ಕೌನ್ ಬನೇಗಾ ಕರೋಡ್‌ಪತಿಯಲ್ಲಿ 7 ಕೋಟಿ ಗೆಲ್ಲಲು ಇನ್ನೊಂದೇ ಮೆಟ್ಟಿಲು 
ದೇಶ

24 ರೂಪಾಯಿ ಹಿಡಿದು ಮುಂಬೈಗೆ ಬಂದಿದ್ದ ಯುವಕ ಈಗ ಕೋಟ್ಯಾಧಿಪತಿ! ಕೌನ್ ಬನೇಗಾ ಕರೋಡ್‌ಪತಿಯಲ್ಲಿ 7 ಕೋಟಿ ಗೆಲ್ಲಲು ಇನ್ನೊಂದೇ ಮೆಟ್ಟಿಲು | KBC 18

ಮುಂಬೈ: ಕೌನ್ ಬನೇಗಾ ಕರೋಡ್‌ಪತಿ (KBC) 18ನೇ ಆವೃತ್ತಿಯಲ್ಲಿ ಜಲಗಾಂವ್ ಮೂಲದ ಭೂಷಣ್ ಠಾಕರೆ ಅವರ ಪಯಣವು ಛಲ, ಕುಟುಂಬದ ಬೆಂಬಲ ಮತ್ತು ಹಲವು ವರ್ಷಗಳ ಕಠಿಣ ಪರಿಶ್ರಮದ ಪ್ರೇರಣಾದಾಯಕ ಕಥೆಯಾಗಿದ್ದು, ಕೇವಲ 24 ರೂಪಾಯಿಗಳೊಂದಿಗೆ ಮುಂಬೈಗೆ ಬಂದಿಳಿದಿದ್ದ ಭೂಷಣ್, ಇಂದು ಹಾಟ್‌ಸೀಟ್‌ನಲ್ಲಿ ಕುಳಿತು ಈ ಸೀಸನ್‌ನಲ್ಲಿ 1 ಕೋಟಿ ರೂಪಾಯಿ ಗೆದ್ದ ಮೊದಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ ಹಾಗೂ 7 ಕೋಟಿ ರೂಪಾಯಿಯ ಪ್ರಶ್ನೆಯ ಸನಿಹದಲ್ಲಿದ್ದಾರೆ. ಅವರ ಈ ಸಾಧನೆಯು ಅವರ ಬದುಕಿನ ಸಂಘರ್ಷ ಮತ್ತು ಪೋಷಕರ ತ್ಯಾಗವನ್ನು ಬೆಳಕಿಗೆ ತಂದಿದೆ.

ಕೌನ್ ಬನೇಗಾ ಕರೋಡ್‌ಪತಿ 18 ಆವೃತ್ತಿಯಲ್ಲಿ 1 ಕೋಟಿ ರೂಪಾಯಿ ಗೆದ್ದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಭೂಷಣ್ ಠಾಕರೆ ಪಾತ್ರರಾಗಿದ್ದಾರೆ. ಇದೇ ಸೋಮವಾರ, ನವೆಂಬರ್ 23ರಂದು ಅವರು ಮತ್ತೆ ಹಾಟ್‌ಸೀಟ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಕಾರ್ಯಕ್ರಮದ ಅತ್ಯುನ್ನತ ಬಹುಮಾನ ಮೊತ್ತವಾದ 7 ಕೋಟಿ ರೂಪಾಯಿಯ ಪ್ರಶ್ನೆಯನ್ನು ಅವರು ಎದುರಿಸಲಿದ್ದಾರೆ.

ಅಮಿತಾಭ್ ಬಚ್ಚನ್ ಮುಂದೆ ಕಷ್ಟದ ಕಥೆ ಬಿಚ್ಚಿಟ್ಟ ಭೂಷಣ್

ನಿರೂಪಕ ಅಮಿತಾಭ್ ಬಚ್ಚನ್ ಅವರೊಂದಿಗಿನ ಮಾತುಕತೆಯ ವೇಳೆ ಭೂಷಣ್, ಕಳೆದ ಒಂದೂವರೆ ವರ್ಷದಿಂದ ತಾವು ಮನೆಗೆ ಹೋಗಿಲ್ಲ ಎಂಬ ವಿಚಾರವನ್ನು ಹಂಚಿಕೊಂಡರು. ಆರ್ಥಿಕ ಸಂಕಷ್ಟಗಳ ನಡುವೆಯೂ ತಮ್ಮ ಶಿಕ್ಷಣಕ್ಕಾಗಿ ಪೋಷಕರು ಪಟ್ಟ ಕಷ್ಟವನ್ನು ಅವರು ನೆನಪಿಸಿಕೊಂಡರು.

