ಕಾಲೇಜು ಮೆಸ್‌ನಲ್ಲಿ ವಿದ್ಯಾರ್ಥಿಯ ಊಟದಲ್ಲಿ ಹಲ್ಲಿ ಪತ್ತೆ
- ಕಾಲೇಜು ಮೆಸ್‌ನಲ್ಲಿ ವಿದ್ಯಾರ್ಥಿಯ ಊಟದಲ್ಲಿ ಹಲ್ಲಿ ಪತ್ತೆ
- ಇದು ಹಲ್ಲಿ ಅಲ್ಲ ಕ್ಯಾಪ್ಸಿಕಂ ಎಂದ ಮ್ಯಾನೇಜರ್
- ಕ್ಯಾಪ್ಸಿಕಂ ಎಂದು ಸಾಭೀತು ಪಡಿಸಲು ಅದನ್ನು ತಿಂದ ಅಡುಗೆಯವ
ಭೋಪಾಲ್: ಭಾರತದಲ್ಲಿ ಆಹಾರ ಸಂಬಂಧಿ ಕಲಬೆರಿಕೆ ಹಾಗೂ ಶುಚಿತ್ವದ ಕೊರತೆ ಬಗ್ಗೆ ನಾವು ದಿನನಿತ್ಯ ಸುದ್ದಿಗಳನ್ನು ಕೇಳುತ್ತಿರುತ್ತೆವೆ. ಆದರೆ ಈಗ ಭೋಪಾಲ್‌ದ ಕಾಲೇಜೊಂದ (Bhopal College Lizard in Food) ರಲ್ಲಿ ನೀಡುವ ಊಟದಲ್ಲಿ ಹಲ್ಲಿ ಪತ್ತೆಯಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.
ತರಕಾರಿ ಪಲ್ಯದಲ್ಲಿ ಹಲ್ಲಿಯ ಕಾಲುಗಳು!
ಮಾರ್ಚ್ 22ರಂದು ಎಂದಿನಂತೆ ವಿದ್ಯಾರ್ಥಿಗಳು ದಾಲ್, ರೊಟ್ಟಿ ಮತ್ತು ಮಿಕ್ಸ್ ವೆಜಿಟೇಬಲ್ ಪಲ್ಯ ಸವಿಯುತ್ತಿದ್ದರು. ಈ ವೇಳೆ ಒಬ್ಬ ವಿದ್ಯಾರ್ಥಿಯ ತಟ್ಟೆಯಲ್ಲಿ ವಿಚಿತ್ರವಾದ ವಸ್ತುವೊಂದು ಕಂಡುಬಂದಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಅದು ಸಾಮಾನ್ಯ ತರಕಾರಿಯಲ್ಲ, ಬದಲಿಗೆ ಸತ್ತ ಹಲ್ಲಿಯ ತುಂಡು ಎಂಬುದು ದೃಢಪಟ್ಟಿದೆ. ಹಲ್ಲಿಯ ಕಾಲುಗಳು ಮತ್ತು ಕಣ್ಣುಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಆತಂಕಗೊಂಡ ವಿದ್ಯಾರ್ಥಿಗಳು ಕೂಡಲೇ ಮೆಸ್ ಸಿಬ್ಬಂದಿಯನ್ನು ಕರೆದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದು ಹಲ್ಲಿಯಲ್ಲ ಕ್ಯಾಪ್ಸಿಕಂ ಎಂದ ಸಿಬ್ಬಂದಿ
ಆದರೆ, ಅಲ್ಲಿ ನಡೆದದ್ದೇ ಬೇರೆ. ವಿದ್ಯಾರ್ಥಿಗಳ ದೂರನ್ನು ಗಂಭೀರವಾಗಿ ಪರಿಗಣಿಸುವ ಬದಲು, ಮೆಸ್ ಸಿಬ್ಬಂದಿ ನಕ್ಕು ಸುಮ್ಮನಾಗಿದ್ದಾರೆ. ಇದು ಹಲ್ಲಿಯಲ್ಲಪ್ಪಾ, ನೀನು ಅಂದುಕೊಂಡಂತೆ ಏನೂ ಇಲ್ಲ. ಇದು ಕೇವಲ ಕತ್ತರಿಸಿದ ಕ್ಯಾಪ್ಸಿಕಂ (ದೊಣ್ಣೆ ಮೆಣಸಿನಕಾಯಿ) ತುಂಡು ಅಷ್ಟೇ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಆಕ್ರೋಶ ಇನ್ನಷ್ಟು ಹೆಚ್ಚಾಗಿದೆ.
