ಇದು ಯಾರಪ್ಪನ ಆಸ್ತಿಯಲ್ಲ... ದಿಲ್ಜಿತ್ ದೋಸಾಂಜ್ ಖಡಕ್ ತಿರುಗೇಟು WEB
ದೇಶ

ಇದು ಯಾರಪ್ಪನ ಆಸ್ತಿಯಲ್ಲ... ದಿಲ್ಜಿತ್ ದೋಸಾಂಜ್ ಖಡಕ್ ತಿರುಗೇಟು!Diljit Dosanjh

ಸಂಗೀತ ಕಾರ್ಯಕ್ರಮ ಎಂದರೆ ಹಾಡು, ನೃತ್ಯ, ಅಭಿಮಾನಿಗಳ ಸಂಭ್ರಮ ಇರಬೇಕಷ್ಟೇ. ಆದರೆ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಇಂದೋರ್ ಕಾರ್ಯಕ್ರಮ ಮಾತ್ರ ಹಾಡುಗಳ ಮೇಲಿನ ನಿರ್ಬಂಧ ಹಾಗೂ ವಿವಾದಗಳಿಂದ ಸುದ್ದಿಯಾಗಿದೆ. ತಾವು ಹಾಡಬೇಕಿದ್ದ ನಾಲ್ಕು ಹಾಡುಗಳಿಗೆ ತಡೆ ನೀಡಿದ್ದಕ್ಕೆ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ ದಿಲ್ಜಿತ್, ಖ್ಯಾತ ಕವಿ ರಾಹತ್ ಇಂದೋರಿ ಅವರ ಕವಿತೆಯ ಸಾಲುಗಳನ್ನು ಉಲ್ಲೇಖಿಸಿ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.Diljit Dosanjh

ಇಂದೋರ್: ಸಂಗೀತ ಕಾರ್ಯಕ್ರಮ ಎಂದರೆ ಹಾಡು, ನೃತ್ಯ, ಅಭಿಮಾನಿಗಳ ಸಂಭ್ರಮ ಇರಬೇಕಷ್ಟೇ. ಆದರೆ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಇಂದೋರ್ ಕಾರ್ಯಕ್ರಮ ಮಾತ್ರ ಹಾಡುಗಳ ಮೇಲಿನ ನಿರ್ಬಂಧ ಹಾಗೂ ವಿವಾದಗಳಿಂದ ಸುದ್ದಿಯಾಗಿದೆ. ತಾವು ಹಾಡಬೇಕಿದ್ದ ನಾಲ್ಕು ಹಾಡುಗಳಿಗೆ ತಡೆ ನೀಡಿದ್ದಕ್ಕೆ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ ದಿಲ್ಜಿತ್, ಖ್ಯಾತ ಕವಿ ರಾಹತ್ ಇಂದೋರಿ ಅವರ ಕವಿತೆಯ ಸಾಲುಗಳನ್ನು ಉಲ್ಲೇಖಿಸಿ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಅದರಲ್ಲೂ 'ಕಿಸೀ ಕೆ ಬಾಪ್ ಕಾ ಹಿಂದೂಸ್ತಾನ್ ಥೋಡಿ ಹೈ' ಎಂಬ ಸಾಲು ಇದೀಗ ಗಮನ ಸೆಳೆಯುತ್ತಿದೆ.

