Nepal Floods | ನೇಪಾಳ-ಟಿಬೆಟ್‌ನಲ್ಲಿ ಪ್ರವಾಹ ಸಿಲುಕಿದ ಕನ್ನಡಿಗರ ಪತ್ತೆಗೆ ಬಿಗ್ ಪ್ಲಾನ್
ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಮತ್ತು ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ, ಅಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ತಕ್ಷಣದ ಕ್ರಮಕ್ಕೆ ಮುಂದಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ನಾಗರಿಕರ ಸಂಪೂರ್ಣ ಮಾಹಿತಿಯನ್ನು ಕ್ರೋಢೀಕರಿಸಲು ಸರ್ಕಾರವು ಅಧಿಕೃತ ಗೂಗಲ್ ಫಾರ್ಮ್ ಲಿಂಕ್ ಬಿಡುಗಡೆ ಮಾಡಿದೆ.
ಕೈಲಾಶ ಮಾನಸಸರೋವರ ಯಾತ್ರೆಗೆ ತೆರಳಿದವರು ಅಥವಾ ಪ್ರವಾಸಕ್ಕಾಗಿ ನೇಪಾಳ ಹಾಗೂ ಟಿಬೆಟ್ ಗಡಿ ಭಾಗಗಳಿಗೆ ತೆರಳಿ ಪ್ರವಾಹದ ಸಿಲುಕಿಕೊಂಡಿರುವ ಪ್ರವಾಸಿಗರು, ಅವರ ಸಂಬಂಧಿಕರು ಹಾಗೂ ಪ್ರವಾಸ ಆಯೋಜಿಸಿದವರು ಈ ಫಾರ್ಮ್ ಮೂಲಕ ತಕ್ಷಣವೇ ವಿವರಗಳನ್ನು ಹಂಚಿಕೊಳ್ಳುವಂತೆ ಕೋರಲಾಗಿದೆ. ಸಂತ್ರಸ್ತರ ಹೆಸರು, ಸಂಪರ್ಕ ಸಂಖ್ಯೆ, ಪ್ರಸ್ತುತ ಇರುವ ಸ್ಥಳ, ಪಾಸ್‌ಪೋರ್ಟ್ ವಿವರಗಳು ಮತ್ತು ತುರ್ತು ಸಂಪರ್ಕ ಸಂಖ್ಯೆಗಳನ್ನು ಈ ಫಾರ್ಮ್‌ನಲ್ಲಿ ಭರ್ತಿ ಮಾಡಬಹುದಾಗಿದೆ.
ಹೀಗೆ ಸಂಗ್ರಹಿಸಲಾಗುವ ಮಾಹಿತಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಬೀಜಿಂಗ್‌ನಲ್ಲಿರುವ (ಚೀನಾ) ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದರ ಮೂಲಕ ಸಂಕಷ್ಟದಲ್ಲಿರುವ ಕನ್ನಡಿಗರನ್ನು ಪತ್ತೆ ಹಚ್ಚಿ, ಸೂಕ್ತ ರಕ್ಷಣೆ, ವೈದ್ಯಕೀಯ ನೆರವು ಹಾಗೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಕೋಶ ಯೋಜಿಸಿದೆ.
- ಸಹಾಯವಾಣಿ ಸಂಖ್ಯೆಗಳು: 1070 / 080-22253707
- ಇ-ಮೇಲ್ ವಿಳಾಸ: seockarnataka@gmail.com
ನೇಪಾಳದಲ್ಲಿ ಭೋಟಿ ಕೋಶಿ ನದಿ ಉಕ್ಕಿ ಹರಿದ ಪರಿಣಾಮ ಹಲವಾರು ಜಿಲ್ಲೆಗಳು ಜಲಾವೃತಗೊಂಡಿದ್ದು, ಅನೇಕ ವಿದೇಶಿಯರು ಹಾಗೂ ಭಾರತೀಯ ಯಾತ್ರಿಕರು ಸಂಪರ್ಕವಿಲ್ಲದೆ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕನ್ನಡಿಗರು ಅಲ್ಲಿ ಸಿಲುಕಿದ್ದರೆ, ಅವರ ಕುಟುಂಬಸ್ಥರು ಧೈರ್ಯಗೆಡದೆ ತಕ್ಷಣವೇ ಸರ್ಕಾರದ ಗೂಗಲ್ ಫಾರ್ಮ್ ಲಿಂಕ್ ಮೂಲಕ ಮಾಹಿತಿ ದಾಖಲಿಸಿ, ರಾಜ್ಯ ಸರ್ಕಾರದ ತುರ್ತು ಹೆಲ್ಪ್‌ಲೈನ್ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.