'ಕಿಸ್' ಕ್ಯಾಂಪಸ್‌ನಲ್ಲಿ ಜಗನ್ನಾಥ ರಥಯಾತ್ರೆ ವೈಭವ: ತಂಗಿ ಸುಭದ್ರೆಯ ರಥ ಎಳೆದು ಇತಿಹಾಸ ಬರೆದ ಮಹಿಳೆಯರು; ಭಕ್ತಿ ಭಾವದಲ್ಲಿ ತೇಲಿದ ಸಾವಿರಾರು ವಿದ್ಯಾರ್ಥಿಗಳು! KISS Jagannath Rath Yatra
ಭುವನೇಶ್ವರ: ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆಯ ಸಡಗರ ಇಡೀ ದೇಶದಲ್ಲೇ ಮನೆ ಮಾಡಿದೆ. ಇದರ ಬೆನ್ನಲ್ಲೇ ಭುವನೇಶ್ವರದ ಖ್ಯಾತ 'ಕಳಿಂಗಾ ಇನ್ಸ್‌ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್' (KISS Jagannath Rath Yatra) ಆವರಣದ ಶ್ರೀವಾಣಿ ಕ್ಷೇತ್ರದಲ್ಲಿ ಜಗನ್ನಾಥ ರಥಯಾತ್ರೆಯು ಅತ್ಯಂತ ಅದ್ದೂರಿಯಾಗಿ, ಅಪಾರ ಧಾರ್ಮಿಕ ಶ್ರದ್ಧೆಯೊಂದಿಗೆ ನೆರವೇರಿದೆ.
ವಿಶ್ವದ ಅತಿ ದೊಡ್ಡ ಬುಡಕಟ್ಟು ವಿಶ್ವವಿದ್ಯಾಲಯ ಎನಿಸಿಕೊಂಡಿರುವ 'ಕಿಸ್' ಕ್ಯಾಂಪಸ್‌ನಲ್ಲಿ ನಡೆದ ಈ ರಥೋತ್ಸವದಲ್ಲಿ ಸಾವಿರಾರು ಬುಡಕಟ್ಟು ವಿದ್ಯಾರ್ಥಿಗಳು, ಸಂಸ್ಥೆ ಸಿಬ್ಬಂದಿ ಹಾಗೂ ಸ್ಥಳೀಯ ಭಕ್ತರು ಭಾಗವಹಿಸಿ ಜಗನ್ನಾಥ, ಅಣ್ಣ ಬಲರಾಮ ಮತ್ತು ತಂಗಿ ಸುಭದ್ರಾ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.
ಒಡಿಶಾದ ಪುಣ್ಯಕ್ಷೇತ್ರವಾದ ಪುರಿಯಲ್ಲಿ ಆಷಾಢ ಮಾಸದಲ್ಲಿ ನಡೆಯುವ ರಥಯಾತ್ರೆ ಜಗತ್ತಿನಲ್ಲೇ ಅತಿ ಹಳೆಯ ಮತ್ತು ದೊಡ್ಡ ಜಾತ್ರೆ ಎಂದು ಖ್ಯಾತಿಗಳಿಸಿದೆ. ಅದೇ ರೀತಿ, ಭುವನೇಶ್ವರದ 'ಕಿಸ್' ಕ್ಯಾಂಪಸ್‌ನಲ್ಲಿಯೂ ಜಗನ್ನಾಥನ ರಥಯಾತ್ರೆಯನ್ನು ಪ್ರತೀ ವರ್ಷ ಪುರಿ ಜಗನ್ನಾಥ ಮಂದಿರದ ಕಟ್ಟುನಿಟ್ಟಿನ ನಿಯಮಾವಳಿಗಳಂತೆಯೇ ಆಚರಿಸಿಕೊಂಡು ಬರಲಾಗುತ್ತಿದೆ.
ಈ 'ಕಿಸ್' ಕ್ಯಾಂಪಸ್‌ನಲ್ಲಿ ಪುರಿಯಂತೆಯೇ ಜಗನ್ನಾಥ ದೇವಾಲಯ ಸೇರಿದಂತೆ ಹತ್ತಾರು ಚಿಕ್ಕ ಚಿಕ್ಕ ಗುಡಿಗಳಿದ್ದು, ಹಬ್ಬದ ದಿನಗಳಲ್ಲಿ ಮೂಲಕ್ಷೇತ್ರದ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಇಲ್ಲಿಯೂ ಚಾಚೂ ತಪ್ಪದೆ ಪಾಲಿಸಲಾಗುತ್ತದೆ.
