ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಪ್ತನೆಂದು ಹೇಳಿಕೊಂಡು 32 ಲಕ್ಷ ವಂಚಿಸಿದ್ದ ಸೂರ್ಯಾಭಾಯ್ ಅರೆಸ್ಟ್
- ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಪ್ತನೆಂದು ಹೇಳಿಕೊಂಡು 32 ಲಕ್ಷ ವಂಚಿಸಿದ್ದ ಸೂರ್ಯಾಭಾಯ್ ಅರೆಸ್ಟ್
- ತಾಮ್ರ, ಸ್ಟೀಲ್ ಸರಕ್ಕೆ ಗೋಲ್ಡ್ ಪಾಲಿಶ್ ಹಾಕಿ ಕೋಟ್ಯಧಿಪತಿಯಂತೆ ಪೋಸ್ ಕೊಡ್ತಿದ್ದ ಸೂರ್ಯಾಭಾಯ್
- ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ನಂಬಿಸಿ ಜನರಿಗೆ ಪಂಗನಾಮ
ಹೈದರಾಬಾದ್: ಕತ್ತಲ್ಲಿ ಕೆಜಿಗಟ್ಟಲೆ ಬಂಗಾರದ ಚೈನ್ನ್ನು ಧರಿಸಿ, ನಾನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಪ್ತನೆಂದು ಹೇಳಿಕೊಂಡು ಜನರಿಗೆ ಸುಮಾರು 32 ಲಕ್ಷ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸೂರ್ಯಾಭಾಯ್ (Instagram Reels Star Suryabhai Arrest) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ನನಗೆ ತೆಲಂಗಾಣ ಸಿಎಂ ಗೊತ್ತಿದ್ದಾರೆ, ಸಿಟಿಯಲ್ಲಿರುವ ಎಲ್ಲಾ ಅಧಿಕಾರಿಗಳ ಪರಿಚಯ ನನಗಿದೆ ಕಡೆಮೆ ಬೆಲೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಚಿನ್ನವನ್ನು ತಂದುಕೊಡುವುದಾಗಿ ನಂಬಿಸಿ ಮೋಸ ಮಾಡಿದ ಹಿನ್ನಲೆ ಸೂರ್ಯಾಭಾಯ್ ಪೊಲೀಸರ ಅತಿಥಿಯಾಗಿದ್ದಾನೆ.
ಸೂರ್ಯಾ ಧರಿಸುತ್ತಿದ್ದದ್ದೆ ನಕಲಿ ಚಿನ್ನ!
ಇನ್ಸ್ಟಾಗ್ರಾಮ್ನಲ್ಲಿ ಕುತ್ತಿಗೆ ಮೇಲೆ ಕೆಜಿಗಟ್ಟಲೇ ಚಿನ್ನವನ್ನು ಧರಿಸಿ ರೀಲ್ಸ್ ಮಾಡುತ್ತಿದ್ದ ಸೂರ್ಯಾಭಾಯ್ ನನಗೆ ಕಸ್ಟಮ್ ಅಧಿಕಾರಿಗಳ ಪರಿಚಯವಿದೆ. ಅಷ್ಟೇ ಏಕೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನನ್ನ ಗೆಳೆಯ ಎಂದೆಲ್ಲಾ ಹೇಳಿ ಜನರಿಗೆ ಕಡಿಮೆ ದರದಲ್ಲಿ ಚಿನ್ನ ತಂದು ಕೊಡುವುದಾಗಿ ಹೇಳಿ ಪಂಗನಾಮ ಹಾಕಿದ್ದಾನೆ.
ನಂತರ ಪೊಲೀಸರಲ್ಲಿ ದೂರು ದಾಖಲಾಗಿದ್ದು, ಇನ್ಸ್‌ಪೆಕ್ಟರ್ ಎಸ್. ರವಿಂಡೆ ಇವನನ್ನು ವಿಚಾರಣೆ ಮಾಡಿದಾಗ, ಸೂರ್ಯಾಭಾಯ್ ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಧರಿಸುತ್ತಿದ್ದದ್ದೆ ನಕಲಿ ಚಿನ್ನ ಎಂದು ತಿಳಿದುಬಂದಿದೆ. ತಾಮ್ರ ಮತ್ತು ಸ್ಟೀಲ್ ಲೋಹಕ್ಕೆ ಚಿನ್ನದ ಪಾಲಿಶ್ ಮಾಡಿದ ಸರವನ್ನು ಧರಿಸಿ ತಾನೊಬ್ಬ ಆಗರ್ಭ ಶ್ರೀಮಂತನೆಂದು ಪೋಸ್ ಕೊಡುತ್ತಿದ್ದ ಸೂರ್ಯಾಭಾಯ್ ಈಗ ಕಂಬಿ ಏಣಿಸುತ್ತಾ ನಿಲ್ಲುವಂತಾಗಿದೆ.
ಜನರೇ ವಂಚಕರ ಬಲೆಗೆ ಬೀಳಬೇಡಿ!
ಈ ಸೂರ್ಯಾ ಕಡಿಮೆ ಬೆಲೆಗೆ ಚಿನ್ನವನ್ನು ತಂದು ಕೊಡುವುದಾಗಿ ನಂಬಿಸಿ, ಅಡ್ವಾನ್ಸ್ ನೀಡಿದ ಬಳಿಕ ಅವರ ನಂಬರ್ನ್ನು ಬ್ಲಾಕ್ ಮಾಡುತ್ತಿದ್ದನಂತೆ. ನಂತರ ಇವನ ವಿರುದ್ಧ ಸರಣಿ ದೂರುಗಳು ಬಂದ ಬಳಿಕ ಪೊಲೀಸರು ಇವನನ್ನು ವಶಕ್ಕೆ ಪಡೆದಿದ್ದಾರೆ.
ಸೋಷಿಯಲ್ ಮೀಡಿಯಾನಲ್ಲಿ ನಾನು ದೊಡ್ಡ ಉದ್ಯಮಿ, ನಾನು ರಿಯಲ್ ಎಸ್ಟೇಟ್ ಬ್ರೋಕರ್, ನಾನು ಚಿನ್ನದ ಡೀಲರ್ ಎಂದು ಸುಮಾರು ಜನ ಪೋಸ್ ಕೊಡುತ್ತಾರೆ. ಇವರನ್ನು ಕಣ್ಮುಚ್ಚಿ ನಂಬಿ ಮೋಸ ಹೋಗಬೇಡಿ. ಸ್ವಲ್ಪ ವಿವೇಕವನ್ನು ಉಪಯೋಗಿಸಿ, ಅನುಮಾನ ಬಂದರೆ ಮಾಹಿತಿ ನೀಡಿ ಎಂದು ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ, (ಏಜನ್ಸೀಸ್).