ ಏನಾದರೂ ಬರ್ತ್‌ಡೇ ಸರ್ಪ್ರೈಸ್ ಪ್ಲಾನ್ ಮಾಡಿರಬಹುದು ಎಂದು ಸಿಯಾಳಿಗೆ ಹೇಳಿ ಕಳುಹಿಸಿದ್ದರು ಎಂದು ಪೂಜಾ ಗೋಯಲ್ ಹೇಳಿದ್ದಾರೆ. ನನ್ನ ಮಗಳು ಕೇತನ್‌ನನ್ನು ಬೇರೆ ಪ್ಲಾನ್ ಮಾಡೋಣ ಅಂದಾಗ, ಕೇತನ್ ಚಾಟಿಂಗ್‌ನಲ್ಲಿ ನನ್ನ ಮೇಲೆ ಸ್ವಲ್ಪ ನಂಬಿಕೆ ಇಡು, ಹೋಗೋಣ ಬಾ ಎಂದು ಮೆಸೇಜ್ ಮಾಡಿದ್ದಾನೆ. ಈ ಎಲ್ಲಾ ಚಾಟ್‌ಗಳು ಸಿಯಾ ಫೋನ್‌ನಲ್ಲಿವೆ, ಪೊಲೀಸರು ಅದನ್ನು ನೋಡಬಹುದು ಎಂದು ಪೂಜಾ ವಾದಿಸಿದ್ದಾರೆ.
ಗಲ್ಲಿಗೇರಿಸಿ ಎಂದ ಪೋಷಕರು
ಮಗಳ ಮೇಲಿನ ಆರೋಪ ಸಾಬೀತಾದರೆ ಆಕೆಗೆ ಯಾವುದೇ ಕರುಣೆ ತೋರಿಸಬೇಡಿ ಎಂದು ಸಿಯಾ ಪೋಷಕರು ಖಡಕ್ ಆಗಿ ಹೇಳಿದ್ದಾರೆ. ಒಂದು ವೇಳೆ ಆಕೆ ಅಪರಾಧಿಯಾಗಿದ್ದರೆ, ಆಕೆಗೆ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಆಕೆ ತಪ್ಪಿತಸ್ಥೆ ಎಂದು ಸಾಬೀತಾದರೆ ಆಕೆಯನ್ನು ನೇಣುಗಂಬಕ್ಕೆ ಏರಿಸಿ, ಒಬ್ಬ ಹೆತ್ತ ತಾಯಿಯಾಗಿ ನಾನೇ ಈ ಮಾತನ್ನು ಹೇಳುತ್ತಿದ್ದೇನೆ ಎಂದು ತಾಯಿ ಪೂಜಾ ಗೋಯಲ್ ಭಾವುಕರಾಗಿ ನುಡಿದಿದ್ದಾರೆ. ಇತ್ತ ಸಿಯಾ ತಂದೆ ಪ್ರವೀಣ್ ಗೋಯಲ್ ಕೂಡ ಇದೇ ರೀತಿಯ ಕಠಿಣ ನಿಲುವು ವ್ಯಕ್ತಪಡಿಸಿದ್ದು, ಈ ಭೀಕರ ಪ್ರಕರಣದಲ್ಲಿ ಯಾರು ತಪ್ಪಿತಸ್ಥರೋ, ಅವರು ಕಠಿಣ ಶಿಕ್ಷೆ ಅನುಭವಿಸಲೇಬೇಕು. ಪೊಲೀಸರ ತನಿಖೆಯಲ್ಲಿ ಒಂದು ವೇಳೆ ನನ್ನ ಮಗಳೇ ಅಪರಾಧಿ ಎಂದು ಸಾಬೀತಾದರೂ ಸರಿ, ಆಕೆಗೂ ಗಲ್ಲು ಶಿಕ್ಷೆಯೇ ಆಗಬೇಕು ಎಂದು ಹೇಳಿದ್ದಾರೆ.
