ಬೆಂಗಳೂರು/ದೆಹಲಿ: ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮೀಕ್ಷೆಯನ್ನು ಉಲ್ಲೇಖಿಸಿರುವ ಬಿಜೆಪಿ ನಾಯಕರುಗಳು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2024 ರ ಲೋಕಸಭಾ ಚುನಾವಣೆಯ ಕುರಿತಾದ ಸಮೀಕ್ಷೆಯ ಫಲಿತಾಂಶಗಳನ್ನು ಕರ್ನಾಟಕ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ ಎನ್ನಲಾಗಿದ್ದು, ಇದರಲ್ಲಿ ಹೆಚ್ಚಿನ ಮತದಾರರು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ನಂಬುತ್ತಾರೆ ಎನ್ನುವುದನ್ನು ತೋರಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿ
ಸಮೀಕ್ಷೆಯ ವರದಿಯ ಪತ್ರಿಕೆಯ ತುಣುಕನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಕಾಂಗ್ರೆಸ್‌ನ ಮತ ಕಳ್ಳತನ ಮತ್ತೊಮ್ಮೆ ಬಯಲಾಗಿದೆ, ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮೀಕ್ಷಾ ವರದಿಯು, ಭಾರತದಲ್ಲಿ ಚುನಾವಣೆಗಳು ಮುಕ್ತವಾಗಿ ಮತ್ತು ನ್ಯಾಯಯುತವಾಗಿ ನಡೆಯುತ್ತವೆ ಎನ್ನುವುದನ್ನು ಬಹುಪಾಲು ಜನರು ನಂಬುತ್ತಾರೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ
ಇದೇ ವಿಷಯವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ರಾಹುಲ್ ಗಾಂಧಿ ಇವಿಎಂಗಳು ಮತ್ತು ಕೇಂದ್ರ ಚುನಾವಣಾ ಆಯೋಗದ (ಇಸಿಐ) ಬಗ್ಗೆ ನಿರಂತರವಾಗಿ ಸುಳ್ಳು ಹೇಳುತ್ತಲೇ ಇದ್ದಾರೆ, ಆದರೆ ಕರ್ನಾಟಕದಲ್ಲಿನ ಅವರ ಸರ್ಕಾರವೇ ಸತ್ಯ ಪರಿಶೀಲಿಸಿದೆ ಎಂದು ಹೇಳಿದ್ದಾರೆ. ಕರ್ನಾಟಕದ ಮತದಾರರು ಇವಿಎಂಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ದೇಶದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತವೆ ಎಂದು ನಂಬುತ್ತಾರೆ ಎನ್ನುವುದನ್ನು ಸಮೀಕ್ಷೆ ಹೇಳುತ್ತದೆ ಎಂದು ಪೂನವಾಲಾ ಬರೆದುಕೊಂಡಿದ್ದಾರೆ.
ಭಾರತದಲ್ಲಿ ಚುನಾವಣೆಗಳು ಮುಕ್ತವಾಗಿ ಮತ್ತು ನ್ಯಾಯ ಸಮ್ಮತವಾಗಿ ನಡೆಯುತ್ತವೆ ಎಂದು ಹೆಚ್ಚಿನವರು ನಂಬುತ್ತಾರೆ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಇದಕ್ಕೆ ಶೇ. 84.55% ನಾಗರಿಕರು ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. 2023 ರಲ್ಲಿ 77.9% ರಷ್ಟಿದ್ದಿದ್ದು, ಈಗ 83.61% ಕ್ಕೆ ಏರಿಕೆಯಾಗಿದೆ ಎಂದರು.
ಸಮೀಕ್ಷೆ ಹೇಳುವುದೇನು..?
2024 ರ ಲೋಕಸಭಾ ಚುನಾವಣೆಗಳು ನಾಗರಿಕರ ಜ್ಞಾನ, ವರ್ತನೆ ಮತ್ತು ಅಭ್ಯಾಸದ ಅಂತಿಮ ಸಮೀಕ್ಷೆಯ ಮೌಲ್ಯಮಾಪನ ಎಂಬ ಶೀರ್ಷಿಕೆಯ ಸಮೀಕ್ಷೆಯನ್ನು ಕರ್ನಾಟಕ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಪ್ರಾಧಿಕಾರ (KMEA) ಪ್ರಕಟಿಸಿದ್ದು, 102 ವಿಧಾನಸಭಾ ಕ್ಷೇತ್ರಗಳಿಂದ 5,100 ಜನರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಪೈಕಿ ಶೇ. 91.31 ರಷ್ಟು ಜನರು ಭಾರತದಲ್ಲಿ ಚುನಾವಣೆಗಳು ಮುಕ್ತವಾಗಿವೆ ಎಂದು ನಂಬಿದ್ದಾರೆ. 83.61 ಜನರು ಇವಿಎಂಗಳಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಅದು ಹೇಳಿದೆ.
ಮತದಾರರ ಪಟ್ಟಿಯಲ್ಲಿ ಸೇರಿಸಲಾದ 4,272 ಜನರಲ್ಲಿ, ಎಲ್ಲಾ ವಿಭಾಗಗಳ ಬಹುಪಾಲು (95.44%) ಪ್ರತಿಕ್ರಿಯಿಸಿದವರು ತಮ್ಮ ಹೆಸರುಗಳನ್ನು ಸರಿಯಾಗಿ ಪಟ್ಟಿ ಮಾಡಲಾಗಿದೆ ಎಂದು ದೃಢಪಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ(ಏಜೆನ್ಸೀಸ್).