ಕುಟುಂಬದ ಬಗ್ಗೆ ಮನಬಿಚ್ಚಿ ಮಾತನಾಡಿದ ಭೂಷಣ್, ಸರ್, ನಾನು ಕಳೆದ 1.5 ವರ್ಷಗಳಿಂದ ಮನೆಗೆ ಹೋಗಿಲ್ಲ ಮತ್ತು ನನಗೀಗ 28 ವರ್ಷ. ನನ್ನ ತಂದೆ-ತಾಯಿ ನನ್ನನ್ನು ತುಂಬಾ ಕಷ್ಟಪಟ್ಟು ಬೆಳೆಸಿದ್ದಾರೆ. ತಂದೆ ಕೂಲಿ ಕೆಲಸ ಮಾಡುತ್ತಿದ್ದರು ಮತ್ತು ಅಮ್ಮನ ಆರೋಗ್ಯ ಸರಿ ಇರುತ್ತಿರಲಿಲ್ಲ, ಅವರಿಗೆ ಅನೇಕ ಶಸ್ತ್ರಚಿಕಿತ್ಸೆಗಳಾಗಿವೆ. ನನ್ನ ತಂದೆ ಕೂಲಿ ಕೆಲಸ ಮಾಡುತ್ತಿದ್ದರೂ, ಆ ಹಣದಲ್ಲೇ ನನ್ನ ತಾಯಿಯನ್ನು ನೋಡಿಕೊಂಡರು ಮತ್ತು ಅದೇ ಹಣದಲ್ಲಿ ನನ್ನ ಓದು-ಬರಹವನ್ನು ಪೂರೈಸಿದರು. ಆದರೆ ನಾನು ಇನ್ನೂ ನೆಲೆಗೊಂಡಿಲ್ಲ ಎಂದು ಅನಿಸಿದಾಗ, ಜೀವನದಲ್ಲಿ ಏನಾದರೂ ಒಳ್ಳೆಯದು ಸಾಧಿಸಿದ ಮೇಲೆಯೇ ಮನೆಗೆ ವಾಪಸ್ ಬರುತ್ತೇನೆ ಎಂದು ತಂದೆ-ತಾಯಿಗೆ ಹೇಳಿದ್ದೆ ಎಂದರು.

ಕೂಲಿ ಕೆಲಸದಿಂದ ದೂರವಿಟ್ಟ ತಂದೆಯ ನಿರ್ಧಾರ!

ಆರ್ಥಿಕವಾಗಿ ಕಷ್ಟದಲ್ಲಿದ್ದರೂ ತಮ್ಮನ್ನು ಕೂಲಿ ಕೆಲಸದಿಂದ ದೂರವಿಟ್ಟು ಓದಿನತ್ತ ಗಮನಹರಿಸುವಂತೆ ತಂದೆ ಪ್ರೋತ್ಸಾಹಿಸಿದ ರೀತಿಯನ್ನು ಭೂಷಣ್ ಸ್ಮರಿಸಿದರು. ಅಮಿತಾಭ್ ಬಚ್ಚನ್ ಅವರ ಬಳಿ ಮಾತನಾಡುತ್ತಾ, ಸರ್, ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೆ, ಆದರೆ ಆ ಸಮಯದಲ್ಲಿ ನನಗೆ ಪ್ರವೇಶ ದೊರೆಯಲಿಲ್ಲ. ಹಾಗಾಗಿ ಮನೆಯಲ್ಲಿ ಕುಳಿತು ಓದುತ್ತಿದ್ದೆ. ನನ್ನ ತಂದೆ ಕೂಲಿ ಕೆಲಸ ಮಾಡುತ್ತಿದ್ದರೂ, ನೀನೂ ಇದೇ ಕೆಲಸ ಮಾಡು ಎಂದು ಎಂದಿಗೂ ಒತ್ತಾಯಿಸಲಿಲ್ಲ. ನಾನು ಬರೀ ಮನೆಯಲ್ಲಿ ಕುಳಿತು ಓದುತ್ತಿದ್ದಾಗ, ನಾನೂ ಏನಾದರೂ ಕೆಲಸ ಮಾಡಬೇಕು ಎನಿಸಿತು. ಅದಕ್ಕಾಗಿ ಊರಿನ ನದಿಯಲ್ಲಿ ಕೆಲಸ ಮಾಡಲು ಹೋದೆ, ಆದರೆ ಅದು ನನ್ನ ತಂದೆಗೆ ಇಷ್ಟವಾಗಲಿಲ್ಲ. ಮನೆಯಲ್ಲಾದರೂ ಕುಳಿತುಕೋ ಅಥವಾ ನಿನ್ನ ಓದನ್ನಾದರೂ ಪೂರೈಸು ಎಂದು ತಂದೆ ಹೇಳಿದರೇ ಹೊರತು, ನನ್ನನ್ನು ಎಂದಿಗೂ ಕೂಲಿ ಕೆಲಸ ಮಾಡಲು ಬಿಡಲಿಲ್ಲ ಎಂದು ವಿವರಿಸಿದರು.

7 ಕೋಟಿ ರೂಪಾಯಿಯ ಪ್ರಶ್ನೆಯತ್ತ ಎಲ್ಲರ ಚಿತ್ತ

ಬಿಡಿಗಾಸಿನೊಂದಿಗೆ ಮುಂಬೈಗೆ ಬಂದು, ಕೌನ್ ಬನೇಗಾ ಕರೋಡ್‌ಪತಿ ಸೀಸನ್ 18ರ ಅತಿದೊಡ್ಡ ಪ್ರಶ್ನೆಯವರೆಗೆ ತಲುಪಿರುವ ಭೂಷಣ್ ತುಂಬಾ ದೂರ ಕ್ರಮಿಸಿದ್ದಾರೆ. ಕಾರ್ಯಕ್ರಮದ ಅತ್ಯುನ್ನತ ಬಹುಮಾನದ ನಡುವೆ ಈಗ 7 ಕೋಟಿ ರೂಪಾಯಿಯ ಪ್ರಶ್ನೆ ಮಾತ್ರ ಇದೆ. ಈ ಪ್ರಶ್ನೆಗೆ ಉತ್ತರಿಸಿ ಗೆದ್ದರೆ, ಪೋಷಕರಿಗೆ ನೀಡಿದ ಮಾತನ್ನು ಉಳಿಸಿಕೊಂಡಂತಾಗುತ್ತದೆ ಮತ್ತು ಅವರ ತ್ಯಾಗಕ್ಕೆ ಸಾರ್ಥಕತೆ ಸಿಗುತ್ತದೆ. ಅಂತಿಮ ಪ್ರಶ್ನೆಗೆ ಅವರು ಉತ್ತರಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ(ಏಜೆನ್ಸೀಸ್​).