ಪ್ರಿಯಕರನ ವಿಷಯ ನಮಗೆ ಗೊತ್ತೇ ಇರಲಿಲ್ಲ!
ಸಿಯಾ ಮತ್ತು ಚೇತನ್ ಚೌಧರಿ ನಡುವಿನ 6 ತಿಂಗಳ ಅಫೇರ್ ಹಾಗೂ 2,004 ಫೋನ್ ಕಾಲ್‌ಗಳ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸಿಯಾ ಪೋಷಕರು ಸ್ಪಷ್ಟಪಡಿಸಿದ್ದಾರೆ. "ಮದುವೆ ನಿಶ್ಚಯಿಸುವ ಮುನ್ನ ನಾವು ಸಿಯಾಳನ್ನು ಕನಿಷ್ಠ 10 ಬಾರಿ ಕೇಳಿದ್ದೆವು. ಕೇತನ್ ನಿನಗೆ ಇಷ್ಟನಾ? ಮದುವೆಗೆ ಒಪ್ಪಿಗೆ ಇದೆಯಾ? ಎಂದು ಕೇಳಿದಾಗಲೆಲ್ಲಾ ಆಕೆ ಹೌದು, ನನಗೆ ಕೇತನ್ ಇಷ್ಟ ಎಂದೇ ಹೇಳಿದ್ದಳು. ಆಕೆ ಈ ಮದುವೆಯಿಂದ ತುಂಬಾ ಖುಷಿಯಾಗಿದ್ದಳು ಎಂದು ತಾಯಿ ಕಣ್ಣೀರು ಹಾಕಿದ್ದಾರೆ. ಆರೋಪಿ ಸಿಯಾ ತಂದೆ ಪ್ರವೀಣ್ ಗೋಯಲ್ ಕೂಡ ಮಾತನಾಡಿ, ಕೇತನ್ ಫೋನ್ ಬ್ಯುಸಿ ಬರುತ್ತಿದ್ದ ಬಗ್ಗೆ ತಮಗೆ ಯಾವುದೇ ದೂರುಗಳು ಬಂದಿರಲಿಲ್ಲ ಎಂದಿದ್ದಾರೆ.
ಆದರೆ, ಸಿಯಾ ಕುಟುಂಬದ ಈ ಹೇಳಿಕೆಗಳು ಪೊಲೀಸರ ಪ್ರಾಥಮಿಕ ತನಿಖೆಗೆ ತದ್ವಿರುದ್ಧವಾಗಿವೆ. ಪೊಲೀಸರ ಪ್ರಕಾರ, ಸಿಯಾ ಗೋಯಲ್ ಮತ್ತು ಪ್ರಿಯಕರ ಚೇತನ್ ಚೌಧರಿ ಮೊದಲೇ ಸ್ಕೆಚ್ ಹಾಕಿ ಕೇತನ್‌ನನ್ನು ಕೋಟೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು 350 ಮೀಟರ್ ಆಳದ ಕಣಿವಿಗೆ ತಳ್ಳಿದ್ದರು. ಇದಕ್ಕೂ ಮುನ್ನ ಜೂನ್ 14 ರಂದೂ ಆಕೆಯೇ ಕೇತನ್‌ನನ್ನು ತಳ್ಳಲು ಯತ್ನಿಸಿ ವಿಫಲಳಾಗಿದ್ದಳು ಎಂಬುದು ಖಾಕಿ ಪಡೆ ಪತ್ತೆ ಹಚ್ಚಿರುವ ಸತ್ಯ. ಸದ್ಯ ಸಿಯಾ ಪೋಷಕರ ಈ ಹೊಸ ಚಾಟಿಂಗ್ ವಾದದ ಬಳಿಕ ಪುಣೆ ಪೊಲೀಸರು ಮೊಬೈಲ್ ಡೇಟಾವನ್ನು ಮತ್ತಷ್ಟು ಆಳವಾಗಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ(ಏಜೆನ್ಸೀಸ್).