ಯಾರಿಗೆ, ಯಾವಾಗ ಬೇಕಾದರೂ ಬರಬಹುದು ಈ ಕಾಯಿಲೆ: ಬಂದರೆ ಇಡೀ ಜೀವನವೇ ಅಸ್ತವ್ಯಸ್ತ ಎಚ್ಚರ! Carpal Tunnel Syndrome

ಯಾರಿಗೆ, ಯಾವಾಗ ಬೇಕಾದರೂ ಬರಬಹುದು ಈ ಕಾಯಿಲೆ: ಬಂದರೆ ಇಡೀ ಜೀವನವೇ ಅಸ್ತವ್ಯಸ್ತ ಎಚ್ಚರ! Carpal Tunnel Syndrome
ಯಾರಿಗೆ, ಯಾವಾಗ ಬೇಕಾದರೂ ಬರಬಹುದು ಈ ಕಾಯಿಲೆ: ಬಂದರೆ ಇಡೀ ಜೀವನವೇ ಅಸ್ತವ್ಯಸ್ತ ಎಚ್ಚರ! Carpal Tunnel Syndrome
Published on

ಪ್ರಮುಖ ಮುಖ್ಯಾಂಶಗಳು

  • ಕೈ ಅಂಗೈ ಮತ್ತು ಬೆರಳುಗಳಲ್ಲಿ ಹಠಾತ್ ಆಗಿ ಕಾಣಿಸಿಕೊಳ್ಳುವ ಮರಗಟ್ಟುವಿಕೆ ಹಾಗೂ ಜುಮುಜುಮು
  • ಕಾರ್ಪಲ್ ಟನಲ್ ಸಿಂಡ್ರೋಮ್ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಆರೋಗ್ಯ ಸಮಸ್ಯೆ
  • ನಮ್ಮ ಕೈ ಅಂಗೈ ಮತ್ತು ಬೆರಳುಗಳಿಗೆ ಸ್ಪರ್ಶ ಜ್ಞಾನ ನೀಡುವ ಮುಖ್ಯ ನರವೇ ಮೀಡಿಯನ್ ನರ
  • ಈ ನರ ಹಿಸುಕಲ್ಪಟ್ಟಾಗ ಅಥವಾ ಒತ್ತಡಕ್ಕೆ ಒಳಗಾದಾಗ ಕಾರ್ಪಲ್ ಟನಲ್ ಸಿಂಡ್ರೋಮ್ ಎಂಬ ಕಾಯಿಲೆ ಕಾಣಿಸಿಕೊಳ್ಳುತ್ತದೆ
Carpal Tunnel Syndrome : ಕೈ ಅಂಗೈ ಮತ್ತು ಬೆರಳುಗಳಲ್ಲಿ ಹಠಾತ್ ಆಗಿ ಕಾಣಿಸಿಕೊಳ್ಳುವ ಮರಗಟ್ಟುವಿಕೆ ಹಾಗೂ ಜುಮುಜುಮು ಅನಿಸಿಕೆಗೆ ಕಾರಣವಾಗುವ ‘ಕಾರ್ಪಲ್ ಟನಲ್ ಸಿಂಡ್ರೋಮ್’ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರಿಂದ ಹಿಡಿದು ಐಟಿ ಉದ್ಯೋಗಿಗಳು, ಗೃಹಿಣಿಯರು ಹಾಗೂ ದೈಹಿಕ ಶ್ರಮಪಡುವ ಕಾರ್ಮಿಕರವರೆಗೆ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ.
ನಮ್ಮ ಕೈ ಅಂಗೈ ಮತ್ತು ಬೆರಳುಗಳಿಗೆ ಸ್ಪರ್ಶ ಜ್ಞಾನ ಅಥವಾ ಸಂವೇದನೆಯನ್ನು ನೀಡುವ ಮುಖ್ಯ ನರವೇ 'ಮೀಡಿಯನ್ ನರ' (Median Nerve). ಈ ನರವು ಮಣಿಕಟ್ಟಿನ ಮೂಲಕ ಅಂಗೈಗೆ ಹಾದುಹೋಗುವ ಕಿರಿದಾದ ಹಾದಿಯಾದ 'ಕಾರ್ಪಲ್ ಟನಲ್' ಒಳಗೆ ಯಾವುದಾದರೊಂದು ಕಾರಣದಿಂದಾಗಿ ನರ ಹಿಸುಕಲ್ಪಟ್ಟಾಗ ಅಥವಾ ಒತ್ತಡಕ್ಕೆ ಒಳಗಾದಾಗ ವ್ಯಕ್ತಿಯಲ್ಲಿ ಈ ಕಾರ್ಪಲ್ ಟನಲ್ ಸಿಂಡ್ರೋಮ್ ಎಂಬ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲೇ ಇದರ ಬಗ್ಗೆ ಎಚ್ಚರ ವಹಿಸದಿದ್ದರೆ ದಿನನಿತ್ಯದ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದೂ ಕೂಡ ನರಕಯಾತನೆಯಾಗಿ ಪರಿಣಮಿಸಬಹುದು.

