ಕೇರಳದಲ್ಲಿ ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ತಡೆ 
ದೇಶ

ಕೇರಳದಲ್ಲಿ ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ತಡೆ: ಎರುಮಲೈಯಲ್ಲಿ ಪೊಲೀಸರ ವಿರುದ್ಧ ಕನ್ನಡಿಗರ ಪ್ರತಿಭಟನೆ! Ayyappa Devotees

ಪ್ರಮುಖ ಮುಖ್ಯಾಂಶಗಳು

  • ಜನವರಿ ಮಾಸದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಕೇರಳ ಪ್ರವಾಸ ಮಾಡುತ್ತಾರೆ
  • ಕರ್ನಾಟಕದಿಂದಲೂ ಭಾರಿ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ತೆರಳುತ್ತಾರೆ
  • ಪ್ರತಿ ವರ್ಷ ಯಾವುದೇ ಅಡೆತಡೆ ಇಲ್ಲದೇ ಸಾಗುತ್ತಿದ್ದ ಕನ್ನಡಿಗರ ಶಬರಿಮಲೆ ಯಾತ್ರೆಗೆ ಈಗ ವಿಘ್ನ ಎದುರಾಗಿದೆ
  • ಕೇರಳ ಪೊಲೀಸರು ಶಬರಿಮಲೆಗೆ ಬರುತ್ತಿರುವ ಕರ್ನಾಟಕ ನೋಂದಣಿ ವಾಹನಗಳನ್ನು ತಡೆಯುತ್ತಿದ್ದಾರೆ
ಕೊಚ್ಚಿ: ಜನವರಿ ಮಾಸದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ( Ayyappa Devotees ) ಕೇರಳ ಪ್ರವಾಸ ಮಾಡುತ್ತಾರೆ. ಕರ್ನಾಟಕದಿಂದಲೂ ಭಾರಿ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ತೆರಳುತ್ತಾರೆ. ಪ್ರತಿ ವರ್ಷ ಯಾವುದೇ ಅಡೆತಡೆ ಇಲ್ಲದೇ ಸಾಗುತ್ತಿದ್ದ ಕನ್ನಡಿಗರ ಶಬರಿಮಲೆ ಯಾತ್ರೆಗೆ ಈ ವರ್ಷ ವಿಘ್ನ ಎದುರಾಗಿದೆ. ಕೇರಳ ಪೊಲೀಸರು ಕರ್ನಾಟಕ ನೋಂದಣಿ ವಾಹನಗಳನ್ನು ತಡೆಯುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರು ಅಲ್ಲಿನ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹೌದು, ಶಿವಮೊಗ್ಗ ಹಾಗೂ ಭದ್ರಾವತಿಯಿಂದ ಶಬರಿಮಲೆಗೆ ಹೊರಟ್ಟಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳನ್ನು ಎರುಮಲೈನಲ್ಲಿ ಕೇರಳ ಪೊಲೀಸರು ತಡೆದಿದ್ದಾರೆ. ಇದರಿಂದ ಅಸಮಾಧಾನಗೊಂಡ ಕರ್ನಾಟಕದ ಭಕ್ತರು ಸ್ಥಳದಲ್ಲೇ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಎರುಮಲೈ, ಶಬರಿಮಲೆ ದೇವಸ್ಥಾನದಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಇಲ್ಲಿಂದಾಚೆಗೆ ಪ್ರಯಾಣಿಸಲು ಕರ್ನಾಟಕ ನೋಂದಣಿಯ ವಾಹನಗಳಿಗೆ ಅನುಮತಿ ನೀಡುತ್ತಿಲ್ಲ. ಇದರ ಬದಲಾಗಿ, ಕೇವಲ ಕೇರಳ ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಕರ್ನಾಟಕದ ವಾಹನಗಳನ್ನು ದೇವಾಲಯದಿಂದ ದೂರದಲ್ಲಿ ಏಕೆ ತಡೆಯುತ್ತಿದ್ದೀರಿ ಎಂದು ಕೇರಳ ಪೊಲೀಸರ ವಿರುದ್ಧ ಕರ್ನಾಟಕದ ಭಕ್ತರು ಬೇಸರ ವ್ಯಕ್ತಪಡಿಸಿ, ವಾಗ್ವಾದ ನಡೆಸಿದ್ದಾರೆ.
ಜನವರಿಯಲ್ಲಿ ಅತಿ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಗೆ ಆಗಮಿಸುವುದರಿಂದ ಎರುಮಲೈ, ಪಂಬಾ ಅಥವಾ ಚಾರಣ ಮಾರ್ಗಗಳ ಬಳಿ ದಟ್ಟಣೆಯನ್ನು ತಡೆಗಟ್ಟಲು ಅಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಕರ್ನಾಟಕದ ಭಕ್ತರೊಂದಿಗೆ ವಾಗ್ವಾದದ ಸಮಯದಲ್ಲಿ ಕೇರಳ ಹೈಕೋರ್ಟ್​ನಿಂದಲೇ ಇಂಥದ್ದೊಂದು ಆದೇಶ ಇದೆ ಎಂಬ ಪ್ರಸ್ತಾಪವನ್ನು ಕೇರಳ ಪೊಲೀಸರು ಮಾಡಿದ್ದಾರೆ. ಸದ್ಯ ಎರುಮಲೈನಲ್ಲಿ ಕನ್ನಡಿಗರು ಮತ್ತು ಕೇರಳ ಪೊಲೀಸರ ನಡುವಿನ ವಾಗ್ವಾದ ನಡೆಯುತ್ತಿದ್ದು, ಭಕ್ತರು ಅಲ್ಲಿನ ಪೊಲೀಸರ ವಿರುದ್ಧ ಧರಣಿ ಕುಳಿತಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.