ನವೆಂಬರ್ 15ರಂದು ಇಂದೋರ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ದಿಲ್ಜಿತ್, ಯಾವ ಹಾಡು ಹಾಡಬೇಕು, ಯಾವ ಹಾಡು ಹಾಡಬಾರದು ಎಂಬ ನಿರ್ಬಂಧಗಳ ಬಗ್ಗೆ ಬೇಸರ ಹೊರಹಾಕಿದರು. ಬಳಿಕ ಕವಿ ರಾಹತ್ ಇಂದೋರಿ ಅವರ ಪ್ರಸಿದ್ಧ ಕವಿತೆಯನ್ನು ವಾಚಿಸಿದರು. ದೇಶದ ಮಣ್ಣಿನಲ್ಲಿ ಎಲ್ಲರ ಪಾಲೂ ಇದೆ, ಭಾರತ ಯಾರೊಬ್ಬರ ಸ್ವಂತ ಆಸ್ತಿಯಲ್ಲ ಎಂಬ ಅರ್ಥ ಸಾರುವ ಸಾಲುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಈ ಸಂದರ್ಭದಲ್ಲಿ ಅಭಿಮಾನಿಗಳತ್ತ ಮುಖ ಮಾಡಿದ ಅವರು, ತಮ್ಮ ಕಾರ್ಯಕ್ರಮದ ವಿಡಿಯೊವನ್ನೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಿರ್ಬಂಧಗಳ ನಡುವೆಯೂ ತಮ್ಮ ಮಾತನ್ನು ಕವಿತೆಯ ಮೂಲಕವೇ ವ್ಯಕ್ತಪಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ನಾಲ್ಕು ಹಾಡುಗಳಿಗೆ ಅಧಿಕಾರಿಗಳ ತಡೆ

ದಿಲ್ಜಿತ್ ಅವರ ಇಂದೋರ್ ಕಾರ್ಯಕ್ರಮಕ್ಕೂ ಮುನ್ನವೇ ಹಾಡುಗಳ ವಿಚಾರವಾಗಿ ವಿವಾದ ಆರಂಭವಾಗಿತ್ತು. ನವೆಂಬರ್ 6ರಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸಿ-21 ಮಾಲ್ ಆಡಳಿತ ಮಂಡಳಿಗೆ ಸೂಚನೆ ನೀಡಿ, ಕಾರ್ಯಕ್ರಮದಲ್ಲಿ ನಾಲ್ಕು ನಿರ್ದಿಷ್ಟ ಹಾಡುಗಳನ್ನು ಹಾಡದಂತೆ ಕ್ರಮ ಕೈಗೊಳ್ಳಲು ತಿಳಿಸಿದ್ದರು.

ಪಟಿಯಾಲ ಪೆಗ್, '5 ತಾರಾ ಥೀಕೆ', 'ಜೀಬ್ ವಿಚೋ ಲಬ್ಬಿಯಾ' ಮತ್ತು 'ಜಟ್ ಉತ್ಥೇ ಫೈರ್ ಕರ್ದಾ ಜಿತ್ಥೇ ಪಾಬಂದಿ ಹಥಿಯಾರಾಂ ದಿ' ಹಾಡುಗಳ ಸಾಹಿತ್ಯದಲ್ಲಿ ಮದ್ಯಪಾನ, ಮಾದಕ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳ ಬಳಕೆಯನ್ನು ವೈಭವೀಕರಿಸುವ ಅಂಶಗಳಿವೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಚಂಡೀಗಢದ ಪ್ರಾಧ್ಯಾಪಕ ಡಾ. ಪಂಡಿತರಾವ್ ಧರೆನ್ನಾವರ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈ ಸೂಚನೆ ಹೊರಡಿಸಲಾಗಿತ್ತು. 2019ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ಆದೇಶವನ್ನೂ ಅಧಿಕಾರಿಗಳು ಉಲ್ಲೇಖಿಸಿದ್ದರು.

ಇದನ್ನೂ ಓದಿ : ಮನೆಯಲ್ಲಿ 56 ಎಟಿಎಂ ಕಾರ್ಡ್ ಜಪ್ತಿ: ಸೈಬರ್ ವಂಚಕನಿಗೆ ಬ್ರೇಕ್‌ಹಾಕಿದ ಮುಂಬೈ ಕ್ರೈಂ ಬ್ರಾಂಚ್! Mumbai Crime Branch