ಪತ್ತೆಹಚ್ಚುವುದು ಹೇಗೆ?

ಕಾರ್ಪಲ್ ಟನಲ್ ಸಿಂಡ್ರೋಮ್ ಕಾಯಿಲೆಯಲ್ಲಿ ಅಂಗೈ ಭಾಗದಲ್ಲಿ ಮರಗಟ್ಟುವಿಕೆ ಕಾಣಿಸಿಕೊಳ್ಳುವುದು ಪ್ರಧಾನ ಸಮಸ್ಯೆಯಾಗಿದ್ದು, ಇದರೊಂದಿಗೆ ಸ್ಪರ್ಶ ಜ್ಞಾನ ಕಳೆದುಕೊಳ್ಳುವುದು, ತೀವ್ರ ನೋವು, ಬಾವು ಹಾಗೂ ಕೈಗಳಲ್ಲಿ ದೌರ್ಬಲ್ಯ ಉಂಟಾಗುವುದು ಪ್ರಮುಖ ಲಕ್ಷಣಗಳಾಗಿವೆ. ಈ ತೊಂದರೆಗಳು ಸಾಮಾನ್ಯವಾಗಿ ರಾತ್ರಿಯ ಅವಧಿಯಲ್ಲಿ ಹೆಚ್ಚು ತೀವ್ರಗೊಳ್ಳುತ್ತವೆ. ಕಾಯಿಲೆ ಉಲ್ಬಣಗೊಂಡಂತೆಲ್ಲಾ ಅಂಗೈಯಲ್ಲಿರುವ ಸಣ್ಣ ಸ್ನಾಯುಗಳು ಕ್ಷೀಣಿಸಲು ಆರಂಭಿಸುತ್ತವೆ ಮತ್ತು ಅಂಗೈಯ ಉಬ್ಬಿದ ಭಾಗಗಳಿಗೆ ಈ ಸಮಸ್ಯೆ ಹರಡುತ್ತದೆ. ಕೆಲವು ಸಂದರ್ಭಗಳಲ್ಲಿ ಈ ನೋವು ಅಂಗೈಯಿಂದ ಆರಂಭವಾಗಿ ಮೇಲಕ್ಕೆ ಅಂದರೆ ತೋಳಿನವರೆಗೂ ವ್ಯಾಪಿಸುತ್ತದೆ. ಈ ಲಕ್ಷಣಗಳು ಏಕಕಾಲದಲ್ಲಿ ಎರಡೂ ಕೈಗಳಲ್ಲೂ ಕಾಣಿಸಿಕೊಳ್ಳಬಹುದಾಗಿದ್ದು, ತೀವ್ರ ಮರಗಟ್ಟುವಿಕೆಯಿಂದಾಗಿ ರೋಗಿಗಳು ಪದೇ ಪದೇ ತಮ್ಮ ಕೈಗಳನ್ನು ಉಜ್ಜಿಕೊಳ್ಳುವ ಮತ್ತು ಗಟ್ಟಿಯಾಗಿ ಅಲುಗಾಡಿಸುವ ಮೂಲಕ ತಾತ್ಕಾಲಿಕ ಉಪಶಮನ ಪಡೆಯಲು ಯತ್ನಿಸುತ್ತಾರೆ.

