ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಮತ್ತೆ 'ಸ್ಯಾಂಡ್‌ಪೇಪರ್ ಗೇಟ್' ಸದ್ದು: ಖವಾಜಾ, ವಾರ್ನರ್‌ಗೆ ಬಿಗ್​ ಶಾಕ್​ ನೀಡಿದ ಫಾಕ್ಸ್ ಸ್ಪೋರ್ಟ್ಸ್! | Ball Tampering Controversy

ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಮತ್ತೆ 'ಸ್ಯಾಂಡ್‌ಪೇಪರ್ ಗೇಟ್' ಸದ್ದು: ಖವಾಜಾ, ವಾರ್ನರ್‌ಗೆ ಬಿಗ್​ ಶಾಕ್​ ನೀಡಿದ ಫಾಕ್ಸ್ ಸ್ಪೋರ್ಟ್ಸ್! | Ball Tampering Controversy
Published on: 

ಸಿಡ್ನಿ: 2018ರ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬಾಲ್ ಟ್ಯಾಂಪರಿಂಗ್ (Ball Tampering Controversy) ವಿವಾದ ಮತ್ತೊಮ್ಮೆ ಭುಗಿಲೆದ್ದಿರುವ ಬೆನ್ನಲ್ಲೇ, ಆಸ್ಟ್ರೇಲಿಯಾದ ಪ್ರಮುಖ ಕ್ರೀಡಾ ಪ್ರಸಾರ ವಾಹಿನಿ ಫಾಕ್ಸ್ ಸ್ಪೋರ್ಟ್ಸ್, ಮಾಜಿ ಆರಂಭಿಕ ಬ್ಯಾಟರ್‌ಗಳಾದ ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಅವರನ್ನು ತಮ್ಮ ಕ್ರಿಕೆಟ್ ಕಾಮೆಂಟರಿ ತಂಡದಿಂದ ತಾತ್ಕಾಲಿಕವಾಗಿ ಕೈಬಿಟ್ಟಿದೆ.

ಈ ನಿರ್ಧಾರದಿಂದಾಗಿ ಆಸ್ಟ್ರೇಲಿಯಾದ ಈ ಇಬ್ಬರು ಮಾಜಿ ದಿಗ್ಗಜರು ಮುಂದಿನ ಕೆಲವು ವಾರಗಳ ಕಾಲ ವಾಹಿನಿಯ ಕ್ರಿಕೆಟ್ ಪ್ರಸಾರದಿಂದ ದೂರ ಉಳಿಯಲಿದ್ದು, ಮುಂಬರುವ ಬಿಗ್ ಬ್ಯಾಷ್ ಲೀಗ್ ಅಥವಾ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ವೇಳೆಗೆ ಇವರು ಮತ್ತೆ ಕಾಮೆಂಟರಿ ಬಾಕ್ಸ್‌ಗೆ ಮರಳಲಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅವರ ಒತ್ತಡ ನಮಗೆ ಅರ್ಥವಾಗುತ್ತದೆ!

ಸ್ಟೀವ್ ಕ್ರಾಲಿಫಾಕ್ಸ್ ಸ್ಪೋರ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ಸ್ಟೀವ್ ಕ್ರಾಲಿ ಅವರು ಕೋಡ್ ಸ್ಪೋರ್ಟ್ಸ್​​ಗೆ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದು, ಇಬ್ಬರೂ ಮಾಜಿ ಆಟಗಾರರ ಮೇಲಿರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಮತ್ತು ವಾಹಿನಿಯು ತನ್ನ ಕ್ರಿಕೆಟ್ ಪ್ರಸಾರದ ಗುಣಮಟ್ಟದತ್ತ ಸಂಪೂರ್ಣ ಗಮನಹರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಉಸ್ಮಾನ್ ಮತ್ತು ಡೇವಿಡ್​ ಇಬ್ಬರಿಗೂ ಮುಂದಿನ ಕೆಲವು ವಾರಗಳ ಕಾಲ ನಮ್ಮ ಪ್ರಸಾರದಿಂದ ವಿಶ್ರಾಂತಿ ನೀಡಲಾಗಿದೆ ಎಂದು ಕ್ರಾಲಿ ತಿಳಿಸಿದ್ದಾರೆ. ಕಾಮೆಂಟರಿ ತಂಡದಲ್ಲಿ ಭಿನ್ನಾಭಿಪ್ರಾಯಗಳಿಗೆ ಮುಕ್ತ ಅವಕಾಶವಿದ್ದರೂ, ನಿರಂತರವಾಗಿ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳಿಂದಾಗಿ ಖವಾಜಾ ಮತ್ತು ವಾರ್ನರ್ ಅವರಿಗೆ ತಮ್ಮ ಪ್ರಸಾರದ ಜವಾಬ್ದಾರಿಗಳತ್ತ ಏಕಾಗ್ರತೆ ವಹಿಸಲು ಕಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Also Read
ಸ್ಮಿತ್, ವಾರ್ನರ್ ಅಷ್ಟೇ ಅಲ್ಲ.....8 ವರ್ಷದ ಬಳಿಕ ಬಾಲ್ ಟ್ಯಾಂಪರಿಂಗ್ ಸತ್ಯ ಬಿಚ್ಚಿಟ್ಟ ಉಸ್ಮಾನ್ ಖವಾಜಾ | Usman Khawaja
ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಮತ್ತೆ 'ಸ್ಯಾಂಡ್‌ಪೇಪರ್ ಗೇಟ್' ಸದ್ದು: ಖವಾಜಾ, ವಾರ್ನರ್‌ಗೆ ಬಿಗ್​ ಶಾಕ್​ ನೀಡಿದ ಫಾಕ್ಸ್ ಸ್ಪೋರ್ಟ್ಸ್! | Ball Tampering Controversy

