ಸಿಜೆಪಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ಚುನಾವಣಾ ಆಯೋಗಕ್ಕೆ ಅರ್ಜಿ ಹಾಕಿದ ಲಾಯರ್! ಕಾನೂನಿನಲ್ಲಿ ಇದು ಸಾಧ್ಯವೇ? Cockroach Janata Party
- ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ಕಾಕ್ರೋಚ್ ಜನತಾ ಪಾರ್ಟಿ
- ಈ ಆನ್‌ಲೈನ್ ಗ್ರೂಪ್ ಅನ್ನು ತನ್ನ ಹೆಸರಿನಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲು ಮುಂದಾದ ವಕೀಲ
- ಸಿಜೆಪಿಯಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ವಕೀಲ ಸುಧೀರ್ ಜಖರ್ ಅರ್ಜಿ
- ಅರ್ಜಿಯಲ್ಲಿ ತಮ್ಮನ್ನು ತಾವು ಸಿಜೆಪಿಯ 'ರಾಷ್ಟ್ರೀಯ ಸಂಚಾಲಕ' ಎಂದು ಬಣ್ಣಿಸಿಕೊಂಡ ಸುಧೀರ್ ಜಖರ್
Cockroach Janata Party : ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ 'ಕಾಕ್ರೋಚ್ ಜನತಾ ಪಾರ್ಟಿ' ಆನ್‌ಲೈನ್ ಗ್ರೂಪ್ ಅನ್ನು ತನ್ನ ಹೆಸರಿನಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲು ವಕೀಲರೊಬ್ಬರು ನೇರವಾಗಿ ಚುನಾವಣಾ ಆಯೋಗದ ಮೆಟ್ಟಿಲೇರಿದ್ದು, ಈ ವಿಲಕ್ಷಣ ನಡೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹರಿಯಾಣದ ಪಾಣಿಪತ್ ಮೂಲದ ವಕೀಲ ಸುಧೀರ್ ಜಖರ್ ಎಂಬುವರು ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ಅಧಿಕೃತ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಅರ್ಜಿಯಲ್ಲಿ, ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ಈ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಹೊರಗಿಟ್ಟು, ಪಕ್ಷವನ್ನು ಸ್ವತಂತ್ರವಾಗಿ ತಮ್ಮದೇ ಹೆಸರಿನಲ್ಲಿ ನೋಂದಾಯಿಸಿಕೊಡಬೇಕೆಂದು ಆಯೋಗಕ್ಕೆ ವಿನಂತಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 29ಎ (Section 29A of the Representation of the People Act) ಅಡಿಯಲ್ಲಿ ವಕೀಲ ಸುಧೀರ್ ಜಖರ್ ಈ ಅರ್ಜಿಯನ್ನು ಸಲ್ಲಿಸಿದ್ದು, ತಮ್ಮನ್ನು ತಾವು ಸಿಜೆಪಿಯ 'ರಾಷ್ಟ್ರೀಯ ಸಂಚಾಲಕ' ಎಂದು ಬಣ್ಣಿಸಿಕೊಂಡಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ಈ ಅಧಿಕೃತ ಅರ್ಜಿಯಲ್ಲಿ ಪಕ್ಷದ ವಿಲಕ್ಷಣ 'ಜಿರಳೆ' (Cockroach) ಲೋಗೋ ಮತ್ತು ತಮ್ಮ ವಕೀಲ ವೃತ್ತಿಯ ಶೀರ್ಷಿಕೆಯನ್ನು ಅವರು ಸೇರಿಸಿದ್ದಾರೆ. ಒಂದು ವೇಳೆ ಕೇಂದ್ರ ಚುನಾವಣಾ ಆಯೋಗವು ಈ ಅರ್ಜಿಯನ್ನು ಪುರಸ್ಕರಿಸಿ ಅನುಮೋದನೆ ನೀಡಿದ್ದೇ ಆದಲ್ಲಿ, ವಕೀಲ ಜಖರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ 'ಕಾಕ್ರೋಚ್ ಜನತಾ ಪಾರ್ಟಿ'ಯ ಎಲ್ಲಾ ಅಧಿಕೃತ ಖಾತೆಗಳ ಮಾಲೀಕತ್ವವನ್ನು ಕಾನೂನಾತ್ಮಕವಾಗಿ ತಮ್ಮದಾಗಿಸಿಕೊಳ್ಳಲಿದ್ದಾರೆ.
ಕಾನೂನಿನಲ್ಲಿ ಇದು ಸಾಧ್ಯವಿದೆಯೇ?
ಕಾನೂನಾತ್ಮಕ ನಿಯಮಗಳ ಪ್ರಕಾರ, ಯಾವುದೇ ಆನ್‌ಲೈನ್ ಗ್ರೂಪ್ ಅಥವಾ ಸೋಶಿಯಲ್ ಮೀಡಿಯಾ ಪೇಜ್ ಅನ್ನು ಲಾಯರ್ ಸುಧೀರ್ ಜಖರ್ ಅವರು ಕೇವಲ ತಮ್ಮ ವೈಯಕ್ತಿಕ ಹೆಸರಿನಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲು ಸಾಧ್ಯವಿಲ್ಲ. ಭಾರತೀಯ ಚುನಾವಣಾ ಆಯೋಗದ (ECI) ನಿಯಮಾವಳಿಗಳ ಅನ್ವಯ, ರಾಜಕೀಯ ಪಕ್ಷವೊಂದನ್ನು ನೋಂದಾಯಿಸಬೇಕಾದರೆ ಕನಿಷ್ಠ 100 ಜನ ನೋಂದಾಯಿತ ಮತದಾರರು ಆ ಪಕ್ಷದ ಸದಸ್ಯರಾಗಿರಬೇಕು ಮತ್ತು ಅವರೆಲ್ಲರೂ ಪಕ್ಷದ ಸಂವಿಧಾನಕ್ಕೆ ಬದ್ಧರಾಗಿರುವಂತೆ ಪ್ರಮಾಣಪತ್ರ ನೀಡಬೇಕಾಗುತ್ತದೆ. ಹೀಗಾಗಿ, ವಕೀಲ ಜಖರ್ ಅವರು 'ಕಾಕ್ರೋಚ್ ಜನತಾ ಪಾರ್ಟಿ'ಯನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಲು ಅರ್ಜಿ ಸಲ್ಲಿಸಿದ್ದರೂ ಸಹ, ಅದನ್ನು ತಮ್ಮ ವೈಯಕ್ತಿಕ ಆಸ್ತಿಯನ್ನಾಗಿ ಮಾಡಿಕೊಳ್ಳಲು ಬರುವುದಿಲ್ಲ, ಬದಲಿಗೆ ಕೇವಲ ಪಕ್ಷದ ಒಬ್ಬ ಪದಾಧಿಕಾರಿ ಅಥವಾ 'ರಾಷ್ಟ್ರೀಯ ಸಂಚಾಲಕ' ಹುದ್ದೆಯ ಹೆಸರಿನಲ್ಲಿ ಮಾತ್ರ ಇಡೀ ಸಂಘಟನೆಯ ಪರವಾಗಿ ನೋಂದಣಿ ಪ್ರಕ್ರಿಯೆಯನ್ನು ಮುನ್ನಡೆಸಬಹುದಾಗಿದೆ, (ಏಜೆನ್ಸೀಸ್).