ಈ ರೋಗಕ್ಕೆ ಕಾರಣಗಳೇನು?

ಕಾರ್ಪಲ್ ಟನಲ್ ಸಿಂಡ್ರೋಮ್ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆಯಾದರೂ, ಶೇಕಡಾ ಹೆಚ್ಚಿನ ರೋಗಿಗಳಲ್ಲಿ ಇದಕ್ಕೆ ನಿರ್ದಿಷ್ಟವಾದ ಕಾರಣಗಳನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಆದಾಗ್ಯೂ ಮಧುಮೇಹ, ಮೂತ್ರಪಿಂಡದ ಕಾಯಿಲೆ, ಥೈರಾಯ್ಡ್ ಸಮಸ್ಯೆ, ಕೀಲು ನೋವು, ಗರ್ಭಿಣಿಯರು, ವೈಬ್ರೇಟರ್ ಯಂತ್ರಗಳನ್ನು ಬಳಸುವವರು ಹಾಗೂ ಕಂಪ್ಯೂಟರ್ ಟೈಪಿಂಗ್‌ನಂತಹ ಒಂದೇ ರೀತಿಯ ಕೆಲಸವನ್ನು ನಿರಂತರವಾಗಿ ಮಾಡುವವರಲ್ಲಿ ಈ ಕಾಯಿಲೆಯ ಸಾಧ್ಯತೆ ಹೆಚ್ಚಿರುತ್ತದೆ. ಈ ಮರಗಟ್ಟುವಿಕೆಯ ಸಮಸ್ಯೆಯು ಗೃಹಿಣಿಯರು ಮತ್ತು ಉದ್ಯೋಗಿಗಳಿಗೆ ತಮ್ಮ ದೈನಂದಿನ ಮನೆಗೆಲಸ ಹಾಗೂ ಕಚೇರಿ ಕೆಲಸಗಳನ್ನು ಮಾಡಲು ಪ್ರಮುಖ ಅಡ್ಡಿಯಾಗಿ ಪರಿಣಮಿಸುವುದಲ್ಲದೆ, ವಾಹನ ಚಾಲನೆ ಮಾಡುವುದು, ಬರೆಯುವುದು ಮತ್ತು ರಾತ್ರಿಯ ಸುಖಕರವಾದ ನಿದ್ರೆಗೂ ತೀವ್ರ ಅಡಚಣೆಯನ್ನು ಉಂಟುಮಾಡುತ್ತದೆ.

ಏನು ಮಾಡಬೇಕು?

ಕಾರ್ಪಲ್ ಟನಲ್ ಸಿಂಡ್ರೋಮ್‌ನಂತಹ ಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣವೇ ಹ್ಯಾಂಡ್ ಸರ್ಜನ್ ಅಥವಾ ಪ್ಲಾಸ್ಟಿಕ್ ಸರ್ಜನ್ ಅವರನ್ನು ಸಂಪರ್ಕಿಸುವುದು ಸೂಕ್ತವಾಗಿದೆ. ಅವರು ನಿಮ್ಮ ಕೈಯನ್ನು ಕೂಲಂಕಷವಾಗಿ ಪರೀಕ್ಷಿಸಿ ಅಗತ್ಯವಿರುವ ಸೂಕ್ತ ತಪಾಸಣೆಗಳನ್ನು ಸೂಚಿಸುತ್ತಾರೆ. ಈ ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚಲು 'ನರ್ವ್ ಕಂಡಕ್ಷನ್ ಸ್ಟಡಿ' (Nerve Conduction Study - ನರಗಳ ಕಾರ್ಯಕ್ಷಮತೆ ಪರೀಕ್ಷೆ) ಮತ್ತು ಅಲ್ಟ್ರಾಸೌಂಡ್ (Ultrasound) ಸ್ಕ್ಯಾನಿಂಗ್ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಇವುಗಳ ಮೂಲಕ ಸಮಸ್ಯೆಯ ತೀವ್ರತೆಯನ್ನು ಅರಿತು ಮುಂದಿನ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ.

