Leander Paes | ಬಿಜೆಪಿ ಸೇರಿದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್​ 
ದೇಶ

ಬಿಜೆಪಿ ಸೇರಿದ ಟೆನಿಸ್ ದಿಗ್ಗಜ ಲಿಯಾಂಡರ್; ಪಶ್ಚಿಮ ಬಂಗಾಳದಲ್ಲಿ ವರ್ಕ್​​ ಆಗುತ್ತಾ ಪೇಸ್ ಮ್ಯಾಜಿಕ್..? | Leander Paes

ದೆಹಲಿ: ಭಾರತದ ಟೆನಿಸ್ ದಂತಕಥೆ, 18 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತ ಲಿಯಾಂಡರ್ ಪೇಸ್ ಮಂಗಳವಾರ (ಮಾರ್ಚ್ 31) ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಪೇಸ್​ ಅವರ ಈ ನಿರ್ಧಾರ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ಸುಕಾಂತ ಮಜುಂದಾರ್ ಸಮ್ಮುಖದಲ್ಲಿ ಪೇಸ್ ಕೇಸರಿ ಧ್ವಜ ಹಿಡಿದರು. ಮೂಲಗಳ ಪ್ರಕಾರ, ಲಿಯಾಂಡರ್ ಪೇಸ್ ಅವರು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.
ಕೋಲ್ಕತ್ತಾದಂತಹ ನಗರ ಪ್ರದೇಶಗಳಲ್ಲಿ ಲಿಯಾಂಡರ್ ಪೇಸ್ ಅವರಿಗೆ ಅಪಾರ ಜನಪ್ರಿಯತೆ ಇದ್ದು, ಅವರ ಕ್ಲೀನ್​ ಇಮೇಜ್​ ಮತ್ತು ಕ್ರೀಡಾ ಸಾಧನೆಗಳು ಯುವಜನತೆ ಮತ್ತು ಕ್ರೀಡಾ ಪ್ರೇಮಿಗಳನ್ನು ಸೆಳೆಯಲು ಬಿಜೆಪಿಗೆ ದೊಡ್ಡ ಶಕ್ತಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಾಂಪ್ರದಾಯಿಕ ರಾಜಕೀಯದ ಆಚೆಗೆ ಹೊಸ ಹಾದಿ ಹುಡುಕುತ್ತಿರುವ ಮತದಾರರಿಗೆ ಪೇಸ್ ಪ್ರವೇಶವು ಒಂದು ಆಕರ್ಷಣೆಯಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಪೇಸ್​ ಫ್ಲ್ಯಾಶ್ ​​ಬ್ಯಾಕ್

ಲಿಯಾಂಡರ್ ಪೇಸ್ ಸಾಧನೆಯ ಹಾದಿ ಅತ್ಯಂತ ರೋಚಕವಾದದ್ದು, ಅವರು ಏಳು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ವಿಶ್ವದ ಏಕೈಕ ಟೆನಿಸ್ ಆಟಗಾರ ಎಂಬ ಐತಿಹಾಸಿಕ ದಾಖಲೆ ಹೊಂದಿದ್ದಾರೆ. 1996 ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ, ಟೆನಿಸ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತಮ್ಮ ವೃತ್ತಿಜೀವನದಲ್ಲಿ ಪುರುಷರ ಡಬಲ್ಸ್‌ನಲ್ಲಿ ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್‌ಗಳನ್ನು ತಲಾ ಮೂರು ಬಾರಿ ಹಾಗೂ ಆಸ್ಟ್ರೇಲಿಯನ್ ಮತ್ತು ವಿಂಬಲ್ಡನ್ ಪ್ರಶಸ್ತಿಗಳನ್ನು ತಲಾ ಒಂದು ಬಾರಿ ಗೆದ್ದಿದ್ದಾರೆ.
10 ಮಿಶ್ರ ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅವರು ಟೆನಿಸ್ ಇತಿಹಾಸದ ಶ್ರೇಷ್ಠ ಡಬಲ್ಸ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಮಹೇಶ್ ಭೂಪತಿ ಅವರೊಂದಿಗಿನ ಇವರ ಪಾಲುದಾರಿಕೆ ಭಾರತೀಯ ಟೆನಿಸ್‌ನ ಸುವರ್ಣ ಯುಗವೆಂದೇ ಪರಿಗಣಿಸಲ್ಪಟ್ಟಿದೆ. ಅವರ ಸಾಧನೆಯನ್ನು ಗೌರವಿಸಿ 2024 ರಲ್ಲಿ ಅವರನ್ನು ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು. ಪ್ರಸ್ತುತ ಅವರು ಬಂಗಾಳ ಟೆನಿಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ(ಏಜೆನ್ಸೀಸ್​​).