CCTV 
ದೇಶ

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆಗೇ ಸೀಮೆಎಣ್ಣೆ ಬಾಂಬ್ ಎಸೆದ ಕಿರಾತಕ: ಕೃತ್ಯ CCTVಯಲ್ಲಿ ಸೆರೆ!

ಕೊಯಮತ್ತೂರು: ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಉದ್ರಿಕ್ತ ಪ್ರೇಮಿಯೊಬ್ಬ ಯುವತಿಯ ಮನೆಗೇ ಸೀಮೆಎಣ್ಣೆ ಬಾಂಬ್ ಎಸೆದು ಕೊಲೆಗೆ ಯತ್ನಿಸಿರುವ ದಿಗಿಲು ಮೂಡಿಸುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ಈ ದಾಳಿ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯಗಳು ಸ್ಥಳೀಯ ಸಿಸಿಟಿವಿ(CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸೀಮೆಎಣ್ಣೆ ತುಂಬಿದ್ದ ಬಾಟಲಿಗಳಿಗೆ ಬೆಂಕಿ ಹಚ್ಚಿ ಯುವತಿಯ ಮನೆಯತ್ತ ಎಸೆಯಲಾಗಿದ್ದು, ದಾಳಿಯ ತೀವ್ರತೆಗೆ ಮನೆಯ ಮುಂಭಾಗದ ವರಂಡಾದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಬೆಂಕಿಯ ಜ್ವಾಲೆಗಳು ಮನೆಯ ಇತರೆ ಭಾಗಗಳಿಗೂ ವ್ಯಾಪಿಸಿದ್ದು, ತಕ್ಷಣವೇ ಎಚ್ಚೆತ್ತ ಕುಟುಂಬಸ್ಥರು ಮತ್ತು ನೆರೆಹೊರೆಯವರು ಧಾವಿಸಿ ಬಂದು ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

31 ಕ್ರಿಮಿನಲ್ ಪ್ರಕರಣಗಳಿದ್ದ ಕಿರಾತಕ!

ಪೊಲೀಸ್ ತನಿಖೆಯ ಪ್ರಕಾರ, ದಾಳಿ ನಡೆಸಿದ ಆರೋಪಿಯನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಈತನ ಹಿನ್ನೆಲೆಯನ್ನು ಕೆದಕಿದಾಗ ಬೆಚ್ಚಿಬೀಳುವ ಮಾಹಿತಿ ಹೊರಬಿದ್ದಿದೆ. ಆರೋಪಿ ಕಾರ್ತಿಕ್ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೊಬ್ಬರಿ 31 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಈತ ರೌಡಿಶೀಟರ್ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಯುವತಿಯು ಆತನೊಂದಿಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಳು ಎನ್ನಲಾಗಿದೆ.

ಕೊಲೆ ಬೆದರಿಕೆ ಹಾಕಿದ್ದ ಉನ್ಮಾದಿ

ಯುವತಿ ತನ್ನಿಂದ ದೂರವಾಗುತ್ತಿದ್ದಂತೆ ಆಕ್ರೋಶಗೊಂಡ ಕಾರ್ತಿಕ್, ನಿರಂತರವಾಗಿ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದನು. "ನನ್ನ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೆ ನಿನ್ನನ್ನು ಹಾಗೂ ನಿನ್ನ ಕುಟುಂಬವನ್ನು ಜೀವಂತವಾಗಿ ಸುಟ್ಟು ಹಾಕುತ್ತೇನೆ" ಎಂದು ಘಟನೆಗೂ ಮುನ್ನ ಆತ ಯುವತಿಗೆ ನೇರವಾಗಿ ಕೊಲೆ ಬೆದರಿಕೆ ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಹೇಳಿದಂತೆಯೇ ಭಾನುವಾರ ರಾತ್ರಿ ಸೀಮೆಎಣ್ಣೆ ಬಾಂಬ್‌ಗಳೊಂದಿಗೆ ಬಂದು ಈ ವಿಚ್ಛಿದ್ರಕಾರಕ ಕೃತ್ಯ ಎಸಗಿದ್ದಾನೆ.

ತನಿಖೆ ಚುರುಕುಗೊಳಿಸಿದ ಪೊಲೀಸರು

ಘಟನೆಯ ನಂತರ ಇಡೀ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮಾಹಿತಿ ಪಡೆದ ಕೊಯಮತ್ತೂರು ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿ ಕಾರ್ತಿಕ್ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ. ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನು ಈ ಘಟನೆ ಮತ್ತೊಮ್ಮೆ ಮುಂಚೂಣಿಗೆ ತಂದಿದೆ,(ಏಜೆನ್ಸೀಸ್).