ಮಾಜಿ ಸಂಸದರಿಂದ 'ಛೇರಾ ಪಹನ್ರಾ' ಸೇವೆ
ರಥಯಾತ್ರೆಯ ದಿನದಂದು ನಿಗದಿತ ಮುಹೂರ್ತದಲ್ಲೇ ಮೈಲಮ, ಮಂಗಳಾರತಿ, ತಡಪಲಾಗಿ, ರೋಷ ಹೋಮ ಹಾಗೂ ಸೂರ್ಯ ಪೂಜೆಗಳು ನಡೆದಿವೆ. ಮಧ್ಯಾಹ್ನ ರಥಯಾತ್ರೆ ಆರಂಭವಾಗುವ ಮುನ್ನ ನಡೆಯುವ ಅತ್ಯಂತ ಪವಿತ್ರವಾದ 'ಛೇರಾ ಪಹನ್ರಾ' (ರಥದ ಮೇಲ್ಭಾಗವನ್ನು ಕಸಬರಿಕೆಯಿಂದ ಸ್ವಚ್ಛಗೊಳಿಸುವ ವಿಧಿ) ಆಚರಣೆಯನ್ನು ಕಳಿಂಗಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಡಾ. ಅಚ್ಯುತ ಸಮಂತ ಅವರು ಭಕ್ತಿಯಿಂದ ನೆರವೇರಿಸಿದ್ದಾರೆ.
ಸಂಜೆಯಾಗುತ್ತಿದ್ದಂತೆ ಜಗನ್ನಾಥ, ಬಲರಾಮ ಮತ್ತು ಸುಭದ್ರೆಯ ಮೂರು ಸುಂದರ ರಥಗಳನ್ನು ಸಾವಿರಾರು ಭಕ್ತರು ಜೈಕಾರ ಹಾಕುತ್ತಾ ಎಳೆದಿದ್ದಾರೆ. ಈ ರಥಯಾತ್ರೆಯ ಅತ್ಯಂತ ಆಕರ್ಷಕ ಮತ್ತು ವಿಶೇಷ ಸಂಗತಿಯೆಂದರೆ, ದೇವಿ ಸುಭದ್ರೆಯ ರಥವನ್ನು ಕೇವಲ ಮಹಿಳೆಯರು ಮಾತ್ರ ಎಳೆದಿದ್ದಾರೆ.
ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ, ಸಾಮಾನ್ಯವಾಗಿ ರಥೋತ್ಸವಗಳಲ್ಲಿ ಉತ್ಸವ ಮೂರ್ತಿಗಳನ್ನು ಮಾತ್ರ ರಥದಲ್ಲಿ ಕೂರಿಸಲಾಗುತ್ತದೆ. ಆದರೆ ಇಲ್ಲಿ ದೇವರ ಮೂಲ ಮುಖ್ಯ ಮೂರ್ತಿಗಳನ್ನೇ ರಥದಲ್ಲಿ ಪ್ರತಿಷ್ಠಾಪಿಸಿ ಹೊರಗೆ ತರಲಾಗುತ್ತದೆ. ದೇವರು ಗರ್ಭಗುಡಿಯಿಂದ ಹೊರಬರುತ್ತಿದ್ದಂತೆ ದೇವಾಲಯದ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ.
ರಥಗಳು ಸಾಗುವ ಮಾರ್ಗದುದ್ದಕ್ಕೂ ಭಕ್ತರು "ಜೈ ಜಗನ್ನಾಥ" ಎಂಬ ಘೋಷಣೆಗಳನ್ನು ಕೂಗುತ್ತಾ ಭಕ್ತಿಯ ಪರವಶತೆಯಲ್ಲಿ ತೇಲಿದ್ದಾರೆ. ಸಾಂಪ್ರದಾಯಿಕ ವಾದ್ಯ ಮೇಳಗಳು, ಬುಡಕಟ್ಟು ಜನರ ಸಾಂಪ್ರದಾಯಿಕ ನೃತ್ಯಗಳು ಮತ್ತು ವಿವಿಧ ಕಲಾ ಪ್ರದರ್ಶನಗಳು ನೆರೆದಿದ್ದ ಜನರ ಕಣ್ಣು ಮನ ಸೆಳೆದಿವೆ.
ಪುರಿ ಕ್ಷೇತ್ರದಂತೆಯೇ ಇಲ್ಲೂ ಗುಂಡಿಚಾ ದೇವಿ ದೇವಾಲಯವಿದ್ದು, ಮೂರು ರಥಗಳು ಅಲ್ಲಿಗೆ ಹೋಗಿ ತಲುಪಿವೆ. ರಥದಲ್ಲೇ ಒಂದು ದಿನ ಕಳೆಯುವ ದೇವರುಗಳು, ಮಾರನೇ ದಿನ ಗುಂಡಿಚಾ ಮಂದಿರ ಪ್ರವೇಶಿಸಿ ಅಲ್ಲಿಯೇ ಮುಂದಿನ 7 ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ಈ 9 ದಿನಗಳ ಕಾಲ ಪ್ರತಿದಿನ ಸಂಜೆ ಗುಂಡಿಚಾ ದೇವಾಲಯದ ಬಳಿ ಅದ್ಧೂರಿ ಭಜನಾ ಸಮಾರೋಹ ನಡೆಯಲಿದ್ದು, ಸುತ್ತಮುತ್ತಲಿನ ಸಾವಿರಾರು ಭಕ್ತರು ತ್ರಿಮೂರ್ತಿಗಳ ದರ್ಶನ ಪಡೆಯಲಿದ್ದಾರೆಂದು ತಿಳಿದು ಬಂದಿದೆ, (ಏಜನ್ಸೀಸ್).