ನೋಡ್ತಾ ನೋಡ್ತಾ ಹಲ್ಲಿಯನ್ನೇ ತಿಂದ ಅಡುಗೆಯವ!
ತಮ್ಮ ತಪ್ಪನ್ನು ಮುಚ್ಚಿ ಹಾಕಲು ಅಲ್ಲಿನ ಅಡುಗೆಯವ ಮಾಡಿದ್ದು ಸಾಹಸವೋ ಅಥವಾ ಹುಚ್ಚುತನವೋ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ವಿದ್ಯಾರ್ಥಿಗಳು ಇದು ಹಲ್ಲಿಯೇ ಎಂದು ಪಟ್ಟು ಹಿಡಿದಾಗ, ಅಡುಗೆಯವ ಆ ವಸ್ತುವನ್ನು ಕೈಗೆತ್ತಿಕೊಂಡು ನೇರವಾಗಿ ತನ್ನ ಬಾಯಿಗೆ ಹಾಕಿಕೊಂಡಿದ್ದಾನೆ. ವಿದ್ಯಾರ್ಥಿಗಳ ಸಮ್ಮುಖದಲ್ಲೇ ಅದನ್ನು ಅಗಿದು ನುಂಗಿದ ಆತ, ನೋಡಿ, ಇದು ಕ್ಯಾಪ್ಸಿಕಂ ಅಂತ ಈಗಲಾದರೂ ನಂಬುತ್ತೀರಾ? ಎಂದು ಪ್ರಶ್ನಿಸಿದ್ದಾನೆ. ಈ ವಿಲಕ್ಷಣ ದೃಶ್ಯವನ್ನು ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಕಿಚ್ಚು
ಈ ಘಟನೆಯ ನಂತರ ಹಾಸ್ಟೆಲ್ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಇಲ್ಲಿ ಎಂಜಿನಿಯರಿಂಗ್ ಓದಲು ಬಂದಿದ್ದೇವೆಯೇ ಹೊರತು ಹಲ್ಲಿ ತಿನ್ನಲು ಅಲ್ಲ. ನಮ್ಮ ಆರೋಗ್ಯದ ಜೊತೆ ಆಟವಾಡಲಾಗುತ್ತಿದೆ. ಯಾರಾದರೂ ವಿಷವನ್ನು ಔಷಧ ಎಂದು ಕರೆದು ಕುಡಿದರೆ ಅದು ಔಷಧವಾಗುತ್ತದೆಯೇ? ಎಂದು ಹತಾಶರಾದ ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ್ದಾನೆ. ಮೆಸ್ ಗುತ್ತಿಗೆದಾರನನ್ನು ತಕ್ಷಣ ಬದಲಿಸಬೇಕು ಮತ್ತು ಅಲ್ಲಿನ ಶುಚಿತ್ವದ ಬಗ್ಗೆ ತನಿಖೆಯಾಗಬೇಕು ಎಂದು ಉಪಕುಲಪತಿಗಳಿಗೆ ಮನವಿ ಸಲ್ಲಿಸಲಾಗಿದೆ.
ಮ್ಯಾನೇಜರ್ ಸಮರ್ಥನೆ
ಇಷ್ಟೆಲ್ಲಾ ಆದರೂ ಮೆಸ್ ಮ್ಯಾನೇಜರ್ ಸುನಿಲ್ ಅಗರ್ವಾಲ್ ಮಾತ್ರ ತಮ್ಮ ಸಿಬ್ಬಂದಿಯನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ನಮ್ಮ ಉದ್ಯೋಗಿ ಅದನ್ನು ತಿಂದಿದ್ದಾನೆ, ಅವನಿಗೆ ಏನೂ ಆಗಿಲ್ಲ. ಅದು ಕೇವಲ ತರಕಾರಿ ತುಂಡು ಎಂದು ಹೇಳುತ್ತಿದ್ದಾರೆ. ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ಹಲ್ಲಿಯ ಅಂಗಾಂಗಗಳು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,(ಏಜನ್ಸೀಸ್).