ಈ ರೋಗಕ್ಕೆ ಚಿಕಿತ್ಸೆ ಏನು?

ಕಾರ್ಪಲ್ ಟನಲ್ ಸಿಂಡ್ರೋಮ್‌ನ ಚಿಕಿತ್ಸೆಯು ಕಾಯಿಲೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಆರಂಭಿಕ ಹಂತದಲ್ಲಿ ಮಣಿಕಟ್ಟಿಗೆ ಸ್ಪ್ಲಿಂಟ್ ಧರಿಸುವುದು ಹಾಗೂ ಸ್ಟೆರಾಯ್ಡ್ ಇಂಜೆಕ್ಷನ್‌ಗಳ ಮೂಲಕ ಚಿಕಿತ್ಸೆ ನೀಡಬಹುದಾದರೂ, ಶಸ್ತ್ರಚಿಕಿತ್ಸೆಯೇ ಇದಕ್ಕೆ ಪ್ರಮುಖ ಹಾಗೂ ಶಾಶ್ವತ ಪರಿಹಾರವಾಗಿದೆ. 'ಕಾರ್ಪಲ್ ಟನಲ್ ರಿಲೀಸ್' ಎಂದು ಕರೆಯಲಾಗುವ ಈ ಶಸ್ತ್ರಚಿಕಿತ್ಸೆಯು ಅತ್ಯಂತ ಸುರಕ್ಷಿತವಾಗಿದ್ದು, ಮಣಿಕಟ್ಟಿನ ಭಾಗದಲ್ಲಿ ಸಣ್ಣದಾಗಿ ಕರಡ ರೇಖೆ ಹಾಕಿ ಯಾವುದೇ ಅರಿವಳಿಕೆ ಅಥವಾ ಪ್ರಜ್ಞೆ ತಪ್ಪಿಸುವಿಕೆ ಇಲ್ಲದೆಯೇ ಇದನ್ನು ಮಾಡಬಹುದಾಗಿದೆ. ಕಾಯಿಲೆ ಉಲ್ಬಣಗೊಂಡು ಅಂಗೈಯಲ್ಲಿರುವ ಸಣ್ಣ ಸ್ನಾಯುಗಳು ಒಮ್ಮೆ ಸಂಪೂರ್ಣವಾಗಿ ಕ್ಷೀಣಿಸಿದರೆ ಆ ಬಳಿಕ ಶಸ್ತ್ರಚಿಕಿತ್ಸೆ ಮಾಡಿದರೂ ಅದನ್ನು ಮೊದಲಿನ ಸ್ಥಿತಿಗೆ ತರುವುದು ಕಷ್ಟಸಾಧ್ಯ. ಹಾಗಾಗಿ, ತೀವ್ರ ನೋವಿನಿಂದ ಮುಕ್ತಿ ಪಡೆಯಲು ಮತ್ತು ಸಮಸ್ಯೆ ಮತ್ತಷ್ಟು ಬಿಗಡಾಯಿಸದಂತೆ ತಡೆಯಲು ಆರಂಭಿಕ ಲಕ್ಷಣಗಳು ಕಂಡುಬಂದ ತಕ್ಷಣವೇ ಹ್ಯಾಂಡ್ ಸರ್ಜನ್ ಅಥವಾ ಪ್ಲಾಸ್ಟಿಕ್ ಸರ್ಜನ್ ಅವರನ್ನು ಸಂಪರ್ಕಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net