NCP ಶಾಸಕಿ ಸನಾ ಮಲಿಕ್ ಅವರ ಪಾಕಿಸ್ತಾನ ಉಲ್ಲೇಖ ವಿವಾದಕ್ಕೆ ಕಾರಣ
- ಮಹಾರಾಷ್ಟ್ರ ವಿಧಾನಸಭೆಯಲ್ಲಿ UCC ಮತ್ತು ಬಹುಪತ್ನಿತ್ವದ ಕುರಿತು ಭಾರಿ ಚರ್ಚೆ
- NCP ಶಾಸಕಿ ಸನಾ ಮಲಿಕ್ ಅವರ ಪಾಕಿಸ್ತಾನ ಉಲ್ಲೇಖ ವಿವಾದ
- ಶಾಸಕಿ ಸನಾ ಮಲಿಕ್ ಹೇಳಿಕೆಗೆ ಬಿಜೆಪಿ ಸಚಿವ ನಿತೇಶ್ ರಾಣೆ ನೀಡಿದ ಖಡಕ್ ತಿರುಗೇಟು
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಈಗ ಏಕರೂಪ ನಾಗರಿಕ ಸಂಹಿತೆ (UCC), ಬಹುಪತ್ನಿತ್ವ ಮತ್ತು ಮುಸ್ಲಿಂ ಮಹಿಳೆಯರ ಹಕ್ಕುಗಳ ಸದ್ದು ಜೋರಾಗಿ ಕೇಳಿ ಬರುತ್ತಿದೆ. ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಎನ್‌ಸಿಪಿ ಶಾಸಕಿ ಸನಾ ಮಲಿಕ್ ಬಹುಪತ್ನಿತ್ವದ (Sana Malik Polygamy Controversy) ಕುರಿತು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಜಗಳ ಶುರುವಾಗಿದ್ದು ಎಲ್ಲಿ?
ನಾಸಿಕ್‌ನ ಬಿಜೆಪಿ ಶಾಸಕಿ ದೇವಯಾನಿ ಫರಾಂಡೆ, ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ ಮತ್ತು ಬಹುಪತ್ನಿತ್ವದಿಂದ ಮುಕ್ತಿ ಸಿಗಬೇಕು, ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಬೇಕು ಎಂದು ವಿಧಾನಸಭೆಯಲ್ಲಿ ಧ್ವನಿ ಎತ್ತಿದರು.
ನಾಸಿಕ್‌ನಲ್ಲಿ ಇತ್ತೀಚೆಗೆ ದಾಖಲಾದ ಕೆಲವು ಪೊಲೀಸ್ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಗಂಡಂದಿರು ತ್ರಿವಳಿ ತಲಾಖ್ ನೀಡಿದ ನಂತರ ಪೊಲೀಸರ ಬಳಿ ಹೋದ ಮಹಿಳೆಯರಿಗೆ ಬೆದರಿಕೆ ಹಾಕಲಾಗುತ್ತಿದೆ. ಇದು ಕೇವಲ ಧರ್ಮ ಅಥವಾ ಭಾವನೆಗಳ ವಿಷಯವಲ್ಲ, ಸಂವಿಧಾನ ನೀಡಿರುವ ಸಮಾನತೆಯ ಹಕ್ಕಿನ ಉಲ್ಲಂಘನೆ. ಗೋವಾ, ಅಸ್ಸಾಂ ಮತ್ತು ಉತ್ತರಾಖಂಡ ಮಾದರಿಯಲ್ಲೇ ಮಹಾರಾಷ್ಟ್ರದಲ್ಲೂ ಯುಸಿಸಿ ಜಾರಿಗೆ ತರಲು ಸಮಿತಿಯೊಂದನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ಮುಸ್ಲಿಮರನ್ನು ಗುರಿ ಮಾಡಲಾಗ್ತಿದೆ: ಎಸ್‌ಪಿ ಆಕ್ರೋಶ!
