ಹಿಂದೂಗಳ ಹತ್ಯೆ ವ್ಯವಸ್ಥಿತ ಸಂಚಲ್ಲ: ಕೋಮು ಸೌಹಾರ್ದತೆ ಕೆಡಿಸಲು ಭಾರತದ ಯತ್ನ ಎಂದ ಬಾಂಗ್ಲಾ 
ದೇಶ

ಹಿಂದೂಗಳ ಹತ್ಯೆ ವ್ಯವಸ್ಥಿತ ಸಂಚಲ್ಲ: ಕೋಮು ಸೌಹಾರ್ದತೆ ಕೆಡಿಸಲು ಭಾರತದ ಯತ್ನ ಎಂದ ಬಾಂಗ್ಲಾ | Bangladesh

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಇತರ ಸಮುದಾಯಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ವ್ಯಕ್ತಪಡಿಸಿದ ಕಳವಳವನ್ನು ಬಾಂಗ್ಲಾದೇಶ(Bangladesh) ಸರ್ಕಾರವು ಭಾನುವಾರ ತಿರಸ್ಕರಿಸಿದೆ. ಅಲ್ಲದೆ, ಭಾರತದ ಹೇಳಿಕೆಗಳು ದಾರಿತಪ್ಪಿಸುವಂತಿವೆ ಎಂದು ಬಾಂಗ್ಲಾ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.

ಭಾರತದ ಆರೋಪವೇನು..?

ಕಳೆದ ಶುಕ್ರವಾರ ಮಾತನಾಡಿದ್ದ ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್, ಬಾಂಗ್ಲಾದೇಶದಲ್ಲಿ ಹಿಂದೂಗಳು, ಬೌದ್ಧರು ಮತ್ತು ಕ್ರೈಸ್ತರ ಮೇಲೆ ನಡೆಯುತ್ತಿರುವ ನಿರಂತರ ಹಗೆತನ ಮತ್ತು ಹಿಂಸಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ, ಮೈಮೆನ್ಸಿಂಗ್‌ನಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್‌ನ ಗುಂಪು ಹತ್ಯೆಯನ್ನು ಭಾರತ ಉಗ್ರವಾಗಿ ಖಂಡಿಸಿತ್ತು.

ಬಾಂಗ್ಲಾದೇಶದ ಪ್ರತ್ಯುತ್ತರ

ಭಾರತದ ಈ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಬಾಂಗ್ಲಾ ವಿದೇಶಾಂಗ ವಕ್ತಾರ ಎಸ್‌ಎಂ ಮಹಬೂಬುಲ್ ಆಲಂ, ಭಾರತದ ಹೇಳಿಕೆಗಳು ವಾಸ್ತವಕ್ಕೆ ದೂರವಾಗಿವೆ. ಅಲ್ಲದೆ, ಬಾಂಗ್ಲಾದ ಕೋಮು ಸೌಹಾರ್ದತೆಯ ಸಂಪ್ರದಾಯವನ್ನು ತಪ್ಪಾಗಿ ಬಿಂಬಿಸುವ ಪ್ರಯತ್ನವಿದು ಎಂದು ಹೇಳಿದ್ಧಾರೆ.
ಬಾಂಗ್ಲಾದೇಶ ಸರ್ಕಾರವು ಇತ್ತೀಚಿನ ಘಟನೆಗಳನ್ನು ವ್ಯವಸ್ಥಿತ ದಾಳಿಗಳೆಂದು ಒಪ್ಪಲು ನಿರಾಕರಿಸಿದೆ. ಇತ್ತೀಚಿನ ಘಟನೆಗಳು ಬಿಡಿಬಿಡಿಯಾಗಿ ನಡೆದ ಅಪರಾಧ ಕೃತ್ಯಗಳು ಮಾತ್ರವಾಗಿವೆ. ಇವುಗಳನ್ನು ಅಲ್ಪಸಂಖ್ಯಾತರ ಮೇಲಿನ ವ್ಯವಸ್ಥಿತ ಕಿರುಕುಳ ಎಂದು ಬಿಂಬಿಸಿ ಭಾರತದಲ್ಲಿ ಬಾಂಗ್ಲಾ ವಿರೋಧಿ ಭಾವನೆ ಮೂಡಿಸಲಾಗುತ್ತಿದೆ ಎಂದು ಆರೋಪಿಸಿದೆ.

