ಕೃಷ್ಣ ಮೋಹನ್ 
ದೇಶ

ಶ್ರೀರಾಮ ಮಂದಿರ ಟ್ರಸ್ಟ್​​ನ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ್ ನೇಮಕ | Krishna Mohan

ಲಖನೌ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಆರೋಪ ಹಿನ್ನೆಲೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ ನೀಡಿದ ಹಿನ್ನೆಲೆ ಅವರ ಸ್ಥಾನಕ್ಕೆ ಮಧ್ಯಂತರ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ್(Krishna Mohan) ಅವರನ್ನು ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ.
ಇಂದು ಮಧ್ಯಾಹ್ನ ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್, ದೇಣಿಗೆ ಕಳ್ಳತನ ಘಟನೆಯಿಂದ ನಮಗೆಲ್ಲರಿಗೂ ನೋವಾಗಿದೆ ಮತ್ತು ದುಃಖವಾಗಿದೆ. ಕಳ್ಳತನ ಚಿಕ್ಕದೋ ಅಥವಾ ದೊಡ್ಡದೋ ಎಂಬುದು ಗೌಣ. ನಮಗೆ ನೋವುಂಟುಮಾಡುವ ಸಂಗತಿಯೆಂದರೆ ಇಲ್ಲಿ ಅಂತಹ ವಾತಾವರಣ ಬೆಳೆಯಲು ಅವಕಾಶ ನೀಡಲಾಗಿತ್ತು ಎಂಬುದು ಎಂದು ಹೇಳಿದ್ದಾರೆ.
ಸಭೆಗೂ ಮುನ್ನ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ. ರಾಯ್ ಅವರಿಗೆ ತೀವ್ರ ನೋವಾಯಿತು. ಅಪರಾಧಿಗಳನ್ನು ಹಿಡಿದು ಸೂಕ್ತ ಶಿಕ್ಷೆ ವಿಧಿಸುವವರೆಗೆ ತಾವು ಮುಂದುವರಿಯುವುದು ಸೂಕ್ತವಲ್ಲ ಎಂದು ಅವರು ಭಾವಿಸಿದ್ದರು. ಅವರ ಸ್ಥಾನದಲ್ಲಿ ಕೃಷ್ಣ ಮೋಹನ್ ಅವರನ್ನು ಟ್ರಸ್ಟ್‌ನ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಟ್ರಸ್ಟ್ ಇಂತಹ ದೋಷರಹಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಬದ್ಧವಾಗಿದೆ. ಈ ಉದ್ದೇಶಕ್ಕಾಗಿ ನಿರ್ದಿಷ್ಟ ಅಧಿಕಾರಿಗಳನ್ನು ನೇಮಿಸಲು ನಾವು ಒಂದು ಸಣ್ಣ ಸಮಿತಿಯನ್ನು ರಚಿಸಿದ್ದೇವೆ. ಎಸ್‌ಐಟಿಯ ಅಂತಿಮ ವರದಿ ಬಿಡುಗಡೆಯಾದ ನಂತರ ಜುಲೈ 22ರಂದು ಮತ್ತೊಂದು ಸಭೆ ನಡೆಸಲಾಗುವುದು ಎಂದಿದ್ದಾರೆ.
ಇನ್ನೂ ರಾಮ ಮಂದಿರದ ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಎಸ್​ಐಟಿ ತನಿಖೆಗೆ ಆದೇಶಿದೆ. ಪ್ರಕರಣದಲ್ಲಿ ಈಗಾಗಲೇ ಸುಮಾರು ಎಂಟು ಜನರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ (ಏಜೆನ್ಸೀಸ್).