TET ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಆಕ್ರೋಶ 
ದೇಶ

ಪ್ರತಿ 3 ತಿಂಗಳಿಗೊಮ್ಮೆ ಸೋರಿಕೆ...NEET ಬೆನ್ನಲ್ಲೆ TET ಪ್ರಶ್ನೆ ಪತ್ರಿಕೆ ಲೀಕ್​; ಕೇಂದ್ರ ಸರ್ಕಾರದ ವಿರುದ್ಧ ಅಭಿಷೇಕ್​ ಮನುಸಿಂಘ್ವಿ ಆಕ್ರೋಶ! Abhishek Manu Singhvi on Paper Leak

ಪ್ರಮುಖ ಮುಖ್ಯಾಂಶಗಳು

  • TET ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಆಕ್ರೋಶ
  • ದೇಶದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಪೇಪರ್ ಲೀಕ್ ಆಗುತ್ತಿದ್ದು, ಶಿಕ್ಷಣ ಸಚಿವರ ತಲೆದಂಡಕ್ಕೆ ಒತ್ತಾಯ
  • ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಎಸ್​​ಐಟಿ
ನವದೆಹಲಿ: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಪತ್ರಿಕೆ ಸೋರಿಕೆ ಎನ್ನುವುದು ಸಾಮಾನ್ಯ ಘಟನೆಯಾಗಿದೆ ಎಂದು ಸುಪ್ರೀಂ ಕೋರ್ಟ್​ನ ಹಿರಿಯ ವಕೀಲ ಹಾಗೂ ಕಾಂಗ್ರೆಸ್​ ನಾಯಕ ಅಭಿಷೇಕ್​ ಮನುಸಿಂಘ್ವಿ (Abhishek Manu Singhvi on Paper Leak) ಆಕ್ರೋಶ ಹೊರಹಾಕಿದ್ದಾರೆ.
ಇಂದು (ಭಾನುವಾರ, ಜೂನ್​.28) ಮಹಾರಾಷ್ಟ್ರದಲ್ಲಿ ನಡೆಯಬೇಕಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಯ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೆ ಮನುಸಿಂಘ್ವಿ ಗರಂ ಆಗಿದ್ದಾರೆ.

ಪ್ರತಿ ಮೂರು ತಿಂಗಳಿಗೆ ಪೇಪರ್​ ಲೀಕ್​!

ನಮ್ಮ ದೇಶದಲ್ಲಿ ಪ್ರತಿ ಮೂರು ತಿಂಗಳಿಗೆ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಟಿಇಟಿ ಪೇಪರ್​ ಲೀಕ್​ ಆಗಿದೆ, ಈಗ ಪರೀಕ್ಷಾ ಮಂಡಳಿಯ ಅಧ್ಯಕ್ಷನನ್ನು ಅಮಾನತು ಮಾಡುತ್ತಾರೆ. ಆದರೆ ಇದಕ್ಕೆ ಸರ್ಕಾರದ ಶಿಕ್ಷಣ ಸಚಿವರ ತಲೆದಂಡವಾಗಬೇಕು. ಯಾಕೆ ಅವರು ಇದಕ್ಕೆ ಜವಾಬ್ದಾರರಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೆಲ ತಿಂಗಳಿನ ಹಿಂದೆ, ನೀಟ್​ ಪೇಪರ್​ ಕೂಡ ಸೋರಿಕೆ ಆಗಿತ್ತು. ಇದರ ಕುರಿತು ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿದೆ? ಇವರೆಲ್ಲರೂ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆನ್ನಾಟ ಆಡುತ್ತಿದ್ದಾರೆಂದು ಮನುಸಿಂಘ್ವಿ ಕೆಂಡ ಕಾರಿದ್ದಾರೆ.

ಮುಂದುವರಿದ ತನಿಖೆ ಮೂವರ ಬಂಧನ!

ಟಿಇಟಿ ಪ್ರಶ್ನೆ ಪತ್ರಿಕೆ​ ಸೋರಿಕೆಗೆ ಸಂಬಂಧಿಸಿದಂತೆ ಎಸ್​ಐಟಿಯನ್ನು ರಚಿಸಲಾಗಿದ್ದು ಇಲ್ಲಿವರೆಗೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಆಕಾಶ್, ರಾಜೀವ್ ಮತ್ತು ಧೀರಜ್ ಎಂದು ಗುರುತಿಸಲಾಗಿದೆ.
ಇವರು ಅಣಕು ಪ್ರಶ್ನೆ ಪತ್ರಿಕೆ ಎಂದು ಹೇಳಿಕೊಂಡು ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇದೊಂದು ದೊಡ್ಡ ಅಕ್ರಮ ಜಾಲವಿದೆ ಎಂದು ಶಂಕಿಸಿರುವ ಮುಂಬೈ ಪೊಲೀಸರು, ಇವರಿಗೆ ಮತ್ತು ನೀಟ್​ ಸೋರಿಕೆ ಏನಾದರೂ ಸಂಬಂಧವಿದೆಯೇ? ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದ್ದಿದ್ದು ಕೆಲವೇ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).