Ketan Agarwal Murder Case
ಪುಣೆ: ಮಹಾರಾಷ್ಟ್ರದ ಲೋಹಗಢ ಕೋಟೆಯ ಬಳಿ ಜೂನ್ 18 ರಂದು ನಡೆದ ಯುವ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ (Ketan Agarwal Murder Case) ಸಂಬಂಧಿಸಿದಂತೆ, ಸಂತ್ರಸ್ತನ ತಂದೆ ವಿಶಾಲ್ ಅಗರ್ವಾಲ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಮೇಲ್ ಮೂಲಕ ಪತ್ರ ಬರೆದು ಶೀಘ್ರ ತನಿಖೆ ಮತ್ತು ತ್ವರಿತ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ರಾಷ್ಟ್ರಪತಿಗಳ ಕಾರ್ಯದರ್ಶಿಗೆ ಕಳುಹಿಸಲಾದ ಈ ಇಮೇಲ್‌ನಲ್ಲಿ ಕೇತನ್ ತಂದೆ, ತಾವು ಮಗನನ್ನು ಕಳೆದುಕೊಂಡು ಇಡೀ ಕುಟುಂಬವೇ ಕುಗ್ಗಿ ಹೋಗಿರುವ ಬಗ್ಗೆ ಮತ್ತು ಮಗನ ಸಾವಿನ ದುಃಖದಲ್ಲೇ ಕೇವಲ 20 ದಿನಗಳ ಒಳಗೆ ಅವರ ತಂದೆಯೂ ಸಹ ಮರಣ ಹೊಂದಿರುವ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಆರೋಪಿಗಳಿಗೆ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ನ್ಯಾಯ ವಿಳಂಬವಾದಷ್ಟೂ ಸಂತ್ರಸ್ತರ ಕುಟುಂಬಗಳ ಅನುಭವಿಸುವ ನರಕಯಾತನೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದಲ್ಲೇನಿದೆ..?
ನಾನು ಈ ಇಮೇಲ್ ಅನ್ನು ನೋವು ಮತ್ತು ಭರವಸೆಯಿಂದ ತುಂಬಿದ ಹೃದಯದಿಂದ ಬರೆಯುತ್ತಿದ್ದೇನೆ. ನಾನು ಒಬ್ಬ ಉದ್ಯಮಿಯಾಗಿ ಅಥವಾ ಪ್ರಭಾವಿ ವ್ಯಕ್ತಿಯಾಗಿ ಇದನ್ನು ಬರೆಯುತ್ತಿಲ್ಲ, ಒಬ್ಬ ತಂದೆ, ತನ್ನ ಮಗನಿಗಾಗಿ ನ್ಯಾಯ ಕೇಳುವವನಾಗಿ ಬರೆಯುತ್ತಿದ್ದೇನೆ. ನನ್ನ ಮಗ ಕೇತನ್‌ನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ. ಅಂದಿನಿಂದ ನಮ್ಮ ಬದುಕು ಸಂಪೂರ್ಣವಾಗಿ ಬದಲಾಗಿದೆ. ಕೇತನ್‌ಗೆ ಯಾವಾಗ ನ್ಯಾಯ ಸಿಗುತ್ತದೆ..? ಪ್ರತಿದಿನ ಬೆಳಗ್ಗೆ ನಾವು ಇದೇ ನೋವಿನೊಂದಿಗೆ ಎದ್ದೇಳುತ್ತೇವೆ ಮತ್ತು ಪ್ರತಿ ರಾತ್ರಿ ಅದೇ ಪ್ರಶ್ನೆಯೊಂದಿಗೆ ಮಲಗುತ್ತೇವೆ ಎಂದು ಬರೆದಿದ್ದಾರೆ.