ದೀಪು ದಾಸ್ ಮತ್ತು ಅಮೃತ್ ಮಂಡಲ್ ಪ್ರಕರಣ

ರಾಜ್‌ಬಾರಿಯಲ್ಲಿ ನಡೆದ ಅಮೃತ್ ಮಂಡಲ್ ಹತ್ಯೆಯ ಬಗ್ಗೆ ಪ್ರಸ್ತಾಪಿಸಿದ ಬಾಂಗ್ಲಾ, ಅತನು ಒಬ್ಬ ಪಟ್ಟಭದ್ರ ಅಪರಾಧಿಯಾಗಿದ್ದ. ಅಲ್ಲದೆ, ಸುಲಿಗೆ ಮಾಡುತ್ತಿದ್ದಾಗ ನಡೆದ ಘಟನೆಯಲ್ಲಿ ಅವನು ಮೃತಪಟ್ಟಿದ್ದಾನೆ. ಇದರಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಅಲ್ಪಸಂಖ್ಯಾತರ ರಕ್ಷಣೆ ಮಾಡಿ: ಬಾಂಗ್ಲಾಕ್ಕೆ ಅಮೆರಿಕದ ಖಡಕ್ ಸೂಚನೆ

ಅಮೆರಿಕ ವಿದೇಶಾಂಗ ಇಲಾಖೆ ಖಂಡನೆ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂಗಳು, ಬೌದ್ಧರು ಮತ್ತು ಕ್ರೈಸ್ತರ ಸುರಕ್ಷತೆಯ ಬಗ್ಗೆ ಅಮೆರಿಕ ವಿದೇಶಾಂಗ ಇಲಾಖೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಧಾರ್ಮಿಕ ಅಸಹಿಷ್ಣುತೆಯಿಂದ ನಡೆಯುವ ಯಾವುದೇ ಹಿಂಸಾಚಾರವನ್ನು ಒಪ್ಪಲು ಸಾಧ್ಯವಿಲ್ಲ. ಬಾಂಗ್ಲಾದ ಮಧ್ಯಂತರ ಸರ್ಕಾರವು ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕು ಎಂದು ಸೂಚಿಸಿದೆ.
ಹಿಂದೂ ಯುಕಕ ದೀಪು ದಾಸ್​ ಹತ್ಯೆಗೆ ಕಾರಣರಾದವರನ್ನು ಪತ್ತೆಹಚ್ಚಿ ನ್ಯಾಯಾಂಗದ ಮುಂದೆ ತರಲು ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗೆ ಅಮೆರಿಕ ಕರೆ ನೀಡಿದೆ.

ಅಮೆರಿಕದ ಸಂಸದ ಸುಹಾಸ್ ಸುಬ್ರಹ್ಮಣ್ಯಂ ಕಿಡಿ

ಬಾಂಗ್ಲಾ ಹಿಂಸಾಚಾರದ ಬಗ್ಗೆ ಮಾತನಾಡಿರುವ ವರ್ಜೀನಿಯಾದ ಅಮೆರಿಕನ್ ಸಂಸದ ಸುಹಾಸ್ ಸುಬ್ರಹ್ಮಣ್ಯಂ, ದೇವದೂಷಣೆಯ ನಿಂದನೆಯ ಸುಳ್ಳು ಆರೋಪ ಹೊರಿಸಿ ಹಿಂದೂ ಕಾರ್ಮಿಕ ದೀಪು ಚಂದ್ರ ದಾಸ್ ಹತ್ಯೆ ಮಾಡಿರುವುದು ಅತ್ಯಂತ ಭೀಕರ ಕೃತ್ಯವಾಗಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಬಾಂಗ್ಲಾ ಸರ್ಕಾರದಲ್ಲಿ ಆಗುತ್ತಿರುವ ಬದಲಾವಣೆಗಳು ಹಿಂದೂ ದೇವಾಲಯ ಮತ್ತು ಮನೆಗಳ ಮೇಲೆ ದಾಳಿಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).