ಬಿಜೆಪಿ ಶಾಸಕಿಯ ಈ ವಾದಕ್ಕೆ ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ಅಬು ಅಜ್ಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡದೆ, ಕೇವಲ ಧ್ರುವೀಕರಣ ಮಾಡಲು ಮತ್ತು ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಲು ಈ ಚರ್ಚೆಯನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಅಪರಾಧ ಮತ್ತು ನಾಗರಿಕ ಕಾನೂನುಗಳು ಎಲ್ಲರಿಗೂ ಒಂದೇ ಆಗಿವೆ. ಆದರೆ ಮದುವೆಯಂತಹ ವೈಯಕ್ತಿಕ ಧಾರ್ಮಿಕ ಆಚರಣೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದ ಅಬು ಅಜ್ಮಿ, 'ಲವ್ ಜಿಹಾದ್' ನಂತಹ ಪದಗಳು ಕೇವಲ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದರು.
ಚರ್ಚೆಗೆ 'ಪಾಕಿಸ್ತಾನ' ಎಂಟ್ರಿ: ಸನಾ ಮಲಿಕ್ ಹೇಳಿಕೆಗೆ ರಾಣೆ ಕೌಂಟರ್!
ಈ ಬೆಂಕಿಗೆ ತುಪ್ಪ ಸುರಿದಂತೆ ಎನ್‌ಸಿಪಿ ಶಾಸಕಿ ಸನಾ ಮಲಿಕ್, ಬಹುಪತ್ನಿತ್ವದ ಕುರಿತು ಮಾತನಾಡುತ್ತಾ ಪಾಕಿಸ್ತಾನದ ಉದಾಹರಣೆ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಪಾಕಿಸ್ತಾನವು ಕುರಾನ್‌ನಲ್ಲಿರುವ ಕಾನೂನುಗಳನ್ನು ಜಾರಿಗೆ ತಂದಿದೆ. ಭಾರತದಲ್ಲೂ ಕುರಾನ್ ಆಧಾರಿತ ಕಾನೂನು ತಂದರೆ ಯಾರಿಗೂ ಸಮಸ್ಯೆಯಾಗಲ್ಲ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ಇದಕ್ಕೆ ತಕ್ಷಣವೇ ತಿರುಗೇಟು ನೀಡಿದ ಬಿಜೆಪಿ ಸಚಿವ ನಿತೇಶ್ ರಾಣೆ, ನಮ್ಮ ಸಹೋದರಿ ಸನಾ ಅವರು ಹಿಂದೂ ಬಹುಸಂಖ್ಯಾತ ಭಾರತದ ವಿಧಾನಸಭೆಯಲ್ಲಿದ್ದಾರೆ, ಪಾಕಿಸ್ತಾನದ ಸಂಸತ್ತಿನಲ್ಲಿ ಅಲ್ಲ ಎಂಬುದನ್ನು ಮರೆತಿರಬೇಕು ಎಂದು ತೀಕ್ಷ್ಣವಾಗಿ ಕುಟುಕಿದರು.
ವಿವಾದಕ್ಕೆ ಸನಾ ಮಲಿಕ್ ಸ್ಪಷ್ಟೀಕರಣ
ತಮ್ಮ ಹೇಳಿಕೆ ವಿವಾದ ರೂಪ ಪಡೆಯುತ್ತಿದ್ದಂತೆ ಸನಾ ಮಲಿಕ್ ಯು-ಟರ್ನ್ ಹೊಡೆದಿದ್ದಾರೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನ ಎಂದಿಗೂ ಮಾದರಿಯಲ್ಲ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ದೇವಯಾನಿ ಫರಾಂಡೆ ಮೊದಲು ಪಾಕಿಸ್ತಾನದ ಪ್ರಸ್ತಾಪ ಮಾಡಿದ್ದಕ್ಕೆ ತಾವು ಕೌಂಟರ್ ಕೊಟ್ಟಿದ್ದಾಗಿ ಹೇಳಿದ ಅವರು, ಇಸ್ಲಾಂನಲ್ಲಿ ಕುರಾನ್ ಮಾತ್ರ ನಮಗೆ ಮಾರ್ಗದರ್ಶಿ. ಭಾರತದ ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದು, ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಬಹುಪತ್ನಿತ್ವಕ್ಕೆ ಅವಕಾಶವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ, (ಏಜನ್ಸೀಸ್).