ನೋವು ಅಲ್ಲಿಗೇ ನಿಲ್ಲಲಿಲ್ಲ. ಕೇತನ್‌ನನ್ನು ಕಳೆದುಕೊಂಡ ಕೇವಲ 20 ದಿನಗಳಲ್ಲೇ ನಾನು ನನ್ನ ತಂದೆಯನ್ನೂ ಕಳೆದುಕೊಂಡೆ. ಅವರು ತಮ್ಮ ಮೊಮ್ಮಗನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಕೇತನ್ ಸಾವಿನ ಆಘಾತ ಮತ್ತು ದುಃಖವನ್ನು ತಡೆದುಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಅವರ ಬಿಪಿ ಕುಸಿದು, ಅವರ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿತು. ಕೇವಲ 20 ದಿನಗಳ ಅಂತರದಲ್ಲಿ ನಾನು ನನ್ನ ಮಗ ಮತ್ತು ತಂದೆ ಇಬ್ಬರನ್ನೂ ಕಳೆದುಕೊಂಡೆ. ನಮ್ಮ ಕುಟುಂಬ ಸಂಪೂರ್ಣವಾಗಿ ಕುಸಿದಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಾವು ಯಾವುದೇ ವಿಶೇಷ ಸೌಲಭ್ಯವನ್ನು ಕೇಳುತ್ತಿಲ್ಲ. ನಾವು ಕೇವಲ ಈ ಪ್ರಕರಣವನ್ನು ಫಾಸ್ಟ್-ಟ್ರಾಕ್ ಕೋರ್ಟ್‌ನಲ್ಲಿ ನಡೆಸಿ ಆದಷ್ಟು ಬೇಗ ನ್ಯಾಯ ಸಿಗಬೇಕೆಂದು ಬಯಸುತ್ತಿದ್ದೇವೆ. ಈ ಕೃತ್ಯ ಎಸಗಿದ ಜನರಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು. ನ್ಯಾಯ ವಿಳಂಬವಾದರೆ ಅದು ನಮ್ಮಂತಹ ಕುಟುಂಬಗಳ ನೋವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೇತನ್ ಮತ್ತೆ ಮರಳಿ ಬರಲು ಸಾಧ್ಯವಿಲ್ಲ. ಆದರೆ ಇಂತಹ ಕ್ರೂರ ಅಪರಾಧ ಎಸಗಿದ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಅಥವಾ ಕಾನೂನಿನ ಪರಿಣಾಮಗಳನ್ನು ವಿಳಂಬಗೊಳಿಸಬಹುದು ಎಂದು ಭಾವಿಸಬಾರದು. ಕಠಿಣ ಶಿಕ್ಷೆಯು ನಮಗೆ ಸ್ವಲ್ಪ ನೆಮ್ಮದಿಯನ್ನು ನೀಡುವುದಲ್ಲದೆ, ಮುಗ್ಧರ ಜೀವಕ್ಕೆ ಬೆಲೆ ಇದೆ ಮತ್ತು ಇಂತಹ ಅಪರಾಧಗಳನ್ನು ಎಂದಿಗೂ ಸಹಿಸುವುದಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೈಮುಗಿದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ದಯವಿಟ್ಟು ಈ ವಿಷಯದಲ್ಲಿ ವೈಯಕ್ತಿಕವಾಗಿ ಗಮನ ಹರಿಸಿ ಆದಷ್ಟು ಬೇಗ ನ್ಯಾಯ ಸಿಗುವಂತೆ ಮಾಡಿ. ದಯವಿಟ್ಟು ನನ್ನ ಮಗನ ಪ್ರಕರಣ ಕೇವಲ ಮತ್ತೊಂದು ಫೈಲ್ ಆಗಿ ಉಳಿಯಲು ಬಿಡಬೇಡಿ. ಈ ಕೇಸ್‌ನ ಹಿಂದೆ ಎಲ್ಲವನ್ನೂ ಕಳೆದುಕೊಂಡ ಒಂದು ಕುಟುಂಬವಿದೆ ಎಂದು ಅವರು ಅತ್ಯಂತ ಭಾವುಕರಾಗಿ ವಿನಂತಿಸಿದ್ದಾರೆ.
ಕೇತನ್ ಅಗರ್ವಾಲ್ ಅವರನ್ನು ಜೂನ್ 18 ರಂದು ಪುಣೆ ಬಳಿಯ ಲೋಹಗಢ ಕೋಟೆಯಲ್ಲಿ ಅವರ ಭಾವಿ ಪತ್ನಿ ಸಿಯಾ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ(ಏಜೆನ್ಸೀಸ್).