ನಾವು ಯಾವಾಗಲೂ ನಮ್ಮ ಕಾಮೆಂಟರಿ ತಂಡದ ಎಲ್ಲಾ ಸದಸ್ಯರನ್ನು ಬೆಂಬಲಿಸುತ್ತೇವೆ. ಆದರೆ ಪ್ರತಿಯೊಂದು ಹೊಸ ಹೇಳಿಕೆಗೂ ಪ್ರತಿಕ್ರಿಯಿಸುವಂತೆ ಅವರ ಮೇಲಿರುವ ಒತ್ತಡವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಪರಿಸ್ಥಿತಿ ಹೀಗೆಯೇ ಮುಂದುವರಿಯುತ್ತಿರುವಾಗ ಆಟದ ಮೇಲೆ ಗಮನ ಕೇಂದ್ರೀಕರಿಸುವುದು ಅವರಿಗೆ ಕಷ್ಟವಾಗುತ್ತದೆ ಮತ್ತು ಇಬ್ಬರೂ ಕಾಮೆಂಟೇಟರ್‌ಗಳನ್ನು ಅಂತಹ ಇಕ್ಕಟ್ಟಿನ ಪರಿಸ್ಥಿತಿಗೆ ದೂಡುವುದು ನ್ಯಾಯಸಮ್ಮತವಲ್ಲ ಎಂದು ನಾವು ಭಾವಿಸುತ್ತೇವೆ. ನಮ್ಮ ವೀಕ್ಷಕರಿಗೆ ಅತ್ಯುತ್ತಮ ಕ್ರಿಕೆಟ್ ಪ್ರಸಾರವನ್ನು ನೀಡುವುದೇ ನಮ್ಮ ಮುಖ್ಯ ಗುರಿಯಾಗಿದ್ದು, ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಕ್ರಾಲಿ ಸ್ಪಷ್ಟಪಡಿಸಿದ್ದಾರೆ.

ವಿವಾದಕ್ಕೆ ಮೂಲ ಕಾರಣವೇನು?

ಉಸ್ಮಾನ್ ಖವಾಜಾ ಅವರ ಇತ್ತೀಚಿನ ಆತ್ಮಚರಿತ್ರೆ ಸಬ್ರ್ ಬಿಡುಗಡೆಯಾದ ನಂತರ 2018ರ ದಕ್ಷಿಣ ಆಫ್ರಿಕಾ ಪ್ರವಾಸದ ಬಾಲ್ ಟ್ಯಾಂಪರಿಂಗ್ ಹಗರಣದ ಕುರಿತು ಹೊಸ ವಿವಾದ ಭುಗಿಲೆದ್ದಿದೆ. ಕೇಪ್ ಟೌನ್ ಟೆಸ್ಟ್‌ನಲ್ಲಿ ಸ್ಯಾಂಡ್‌ಪೇಪರ್ ಬಳಸಿ ಚೆಂಡನ್ನು ವಿರೂಪಗೊಳಿಸಿದ ವಿಚಾರ ತಂಡದಲ್ಲಿದ್ದ ಪ್ರತಿಯೊಬ್ಬ ಆಟಗಾರನಿಗೂ ಮತ್ತು ಸಿಬ್ಬಂದಿಗೂ ತಿಳಿದಿತ್ತು ಎಂದು ಖವಾಜಾ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಕೂಡ ದನಿಗೂಡಿಸಿದ್ದಾರೆ. ಆದರೆ, ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ವೇಗಿ ಜೋಶ್ ಹೇಜಲ್‌ವುಡ್ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಆಸ್ಟ್ರೇಲಿಯಾ ಕ್ರಿಕೆಟ್ ವಲಯದಲ್ಲಿ ತೀವ್ರ ಬಿರುಕು ಮೂಡಿಸಿದೆ(ಏಜೆನ್ಸೀಸ್​).