ಕಾರ್ಯಕ್ರಮಕ್ಕೂ ಮುನ್ನ ಬಾಂಬ್ ಬೆದರಿಕೆ

ಇಷ್ಟೇ ಅಲ್ಲದೆ, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದೋರ್‌ನ ಮೂರು ಖಾಸಗಿ ಶಾಲೆಗಳು ಹಾಗೂ ಮೇಯರ್ ಪುಷ್ಯಮಿತ್ರ ಭಾರ್ಗವ ಅವರ ಕಚೇರಿಗೆ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದಿದ್ದವು. ನವೆಂಬರ್ 15ರ ಕಾರ್ಯಕ್ರಮದ ವೇಳೆ ಸ್ಫೋಟ ನಡೆಸುವುದಾಗಿ ಸಂದೇಶದಲ್ಲಿ ಎಚ್ಚರಿಸಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶಾಲೆಗಳಲ್ಲಿ ಪರಿಶೀಲನೆ ನಡೆಸಿದರೂ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ. ಮೇಲ್ನೋಟಕ್ಕೆ ಇವು ಹುಸಿ ಬೆದರಿಕೆಗಳಾಗಿರುವ ಸಾಧ್ಯತೆಯಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಾಜೇಶ್ ದಂಡೋತಿಯ ತಿಳಿಸಿದ್ದಾರೆ. ಇ-ಮೇಲ್ ಕಳುಹಿಸಿದವರ ಪತ್ತೆಗೆ ಅಪರಾಧ ವಿಭಾಗದ ಪೊಲೀಸರು ತಾಂತ್ರಿಕ ತನಿಖೆ ನಡೆಸುತ್ತಿದ್ದಾರೆ.

ದೆಹಲಿ, ಬಿಹಾರದಲ್ಲೂ ಎದುರಾಗಿದ್ದ ಸಮಸ್ಯೆ

ದಿಲ್ಜಿತ್ ಅವರ ಸಂಗೀತ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವಾದ ಇದೇ ಮೊದಲಲ್ಲ. ಅಕ್ಟೋಬರ್ 30ರಂದು ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೂ ಭದ್ರತೆ ಮತ್ತು ಸಂಚಾರ ನಿರ್ವಹಣೆಯ ಕಾರಣದಿಂದ ಆರಂಭದಲ್ಲಿ ಅನುಮತಿ ವಿಳಂಬವಾಗಿತ್ತು. ಆಯೋಜಕರು ಪರಿಷ್ಕೃತ ಭದ್ರತಾ ಯೋಜನೆ ಸಲ್ಲಿಸಿದ ಬಳಿಕ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ದೊರೆತಿತ್ತು. ಇತ್ತೀಚೆಗೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಮಾತನಾಡಿದ್ದ ದಿಲ್ಜಿತ್, ಬಿಹಾರದಲ್ಲಿ ಸಂಗೀತ ಕಾರ್ಯಕ್ರಮ ನಡೆಸುವ ಯೋಜನೆ ಕೈಗೂಡದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದರು. ಕಾರ್ಯಕ್ರಮಕ್ಕೆ ಬರುವ ಜನಸಂದಣಿಯನ್ನು ನಿರ್ವಹಿಸುವ ಹೊಣೆಗಾರಿಕೆ ಯಾರದ್ದು ಎಂಬ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ತಿಳಿಸಿದ್ದರು.

ಮುಂದಿನ ಕಾರ್ಯಕ್ರಮ ಬೆಂಗಳೂರಿನಲ್ಲಿ

ದಿಲ್ಜಿತ್ ಅವರ ಔರಾ ಇಂಡಿಯಾ ಟೂರ್ 2026 ಮುಂದುವರಿಯಲಿದೆ. ನವೆಂಬರ್ 21ರಂದು ಅಹಮದಾಬಾದ್, ನವೆಂಬರ್ 27ರಂದು ಮುಂಬೈ ಹಾಗೂ ನವೆಂಬರ್ 29ರಂದು ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಂತರ ಡಿಸೆಂಬರ್ 5ರಂದು ಲಖನೌ, ಡಿಸೆಂಬರ್ 12ರಂದು ಚಂಡೀಗಢ ಮತ್ತು ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ, (ಏಜೆನ್ಸೀಸ್​)